ಬೆಂಗಳೂರಲ್ಲಿ ಒಂದೇ ದಿನ 108 ‘ನಮ್ಮ ಕ್ಲಿನಿಕ್’ ಶುರು
ಮಹಾಲಕ್ಷ್ಮಿಪುರದಲ್ಲಿ ಬೊಮ್ಮಾಯಿ ಉದ್ಘಾಟನೆ, ಇನ್ನು 135 ಕ್ಲಿನಿಕ್‌ಗಳು ಕಾರ್ಯಾರಂಭ ಮಾತ್ರ ಬಾಕಿ, ರಾಜ್ಯದಲ್ಲಿ ಸೇವೆ ಆರಂಭಿಸಿದ ಕ್ಲಿನಿಕ್‌ಗಳ ಸಂಖ್ಯೆ 222ಕ್ಕೆ ಹೆಚ್ಚಳ, ನಮ್ಮ ಕ್ಲಿನಿಕ್ ಕ್ರಾಂತಿಕಾರಿ: ಸಿಎಂ ಬೊಮ್ಮಾಯಿ.
ಬೆಂಗಳೂರು(ಫೆ.08): ಬಡ ಜನರಿಗೆ ಉತ್ತಮ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ನೀಡಲು ರಾಜ್ಯಾದ್ಯಂತ ಸ್ಥಾಪಿಸಲು ಉದ್ದೇಶಿಸಲಾಗಿರುವ 438 ‘ನಮ್ಮ ಕ್ಲಿನಿಕ್’ಗಳ ಪೈಕಿ ಬೆಂಗಳೂರಿನಲ್ಲಿ 108 ಕ್ಲಿನಿಕ್‌ಗಳನ್ನು ಮಂಗಳವಾರ ಒಂದೇ ದಿನ ಲೋಕಾರ್ಪಣೆ ಮಾಡಲಾಯಿತು. ಇದರೊಂದಿಗೆ ಈ ಹಿಂದೆ ರಾಜ್ಯದಲ್ಲಿ ಉದ್ಘಾಟನೆ ಆದ 114 ಕ್ಲಿನಿಕ್ ಸೇರಿದಂತೆ ‘ನಮ್ಮ ಕ್ಲಿನಿಕ್’ಗಳ ಸಂಖ್ಯೆ 222ಕ್ಕೇರಿದೆ. ಬೆಂಗಳೂರಲ್ಲಿ 135 ಸೇರಿ ರಾಜ್ಯದಲ್ಲಿ 216 ಕ್ಲಿನಿಕ್ ಸ್ಥಾಪನೆ ಬಾಕಿ ಉಳಿದಂತಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾಲಕ್ಷ್ಮಿಪುರದಲ್ಲಿ 1 ‘ನಮ್ಮ ಕ್ಲಿನಿಕ್’ಗೆ ಚಾಲನೆ ನೀಡಿದರು. 107 ನಮ್ಮ ಕ್ಲಿನಿಕ್‌ಗಳನ್ನು ಇದೇ ವೇಳೆ ನಗರದ ವಿವಿಧ ಭಾಗಗಳಲ್ಲಿ ಉದ್ಘಾಟಿಸಲಾಯಿತು.
ಈ ವೇಳೆ ಮಾತನಾಡಿದ ಬೊಮ್ಮಾಯಿ, ‘ಬಡ ಜನರಿಗೆ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ವ್ಯವಸ್ಥೆಯನ್ನು ಮರು ಸ್ಥಾಪಿಸುವ ದೃಷ್ಟಿಯಲ್ಲಿ ನಮ್ಮ ಕ್ಲಿನಿಕ್ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಹಿಂದೆ ಸಣ್ಣ ಆರೋಗ್ಯ ಸಮಸ್ಯೆಗೆ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುವ ವೈದ್ಯರು ಸಿಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಆ ರೀತಿಯ ಕ್ಲಿನಿಕ್ ಹಾಗೂ ವೈದ್ಯರು ಸಿಗುತ್ತಿಲ್ಲ. ಸಣ್ಣ ಆರೋಗ್ಯ ಸಮಸ್ಯೆ ಉಂಟಾದರೂ ದೊಡ್ಡ ಮತ್ತು ಕಾರ್ಪೋರೆಟ್ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಬಡವರಿಗೆ ಚಿಕಿತ್ಸೆ ಕೊಡಿಸಲು ರಾಜ್ಯದಲ್ಲಿ ಒಟ್ಟು 438 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ’ ಎಂದು ತಿಳಿಸಿದರು.
Tumakur : ಜನರ ಆರೋಗ್ಯಕ್ಕೆ ನಮ್ಮ ಕ್ಲಿನಿಕ್ ಪ್ರಾರಂಭ
‘ನಗರ ಪ್ರದೇಶದ ತಳ ಹಂತದ ಆರೋಗ್ಯ ಸೇವೆಯನ್ನು ಇನ್ನಷ್ಟುಗಟ್ಟಿಗೊಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ಮೂಲಕ ಸಮುದಾಯ ಆರೋಗ್ಯ ಸುಧಾರಿಸುವುದಕ್ಕೆ ದೊಡ್ಡ ಕ್ರಮವನ್ನು ತೆಗೆದುಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ ಹಿಂದಿನ ಯಾವುದೇ ಸರ್ಕಾರ ಮಾಡದಷ್ಟುಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ನಮ್ಮದು ಸೂಕ್ಷ್ಮಾತಿಸೂಕ್ಷ್ಮ ಇರುವ ಸರ್ಕಾರವಾಗಿದೆ. ಡಯಾಲಿಸಿಸ್ ಹಾಗೂ ಕೀಮೋಥೆರಪಿಯ ಸೈಕಲ್ ದಿನಕ್ಕೆ 30 ಸಾವಿರದಿಂದ 60 ಸಾವಿರಕ್ಕೆ ಏರಿಸಿ 12 ಹೊಸ ಕೇಂದ್ರ ತೆರೆಯಲಾಗಿದೆ. ಹುಟ್ಟು ಕಿವುಡರಿಗೆ ಸುಮಾರು 500 ಕೋಟಿ ರು. ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರ ಕಣ್ಣುಗಳ ತಪಾಸಣೆ ಮಾಡಿ ಕನ್ನಡಕ ನೀಡುವ ಯೋಜನೆ ಅನುಷ್ಠಾನಗೊಳಿಸಿದೆ. ಆ್ಯಸಿಡ್ ದಾಳಿಗೊಳಗಾದವರಿಗೆ ಸಹಾಯಧನವನ್ನು ಮೂರರಿಂದ ಹತ್ತು ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ’ ಎಂದರು.
‘ನಮ್ಮ ಕ್ಲಿನಿಕ್, ನೂರು ಪಿಎಚ್‌ಸಿ ಕೇಂದ್ರಗಳನ್ನು ಸಿಹೆಚ್‌ಸಿ ಕೇಂದ್ರಗಳನ್ನಾಗಿ ಉನ್ನತೀಕರಣಕ್ಕೆ ಅಂಗಾಂಗ ಕಸಿಗೆ ಒತ್ತು ನೀಡಲಾಗಿದೆ. ಮಹಿಳೆಯರಿಗಾಗಿ ಆಯುಷ್ಮತಿ ವಿಶೇಷ ಕ್ಲಿನಿಕ್ ಸ್ಥಾಪಿಸಲಾಗಿದೆ. ಆರೋಗ್ಯದ ಯಾವುದೇ ಕ್ಷೇತ್ರವನ್ನೂ ಬಿಡದೆ ಅಭಿವೃದ್ಧಿಗೊಳಿಸಲಾಗಿದೆ’ ಎಂದು ವಿವರಿಸಿದರು.
ಈವರೆಗೆ 222 ಕ್ಲಿನಿಕ್ ಸ್ಥಾಪನೆ, ಇನ್ನು 216 ಬಾಕಿ
ಒಟ್ಟಾರೆ ರಾಜ್ಯದಲ್ಲಿ 150 ಕೋಟಿ ರು. ವೆಚ್ಚದಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಪೈಕಿ ವಾರ್ಡ್‌ಗೆ ಒಂದರಂತೆ ಬೆಂಗಳೂರಿನಲ್ಲಿ 243 ಹಾಗೂ ಕರ್ನಾಟಕದ ಇತರ ನಗರ/ಪಟ್ಟಣಗಳಲ್ಲಿ 205 ಕ್ಲಿನಿಕ್‌ಗಳು ಇರಲಿವೆ. ರಾಜ್ಯದ ಮೊದಲ ನಮ್ಮ ಕ್ಲಿನಿಕ್ ಅನ್ನು ಮುಖ್ಯಮಂತ್ರಿ ಬೊಮ್ಮಾಯಿ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಡಿ. 14ರಂದು ಉದ್ಘಾಟಿಸಿದ್ದರು. ಆಗ ಒಟ್ಟಾರೆ 114 ನಮ್ಮ ಕ್ಲಿನಿಕ್‌ಗಳು ರಾಜ್ಯಾದ್ಯಂತ ಆರಂಭ ಆಗಿದ್ದವು. ಆಗ ಬೆಂಗಳೂರಿನಲ್ಲಿ ಸಾಂಕೇತಿಕವಾಗಿ 2 ಕ್ಲಿನಿಕ್ ಉದ್ಘಾಟಿಸಲಾಗಿತ್ತು.
ಮಂಗಳವಾರ ಆ 2 ಕ್ಲಿನಿಕ್ ಸೇರಿದಂತೆ 108 ಕ್ಲಿನಿಕ್‌ಗಳನ್ನು ಲೋಕಾರ್ಪಣೆ ಮಾಡಲಾಯಿತು. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಒಟ್ಟಾರೆ 222 ಕ್ಲಿನಿಕ್ ಸ್ಥಾಪನೆ ಆದಂತಾಗಿದೆ.ಬೆಂಗಳೂರಿನಲ್ಲಿ 135 ಹಾಗೂ ರಾಜ್ಯದಲ್ಲಿ 81 ಸೇರಿದಂತೆ 216 ಕ್ಲಿನಿಕ್ ಸ್ಥಾಪನೆ ಬಾಕಿ ಉಳಿದಂತಾಗಿದೆ.
ಯಾವ ಕಾಯಿಲೆಗೆ ನಮ್ಮ ಕ್ಲಿನಿಕ್?
ಸಾಮಾನ್ಯ ನೆಗಡಿ, ಜ್ವರ, ಸಕ್ಕರೆ ಕಾಯಿಲೆ, ಬಿಪಿ ತಪಾಸಣೆಯ ಜೊತೆಗೆ ವಿವಿಧ ಪರೀಕ್ಷೆಗಳನ್ನು ಸಹ ನಮ್ಮ ಕ್ಲಿನಿಕ್‌ಗಳಲ್ಲಿ ಮಾಡಲಾಗುತ್ತದೆ. ಉಚಿತ ಔಷಧಿ, ಹೆಚ್ಚಿನ ಚಿಕಿತ್ಸೆ ಅಗತ್ಯವಾದರೆ, ಟೆಲಿಕಮ್ಯುನಿಕೇಷನ್ ಮೂಲಕ ಪರಿಣತ ವೈದ್ಯರಿಂದ ಸಲಹೆ ಪಡೆಯುವುದು ಮತ್ತು ಉನ್ನತ ದರ್ಜೆಯ ಆಸ್ಪತ್ರೆಗೆ ಶಿಫಾರಸು ಮಾಡುವ ವ್ಯವಸ್ಥೆಯನ್ನು ನಮ್ಮ ಕ್ಲಿನಿಕ್‌ಗಳಲ್ಲಿ ಕಲ್ಪಿಸಲಾಗಿದೆ. ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಕ್ಲಿನಿಕ್ ತೆರೆದಿರುತ್ತವೆ.
ಬ್ರ್ಯಾಂಡ್ ಬೆಂಗಳೂರಿಗೆ ಬೊಮ್ಮಾಯಿ ಕರೆ
ಬೆಂಗಳೂರು: ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ರಸ್ತೆಗಳ ನಿರ್ಮಾಣವಾಗಿದೆ. ಬಹಳಷ್ಟುಅಭಿವೃದ್ಧಿಯಾಗುತ್ತಿರುವುದನ್ನು ಬಿಂಬಿಸುವ ಮೂಲಕ ಬೆಂಗಳೂರು ಬ್ರ್ಯಾಂಡ್ ಅನ್ನು ಹೆಚ್ಚಿಸುವ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮ ಕ್ಲಿನಿಕ್ ಉದ್ಘಾಟಿಸಿದ ಬಳಿಕ ಕರೆ ನೀಡಿದರು.
Namma Clinic: ಬಡವರ ಆರೋಗ್ಯ ರಕ್ಷಣೆಗೆ ನಮ್ಮ ಕ್ಲಿನಿಕ್: ಸಚಿವ ಸುಧಾಕರ್
ನಾಯಂಡಹಳ್ಳಿ ರಿಂಗ್ ರಸ್ತೆಗೆ ಪುನೀತ್ ಹೆಸರು ನಾಮಕರಣ
ನಾಯಂಡಹಳ್ಳಿಯಿಂದ ಬನ್ನೇರುಘಟ್ಟರಸ್ತೆಯ ಮೆಗಾಸಿಟಿ ಮಾಲ್ ಜಂಕ್ಷನ್‌ವರೆಗಿನ 12 ಕಿ.ಮೀ. ಉದ್ದದ ಹೊರವರ್ತುಲ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹೆಸರನ್ನು ನಾಮಕರಣ ಮಾಡಲಾಗಿದೆ. ಇದೇ ವೇಳೆ, ಪುನೀತ್ ಹೆಸರಿನಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರೇಸ್‌ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು: ಸಿಎಂ
ನಗರದ ರೇಸ್‌ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಅಂಬರೀಷ್ ಹೆಸರನ್ನು ನಾಮಕರಣ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದ್ದು ಇದನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ಅಂಬರೀಷ್ ಸ್ಮಾರಕ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.