ರಾಜ್ಯದಲ್ಲಿ ನೇರ ಪಾವತಿ ಪಡೆಯುತ್ತಿರುವ 11,133 ಪೌರ ಕಾರ್ಮಿಕರ ಕಾಯಂ
ಮೊದಲ ಹಂತದಲ್ಲಿ ರಾಜ್ಯದಲ್ಲಿ ನೇರಪಾವತಿ ಪಡೆಯುತ್ತಿರುವ 11,133 ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗುತ್ತಿದ್ದು, 2ನೇ ಹಂತದಲ್ಲಿ 12,867 ಪೌರ ಕಾರ್ಮಿಕರನ್ನು ಖಾಯಂ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ತಿಳಿಸಿದರು.
ಮೈಸೂರು : ಮೊದಲ ಹಂತದಲ್ಲಿ ರಾಜ್ಯದಲ್ಲಿ ನೇರಪಾವತಿ ಪಡೆಯುತ್ತಿರುವ 11,133 ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗುತ್ತಿದ್ದು, 2ನೇ ಹಂತದಲ್ಲಿ 12,867 ಪೌರ ಕಾರ್ಮಿಕರನ್ನು ಖಾಯಂ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೌರಕಾರ್ಮಿಕರ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2ನೇ ಹಂತದ ಪೌರ ಕಾರ್ಮಿಕರ ಖಾಯಂ ಮಾಡಲು ಈಗಾಗಲೇ ಆರ್ಥಿಕ ಇಲಾಖೆ ಅನುಮತಿ ಪಡೆಯಲಾಗಿದೆ. ಇದು ಒಂದು ಐತಿಹಾಸಿಕ ನಿರ್ಧಾರ. ಮುಖ್ಯಮಂತ್ರಿಗಳು ಪೌರ ಕಾರ್ಮಿಕರ ಕಾಯಂಗೆ ಎಷ್ಟೆಅನುದಾನ ಅಗತ್ಯವಿದ್ದರೂ ಒದಗಿಸುವುದಾಗಿ ತಿಳಿಸಿರುತ್ತಾರೆ ಎಂದರು.
ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಗುತ್ತಿಗೆ ಆದಾರವನ್ನು ತೆಗೆದು ನೇರಪಾವತಿಯ ಯೋಜನೆಯಡಿಗೆ ತರುವ ಉದ್ದೇಶ ಹೊಂದಲಾಗಿದೆ. ಮುಖ್ಯಮಂತ್ರಿಗಳು ರಾಜ್ಯದಲ್ಲಿನ ಪೌರ ಕಾರ್ಮಿಕರಿಗೆ ನೇರಪಾವತಿ ಮಾಡುವ ಸಂಬಂಧ ಹಾಗೂ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸುವ ಕುರಿತು ಸಮಿತಿ ರಚಿಸಿದ್ದಾರೆ. ಈ ಸಮಿತಿಯಲ್ಲಿ ನಾನು ಸಹ ಇದ್ದು ಈಗಾಗಲೇ 3 ವರದಿಗಳನ್ನು ನೀಡಲಾಗಿದೆ. ಪೌರ ಕಾರ್ಮಿಕರಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಪ್ರತಿ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ಮಾಸ್ಟರ್ ಹೆಲ್ತ್ ಚೆಕ್‌ಅಪ್ ಮಾಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಇಡೀ ರಾಜ್ಯದಲ್ಲಿ ವಿವಿಧ ಇಲಾಖೆಗಳು, ಬಸ್ ಸ್ಟಾಂಡ್‌ಗಳು ಹಾಗೂ ಖಾಸಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಸರ್ವೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸರ್ವೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪೌರ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯುವಲ್ಲಿ ಹಿಂದೆ ಉಳಿದಿದ್ದು, ಇವರ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ಎಸ್ಸೆಸ್ಸೆಲ್ಸಿಯಿಂದ ಪದವಿ ಶಿಕ್ಷಣದವರೆಗೆ ಉತ್ತಮ ಅಂಕ ಪಡೆದ ಪೌರಕಾರ್ಮಿಕರ ಮಕ್ಕಳಿಗೆ ಪ್ರತಿ ಜಿಲ್ಲೆಯಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.
ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಅಗತ್ಯ ಜಾಗಗಳನ್ನು ಗುರುತಿಸಲಾಗುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಲು ನನ್ನನ್ನು ಒಳಗೊಂಡಂತೆ ಗುಜರಾತ್‌ಗೆ 15 ಜನರ ತಂಡ ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಪೌರ ಕಾರ್ಮಿಕರನ್ನು ಒಳಗೊಂಡಂತೆ ಅಧ್ಯಯನ ನಡೆಸಲು ಸಿಂಗಾಪುರಕ್ಕೆ ಭೇಟಿ ನೀಡಲಾಗಿತ್ತು. ಪೌರ ಕಾರ್ಮಿಕರಿಗೆ ಸ್ವಚ್ಚತಾ ಪರಿಕರ ನೀಡಲಾಗುತ್ತಿದೆ. ಆದರೆ ಇದರ ಬಳಕೆ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಪೌರ ಕಾರ್ಮಿಕರಿಗೆ ಅನುಕೂಲವಾದ ಪ್ರದೇಶವಾರು ಸ್ವಚ್ಛತಾ ಪರಿಕರಗಳನ್ನು ನೀಡಲು ತಜ್ಞರ ಸಮಿತಿ ವರದಿ ಪಡೆದು ಪರಿಕರಗಳ ತಯಾರಿಕೆಗೆ ಕಾರ್ಯಾದೇಶ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
2000ನೇ ಇಸವಿಯಲ್ಲಿಯೇ ಮ್ಯಾನುಯಲ್ ಸ್ಕ್ಯಾವೆಂಜರ್ ನಿಷೇದ ಕಾಯ್ದೆ ಜಾರಿಗೆ ಬಂದಿದ್ದರೂ, ರಾಜ್ಯದಲ್ಲಿ ಇನ್ನೂ 7070 ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಇದ್ದಾರೆ. ಇವರಲ್ಲಿ 2000 ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಉಳಿದವರ ಸರ್ವೇ ಮಾಡಿ ಪನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಹಿಂದೆ ಪೌರ ಕಾರ್ಮಿಕರಿಗೆ ತಿಂಡಿ ವ್ಯವಸ್ಥೆಗೆ ತಲಾ . 20 ನೀಡಲಾಗುತ್ತಿತ್ತು. ಇದನ್ನು . 35ಕ್ಕೆ ಹೆಚ್ಚಿಸಲಾಗಿದೆ. ಪೌರಕಾರ್ಮಿಕರ ಮಕ್ಕಳಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹಾಗೂ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲಾಗುತ್ತಿದೆ. ಆಯೋಗದಲ್ಲಿ 350 ಪ್ರಕರಣಗಳಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಪೌರ ಕಾರ್ಮಿಕರ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ದೊರೆಯದೆ ಇದ್ದಲ್ಲಿ, ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳನ್ನು ನಿಯಮಾನುಸಾರ ಪರಿಗಣಿಸಲಾಗುವುದು. ಪೌರಕಾರ್ಮಿಕರಿಗೆ ಸಕಾಲದಲ್ಲಿ ಸಂಬಂಳ ಹಾಗೂ ಇಎಸ್‌ಐ ಮತ್ತು ಪಿಎಫ್ ಪಾವತಿಸಬೇಕು. ಪೌರ ಕಾರ್ಮಿಕರಿಗೆ ಎಲ್ಲಾ ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ ವಿಶ್ರಾಂತಿಗೃಹ ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪೌರಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು. ಪೌರ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ನೀಡುವ ವ್ಯವಸ್ಥೆ ಮಾಡಬೇಕು. ಅಂಬೇಡ್ಕರ್ ಭವನ, ಬಾಬು ಜಗನ್‌ಜೀವನ್ ರಾಮ್ ಭವನಗಳಲ್ಲಿ ಪೌರ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಸಮಾರಂಭ ಮಾಡಲು ಸಮುದಾಯ ಭವನ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಪುರಸಭೆ ನಗರಸಭೆಗಳಿಗೆ ಭೇಟಿ ನೀಡಿ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಪೌರ ಕಾರ್ಮಿಕರಿಗೆ ನೀಡಿರುವ ಸುರಕ್ಷತಾ ಪರಿಕರಗಳನ್ನು ಬಳಕೆ ಮಾಡಬೇಕು ಎಂದು ಅವರು ತಿಳಿಸಿದರು.
ನಗರ ಪಾಲಿಕೆ ವ್ಯಾಪ್ತಿಯ ಪೌರಕಾರ್ಮಿಕರಿಗೆ ನಿಗದಿತವಾಗಿ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಈ ಸಂಬಂಧ ಪ್ರತಿಷ್ಠಿತ ಆಸ್ಪತ್ರೆಗಳನ್ನು ಟೈ ಅಪ್ ಮಾಡಿಕೊಳ್ಳಲಾಗಿದೆ. 158 ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಆಯ್ಕೆ ಮಾಡಿದ್ದು, ಇವರಲ್ಲಿ 60 ಜನರಿಗೆ ಸ್ವತಃ ನಿವೇಶನ ಇಲ್ಲ. ಇವರನ್ನು ಆಶ್ರಯ ಮನೆ ಯೋಜನೆಯಡಿ ಪರಿಗಣಿಸಲಾಗುತ್ತಿದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ಇದ್ದ 205 ಪೌರ ಕಾರ್ಮಿಕರ ಹುದ್ದೆಗೆ ಅರ್ಜಿ ಅಹ್ವಾನಿಸಿದ್ದು, ಇದರಲ್ಲಿ 170 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಆಕ್ಷೇಪಣೆಗಳನ್ನು ಅಹ್ವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರುಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ ಇದ್ದರು.