Asianet Suvarna News Asianet Suvarna News

ನವೆಂಬರ್ ವೇಳೆಗೆ 110 ಹಳ್ಳಿಗಳಿಗೆ ಪೈಪ್ ಲೈನ್

ಶೀಘ್ರದಲ್ಲಿ 110 ಹಳ್ಳಿಗಳು ಕಾವೇರಿ ನೀರು ಪಡೆಯಲಿದೆ. ಪೈಪ್ ಲೈನ್ ಕಾಮಗಾರಿ ಮುಕ್ತಾಯವಾಗಿ ನವೆಂಬರ್ ವೇಳೆಗೆ ನೀರು ಪೂರೈಕೆಯಾಗಿದೆ. 

110 Villages  to Get Cauvery Water In November
Author
Bengaluru, First Published Aug 19, 2019, 8:09 AM IST
  • Facebook
  • Twitter
  • Whatsapp

ಮೋಹನ ಹಂಡ್ರಂಗಿ

 ಬೆಂಗಳೂರು [ಆ.19]:  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಸೇರಿದ 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಕೈಗೊಂಡಿರುವ ಕೊಳವೆ ಮಾರ್ಗ (ಪೈಪ್‌ಲೈನ್‌) ಕಾಮಗಾರಿ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಇದೇ ನವೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ಐದನೇ ಹಂತದಿಂದ ಕುಡಿಯುವ ನೀರು ಪೂರೈಸಲು ಜಲಮಂಡಳಿ ಕಳೆದ 2017ರ ಮೇ ತಿಂಗಳಿನಲ್ಲಿ ಈ ನೀರು ಪೂರೈಕೆಗೆ ಅಗತ್ಯವಾದ ಪೈಪ್‌ ಲೈನ್‌ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿತ್ತು. ಒಟ್ಟು 2,661 ಕಿ.ಮೀ. ಪೈಪ್‌ಲೈನ್‌ ಪೈಕಿ ಈವರೆಗೆ 2,521 ಕಿ.ಮೀ. ಪೈಪ್‌ ಲೈನ್‌ ಅಳವಡಿಸಲಾಗಿದ್ದು ಶೇ.94.76ರಷ್ಟುಕಾಮಗಾರಿ ಮುಗಿದಿದೆ. ಇನ್ನು ಉಳಿದಿರುವ 140 ಕಿ.ಮೀ. ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಭರದಿಂದ ಸಾಗಿದ್ದು, ಇದೇ ನವೆಂಬರ್‌ ಅಂತ್ಯದೊಳಗೆ ಮುಕ್ತಾಯವಾಗಲಿದೆ ಎಂದು ಜಲಮಂಡಳಿ ಯೋಜನೆ ವಿಭಾಗದ ಮುಖ್ಯ ಇಂಜಿನಿಯರ್‌ ಬಿ.ಶಿವಪ್ರಸಾದ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಬೊಮ್ಮನಹಳ್ಳಿ ವಲಯ ವ್ಯಾಪ್ತಿ ದೊಡ್ಡದು:

ಈ ಪೈಪ್‌ ಲೈನ್‌ ಅಳವಡಿಕೆ ಕಾಮಗಾರಿ ಕೈಗೊಳ್ಳಲು 110 ಹಳ್ಳಿಗಳನ್ನು ಐದು ವಲಯಗಳಾಗಿ ವಿಂಗಡಿಸಲಾಗಿದೆ. ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಮಹದೇವಪುರ, ಬ್ಯಾಟರಾಯನಪುರ ಹಾಗೂ ಬೊಮ್ಮನಹಳ್ಳಿ ಎಂದು ಐದು ವಲಯಗಳಾಗಿ ವಿಂಗಡಿಸಲಾಗಿದೆ. ಈ ಐದರ ಪೈಕಿ ಬೊಮ್ಮನಹಳ್ಳಿ ವಲಯ ದೊಡ್ಡ ವಲಯವಾಗಿದ್ದು, 788 ಕಿ.ಮೀ. ಪೈಪ್‌ ಲೈನ್‌ ಅಳವಡಿಸಲಾಗುತ್ತಿದೆ. ಪ್ರತಿ ವಲಯಕ್ಕೂ ಪ್ರತ್ಯೇಕ ಟೆಂಡರ್‌ ಕರೆದು ಕಾಮಗಾರಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಐದು ವಲಯಗಳಲ್ಲಿ ಈ ಪೈಪ್‌ ಲೈನ್‌ ಅಳವಡಿಕೆ ಕಾಮಗಾರಿಯನ್ನು ಬರೋಬ್ಬರಿ 982.77 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ರಾಜರಾಜೇಶ್ವರಿನಗರ ವಲಯದಲ್ಲಿ 67.27 ಕೋಟಿ ರು., ದಾಸರಹಳ್ಳಿ 166.39 ಕೋಟಿ ರು., ಮಹದೇವಪುರ 247.36 ಕೋಟಿ ರು., ಬ್ಯಾಟರಾಯನಪುರ 177.22 ಕೋಟಿ ರು. ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ 324.54 ಕೋಟಿ ರು. ವೆಚ್ಚದಲ್ಲಿ ಪೈಪ್‌ ಅಳವಡಿಸಲಾಗುತ್ತಿದೆ.

  
110 ಹಳ್ಳಿಗಳ ವ್ಯಾಪ್ತಿಯಲ್ಲಿ ಪೈಪ್‌ ಲೈನ್‌ ಅಳವಡಿಕೆ ಕಾಮಗಾರಿ ಮಾಹಿತಿ

ವಲಯ ಅಳವಡಿಕೆ (ಕಿ.ಮೀ.)    ಬಾಕಿ(ಕಿ.ಮೀ)    ವೆಚ್ಚ(ಕೋಟಿ .)

ರಾಜರಾಜೇಶ್ವರಿನಗರ    181.9    12    67.27

ದಾಸರಹಳ್ಳಿ    437    1.8    166.39

ಮಹದೇವಪುರ    526    44    247.36

ಬ್ಯಾಟರಾಯನಪುರ    589    60    177.22

ಬೊಮ್ಮನಹಳ್ಳಿ    788    22    324.54

ಒಟ್ಟು    2661    140    982.77
 
ಕಾವೇರಿ 5ನೇ ಹಂತ: ನವೆಂಬರ್‌ಗೆ ಕಾಮಗಾರಿ

110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ 5,500 ಕೋಟಿ ರು. ವೆಚ್ಚದ ಕಾವೇರಿ ಐದನೇ ಹಂತದ ಯೋಜನೆ ಸಂಬಂಧ ಒಂಬತ್ತು ಪ್ಯಾಕೇಜ್‌ಗಳ ಪೈಕಿ ಏಳು ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಗುತ್ತಿಗೆದಾರರ ಆಯ್ಕೆ ಮುಗಿಯಲಿದ್ದು, ನವೆಂಬರ್‌ ಅಂತ್ಯದ ವೇಳೆಗೆ ಕಾಮಗಾರಿಗಳು ಆರಂಭವಾಗುವ ನಿರೀಕ್ಷೆಯಿದೆ. ಇದು 90 ತಿಂಗಳ ಯೋಜನೆಯಾಗಿದ್ದು, 2023ಕ್ಕೆ ಕಾಮಗಾರಿ ಮುಕ್ತಾಯವಾಗಲಿದೆ.

110ರ ಪೈಕಿ 41 ಹಳ್ಳಿ ನೋಟಿಫೈ :  ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಬಹುತೇಕ ಮುಕ್ತಾಯದ ಹಂತ ತಲುಪಿರುವುದರಿಂದ 110 ಹಳ್ಳಿಗಳ ಪೈಕಿ 41 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ನೋಟಿಫೈ ಮಾಡಿದೆ. ಆ ಭಾಗದ ಸಾರ್ವಜನಿಕರು ಹೊಸದಾಗಿ ನೀರಿನ ಸಂಪರ್ಕ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಿದೆ. ಪ್ರಸ್ತುತ ಜಲಮಂಡಳಿಯು ನಗರಕ್ಕೆ ದಿನಕ್ಕೆ 1450 ದಶ ಲಕ್ಷ ಲೀಟರ್‌ ನೀರು ಪೂರೈಕೆ ಮಾಡುತ್ತಿದೆ. ಈ ನೀರಿನಲ್ಲೇ ಕೆಲ ಭಾಗವನ್ನು ಈ 41 ಹಳ್ಳಿಗಳಿಗೂ ಪೂರೈಸಲು ಮುಂದಾಗಿದೆ.

 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಸಂಬಂಧ ಕೈಗೊಂಡಿರುವ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಇದರ ಜತೆಗೆ 11 ಓವರ್‌ ಹೆಡ್‌ ಟ್ಯಾಂಕ್‌, ಐದಾರು ನೆಲಮಟ್ಟದ ಜಲಾಗಾರ ನಿರ್ಮಾಣ ಕಾಮಗಾರಿಗೂ ಭರದಿಂದ ಸಾಗಿದೆ. 2020ರ ಡಿಸೆಂಬರ್‌ ವೇಳೆಗೆ ಮುಗಿಸುವ ಗುರಿ ಹಾಕಿಕೊಳ್ಳಲಾಗಿದೆ.

-ಬಿ.ಶಿವಪ್ರಸಾದ್‌, ಮುಖ್ಯ ಎಂಜಿನಿಯರ್‌, ಯೋಜನೆ ವಿಭಾಗ, ಜಲಮಂಡಳಿ.

Follow Us:
Download App:
  • android
  • ios