ಗದಗ(ಜೂ.03): ದೇಶದ ಕೊರೋನಾ ಹಾಸ್ಟ್‌ಸ್ಪಾಟ್‌ ಎಂದೇ ಪರಿಗಣಿಸಲ್ಪಡುವ ಮುಂಬೈ ನಗರದಿಂದ ಮಂಗಳವಾರ ಬೆಳಗ್ಗೆ ಗದಗ ನಗರಕ್ಕೆ ಗದಗ- ಮುಂಬೈ -ಗದಗ ರೈಲಿನ ಮೂಲಕ 116 ಪ್ರಯಾಣಿಕರು ಆಗಮಿಸಿದ್ದು, ಆಗಮಿಸಿದ ಎಲ್ಲರನ್ನು ಸರ್ಕಾರದ ನಿಯಮದಂತೆ ಜಿಲ್ಲಾಡಳಿತ ಕ್ವಾರಂಟೈನ್‌ ಮಾಡಿದೆ. ಆದರೂ ಜಿಲ್ಲೆಯಾದ್ಯಂತ ಕೊರೋನಾ ಹೆಚ್ಚಳದ ಆತಂಕ ತೀವ್ರವಾಗಿದೆ.

ಮುಂಬೈನಿಂದ ಸೋಮವಾರ ರಾತ್ರಿ ಹೊರಟ ರೈಲು ಸೊಲ್ಲಾಪುರ, ವಿಜಯಪುರ, ಬಾಗಲಕೋಟೆ ಮಾರ್ಗವಾಗಿ ಬೆಳಗ್ಗೆ 11.45ಕ್ಕೆ ಗದಗ ರೈಲು ನಿಲ್ದಾಣಕ್ಕೆ ಆಗಮಿಸಿತು. ಮಹಿಳೆಯರು, ಮಕ್ಕಳು ಸೇರಿದಂತೆ ಲಾಕ್‌ಡೌನ್‌ ಪೂರ್ವದಲ್ಲಿ ಅನಿವಾರ್ಯ ಕಾರಣಗಳಿಗಾಗಿ ಮುಂಬೈಗೆ ತೆರಳಿ ಅಲ್ಲಿಯೇ ಲಾಕ್‌ಡೌನ್‌ ಆಗಿದ್ದ ಮಹಿಳೆಯರು, ಮಕ್ಕಳು, ವಯೋವೃದ್ಧರು ಗದುಗಿಗೆ ಬಂದು ತಲುಪಿದರು.

ಬಸ್‌ ಪ್ರಯಾಣಕ್ಕೆ ಜನರ ಹಿಂದೇಟು: KSRTCಗೆ ಭಾರಿ ನಷ್ಟ..!

ಆರೋಗ್ಯ ತಪಾಸಣೆ:

ರೈಲು ನಿಲ್ದಾಣಕ್ಕೆ ಆಗಮಿಸಿದ 116 ಪ್ರಯಾಣಿಕರನ್ನು ನಿಲ್ದಾಣದ ಆವರಣದಲ್ಲಿಯೇ ಥರ್ಮಲ್‌ ಸ್ಕ್ರೀನಿಂಗ್‌ ಮಾಡುವ ಜತೆಗೆ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿದ ಆರೋಗ್ಯ ಇಲಾಖೆ ಸಿಬ್ಬಂದಿ, ವಯೋವೃದ್ಧರು ಸೇರಿದಂತೆ ಆರೋಗ್ಯ ಸಮಸ್ಯೆ ಇರುವವರನ್ನು ತಕ್ಷಣವೇ ಪ್ರತ್ಯೇಕ ವಾಹನದಲ್ಲಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿ, ಅವರ ಗಂಟಲು ದ್ರವ ತಪಾಸಣೆಗೆ ಕ್ರಮ ಕೈಗೊಂಡರು. ಇನ್ನುಳಿದವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಖಾಸಗಿ ವಾಹನಗಳ ಮೂಲಕ ರವಾನಿಸಲಾಯಿತು.

ಬಾಣಂತಿ ಆಗಮನ

ಒಂದು ತಿಂಗಳ ಹಸುಗೂಸಿನೊಂದಿಗೆ ಆಗಮಿಸಿದ ಬಾಣಂತಿ-ಮಗುವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ವಿಶೇಷ ಕಾಳಜಿಯೊಂದಿಗೆ ಕ್ವಾರಂಟೈನ್‌ಗೆ ರವಾನಿಸಿದರು. 1 ತಿಂಗಳು ಕೂಸು ಹಾಗೂ 6 ವರ್ಷದ ಮಗುವಿನೊಂದಿಗೆ ಆಗಮಿಸಿರುವ ಬಾಣಂತಿಗೆ ಒಂದು ತಿಂಗಳ ಹಿಂದೆ ಮುಂಬೈನಲ್ಲಿ ಹೆರಿಗೆ ಆಗಿತ್ತು. ಲಾಕ್‌ಡೌನ್‌ನಿಂದಾಗಿ ತವರಿಗೆ ಬರಲು ಆಗದೇ ಪರದಾಡುತ್ತಿದ್ದರು. ಈಗ ರೈಲು ಪ್ರಾರಂಭವಾದ ಹಿನ್ನೆಲೆಯಲ್ಲಿ ಗದಗ ನಗರದ ವರೆಗೆ ಆಗಮಿಸಿದ್ದು, ಇಲ್ಲಿಯೇ 7 ದಿನಗಳ ಕ್ವಾರಂಟೈನ್‌ ಮುಗಿಸಿದ ನಂತರ ತವರು ಮನೆಯಾದ ದಾವಣಗೆರೆ ತೆರಳಬೇಕಿದೆ.

ಕ್ವಾರಂಟೈನ್‌ನಲ್ಲಿರಲು ಒಪ್ಪದ ವಿದ್ಯಾರ್ಥಿನಿ:

ಮುಂಬೈನಿಂದ ಆಗಮಿಸಿದ ಗಂಗಾವತಿಯ ಯುವತಿಯೋರ್ವಳು ಅಧಿಕಾರಿಗಳೊಂದಿಗೆ ನಾನು ಗದಗ ನಗರದಲ್ಲಿ ಕ್ವಾರಂಟೈನ್‌ ಆಗುವುದಿಲ್ಲ. ನನ್ನನ್ನು ನಮ್ಮೂರಾದ ಗಂಗಾವತಿಗೆ ಕಳಿಸಿ ಎಂದು ರೈಲು ನಿಲ್ದಾಣದ ಮುಂದೆ ಹೈಡ್ರಾಮಾ ಮಾಡಿದಳು. ನಾನೊಬ್ಬಳೇ ಕ್ವಾರಂಟೈನ್‌ನಲ್ಲಿ ಹೇಗೆ ಇರಲು ಸಾಧ್ಯ? ಕುಟುಂಬದೊಂದಿಗೆ ಬಂದಿದ್ದರೆ ನಾನು ಇಲ್ಲಿಯೇ ಕ್ವಾರಂಟೈನಲ್ಲಿ ಇರಬಹುದಿತ್ತು. ಆದರೆ, ಈಗ ಕುಟುಂಬ ಬಿಟ್ಟು ನಾನೊಬ್ಬಳೇ ಹೇಗೆ ಇರಲು ಸಾಧ್ಯ? ಸ್ವಲ್ಪ ದಿನಗಳ ಹಿಂದೆ ನಮ್ಮ ತಂದೆ ನಿಧನರಾಗಿದ್ದಾರೆ. ಆವಾಗಲೂ ಊರಿಗೆ ಹೋಗಲು ಆಗಲಿಲ್ಲ. ಈಗಲಾದರೂ ಊರಿಗೆ ಕಳಿಸಿ, ಗದಗನಿಂದ ಗಂಗಾವತಿಗೆ ನಮ್ಮ ಸ್ವಂತ ಕಾರಿನಲ್ಲಿ ತೆರಳುತ್ತೇನೆ, ಗಂಗಾವತಿಯಲ್ಲಿಯೇ ಕ್ವಾರಂಟೈನ್‌ ಮಾಡಿ ಎಂದು ರಂಪಾಟವನ್ನೇ ಸೃಷ್ಟಿ ಮಾಡಿದಳು.

ಕೆಲವರಿಂದಲೂ ಹೈ ಡ್ರಾಮಾ

ಗದಗ ರೈಲು ನಿಲ್ದಾಣಕ್ಕೆ ಆಗಮಿಸಿದ ವೇಳೆ ರೈಲು ನಿಲ್ದಾಣದ ಮುಂದೆ ಪ್ರಯಾಣಿಕನೋರ್ವನು ನಾನು ಕ್ವಾರಂಟೈನ್‌ ಆಗೋದಿಲ್ಲ ಎಂದು ಹಠ ಹಿಡಿದ. ಇದರಿಂದ ಅಧಿಕಾರಿಗಳಿಗೂ ಸಾಕಷ್ಟುಸಮಯ ಗೊಂದಲ ಸೃಷ್ಟಿಮಾಡಿದ. ನೋಡಲು ಮಾನಸಿಕ ಅಸ್ವಸ್ಥನಂತೆ ವರ್ತನೆ ಮಾಡುತ್ತಿದ್ದ ಅವನಿಗೆ ಕೊನೆಗೆ ಲಾಠಿ ಏಟು ನೀಡಿ, ಆ್ಯಂಬುಲೆನ್ಸ್‌ ಮೂಲಕ ಕ್ವಾರಂಟೈನ್‌ ಕೇಂದ್ರಕ್ಕೆ ರವಾನೆ ಮಾಡಿದರು.

ಮುಂಬೈನಿಂದ ಬಂದಿರುವ ಪ್ರಯಾಣಿಕರ ಬಗ್ಗೆ ರೈಲ್ವೆ ಇಲಾಖೆ ಮೊದಲು ನೀಡಿದ ಮಾಹಿತಿ ಆಧಾರದಲ್ಲಿ 127 ಜನ ಬರಬೇಕಿತ್ತು. ಆದರೆ, 116 ಬಂದಿದ್ದಾರೆ. ಅವರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಬಸ್‌ಗಳ ಮೂಲಕ 4 ಹಾಸ್ಟೆಲ್‌ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತಿದೆ. ಸದ್ಯಕ್ಕೆ ಬೇರೆ ಜಿಲ್ಲೆಯವರು ಎಷ್ಟಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ, 7 ದಿನ ಮಾತ್ರ ಗದಗನಲ್ಲಿಯೇ ಅವರು ಕ್ವಾರಂಟೈನ್‌ ಆಗಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಹೇಳಿದ್ದಾರೆ.