ಬೆಂಗಳೂರು (ಆ.30):  ನಗರದ ಪಬ್‌ ಮತ್ತು ಡಿಸ್ಕೋಥೆಕ್‌ಗಳಿಗೆ ಬಿಸಿ ಮುಟ್ಟಿಸಿರುವ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು, ಶಬ್ಧ ಮಾಲಿನ್ಯ ಉಂಟು ಮಾಡಿದ ಆರೋಪದ ಮೇರೆಗೆ 107 ಪಬ್‌ ಮತ್ತು ಡಿಸ್ಕೋಥೆಕ್‌ಗಳ ಮನರಂಜನಾ ಪರವಾನಿಗೆಯನ್ನು ರದ್ದುಗೊಳಿಸಿ ಗುರುವಾರ ಮಹತ್ವದ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಪಬ್‌ ಮತ್ತು ಡಿಸ್ಕೋಥೆಕ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಮ್ಯೂಸಿಕ್‌ ಬಳಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್‌, ನಗರ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಮನರಂಜನೆ ಆಯೋಜಿಸುವ ಪಬ್‌ ಮತ್ತು ಹೋಟೆಲ್‌ಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ ಸಿಸಿಬಿ, ಈಗ ನಿಯಮ ಉಲ್ಲಂಘಿಸಿದವರ ಪರವಾನಿಗೆ ರದ್ದುಪಡಿಸಿದ್ದಾರೆ. ಆದರೆ ಅವುಗಳು ಮನರಂಜನೆ ಇಲ್ಲದೆ ವಹಿವಾಟು ಮುಂದುವರೆಸಲು ಅಡ್ಡಿಯಿರುವುದಿಲ್ಲ.

ಇದರಲ್ಲಿ ಬ್ರಿಗೇಡ್‌ ರಸ್ತೆಯ ಗಲ್ಲಜ್‌ರ್‍, ಎಂ.ಜಿ.ರಸ್ತೆ ಆಲೀವ್‌ ಬಾರ್‌, ಹಾರ್ಡ್‌ ರಾಕ್‌, ಸೋಡಾ ಬಾಟಲ್‌, ರೆಸಿಡೆನ್ಸಿ ರಸ್ತೆಯ ಟೈಮ್ಸ್‌ ಬಾರ್‌, ಇಂದಿರಾ ನಗರ, ಮಲ್ಲೇಶ್ವರ, ಕೋರಮಂಗಲ, ಅಶೋಕ ನಗರ, ಆಡುಗೋಡಿ, ಮಡಿವಾಳ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯ ಪ್ರಮುಖ ಪಬ್‌ಗಳ ಮತ್ತು ಡಿಸ್ಕೋಥೆಕ್‌ಗಳಿಗೆ ಬಿಸಿ ತಟ್ಟಿದೆ ಎಂದು ಗೊತ್ತಾಗಿದೆ.

ಪಂಚತಾರಾ ಹೋಟೆಲ್‌ ಹಾಗೂ ಪಬ್‌ಗಳಲ್ಲಿ ಮನರಂಜನೆ ಕಾರ್ಯಕ್ರಮ ಆಯೋಜಿಸುವ ಮುನ್ನ ಪೊಲೀಸ್‌ ಆಯುಕ್ತರ ಅನುಮತಿ ಕಡ್ಡಾಯವಾಗಿದೆ. ಆದರೆ ಕೆಲವು ಪಬ್‌ಗಳು ಹಾಗೂ ಹೋಟೆಲ್‌ಗಳು ಕಾನೂನು ಉಲ್ಲಂಘಿಸಿದ್ದವು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗಿದೆ ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಹೇಳಿದರು.

ಈಗ ಪರವಾನಿಗೆ ರದ್ದುಗೊಳಿಸಿರುವ ಪಬ್‌ ಮತ್ತು ಡಿಸ್ಕೋಥೆಕ್‌ಗಳಲ್ಲಿ ಮದ್ಯ ಮಾರಾಟ ಮತ್ತು ವಹಿವಾಟು ನಿಷೇಧಿಸುವ ಬಗ್ಗೆ ಬಿಬಿಎಂಪಿ ಹಾಗೂ ಅಬಕಾರಿ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ. ಅಕ್ರಮ ಚಟುವಟಿಕೆ ಹಿನ್ನೆಲೆಯಲ್ಲಿ ಪಬ್‌ ಮತ್ತು ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಯಿತು. ಆ ವೇಳೆ ಕೆಲವರು ಅನುಮತಿ ಪಡೆಯದೆ ಲೈವ್‌ ಮ್ಯೂಸಿಕ್‌ ಮತ್ತು ಡಿಸ್ಕೋಥೆಕ್‌ ನಡೆಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದ್ದವು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಉಲ್ಲಂಘಿಸಿದ 107 ಪಬ್‌ ಮತ್ತು ಡಿಸ್ಕೋಥೆಕ್‌ ಪರವಾನಿಗೆ ರದ್ದುಪಡಿಸಲಾಗಿದೆ ಎಂದರು.

ಪರವಾನಿಗೆ ಕಳೆದುಕೊಂಡಿರುವ ಪಬ್‌ಗಳ ಮೇಲೆ ನಿರಂತರ ನಿಗಾವಹಿಸುವಂತೆ ಡಿಸಿಪಿಗಳಿಗೆ ಸೂಚಿಸಲಾಗಿದೆ. ಮತ್ತೆ ಅವುಗಳ ಏನಾದರೂ ಕಾನೂನು ಉಲ್ಲಂಘಿಸಿ ಸಂಗೀತ ಕಾರ್ಯಕ್ರಮ ಆಯೋಜಿಸಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಸಂದೀಪ್‌ ಪಾಟೀಲ್‌ ಎಚ್ಚರಿಕೆ ನೀಡಿದರು.