ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್‌ಗೆ 1,000 ಕೋಟಿ: ಕೇಂದ್ರ ಸಚಿವ ಖೂಬಾ
* ಕಡೇಚೂರ್ ಬಳಿ ಪಾರ್ಕ್ ನಿರ್ಮಾಣಕ್ಕೆ ಕೇಂದ್ರದಿಂದ ಅನುದಾನ
* ರಾಜ್ಯ ಸರ್ಕಾರ ಭೂಮಿ ಕಲ್ಪಿಸಬೇಕು: ಸಚಿವ ಭಗವಂತ ಖೂಬಾ
* ಡಿಸಿ ಕಚೇರಿಯಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣವಾಗಲಿ
ಬೀದರ್(ಆ.18): ಯಾದಗಿರಿಯ ಕಡೇಚೂರ್ ಬಳಿ ಫಾರ್ಮಾ ಪಾರ್ಕ್ ನಿರ್ಮಾಣಕ್ಕೆ ಕೇಂದ್ರದಿಂದ 1 ಸಾವಿರ ಕೋಟಿ, ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ಗೆ 100 ಕೋಟಿ ರು.ಗಳನ್ನು ನೀಡಲಾಗುವುದು ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಇವುಗಳಿಗೆ ಜಮೀನು, ಮೂಲಸೌಲಭ್ಯ ಕಲ್ಪಿಸಬೇಕು. ಬೀದರ್, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಜಿಲ್ಲೆಗಳ 10ರಿಂದ 15ಸಾವಿರ ಎಕರೆ ಜಮೀನಿನಲ್ಲಿ ಪಿಪಿಪಿ ಆಧಾರದಲ್ಲಿ ನಿರ್ಮಾಣವಾಗುವ ಪ್ರತಿ ಸೋಲಾರ್ ಪಾರ್ಕ್ನಿಂದ 12 ಸಾವಿರ ಮೆಗಾ ವ್ಯಾಟ್ ಉತ್ಪಾದನೆಯಾಗಲಿದ್ದು, ಇದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ಹೊಲ ಗದ್ದೆಗಳನ್ನೂ ಗುತ್ತಿಗೆ ಪಡೆಯಲಾಗುತ್ತದೆ. ಪ್ರತಿ ಎಕರೆಗೆ ವಾರ್ಷಿಕ 25 ಸಾವಿರ ರು.ಗಳನ್ನು ನೀಡಲಾಗುತ್ತದೆ ಎಂದರು.
ಸೌರ ವಿದ್ಯುತ್ ಖರೀದಿಗೆ ಸೂಚನೆ:
ಕಟ್ಟಡದ ಛಾವಣಿಯ ಮೇಲ್ಭಾಗದಲ್ಲಿ ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಸರ್ಕಾರ ರಾಜ್ಯಗಳಿಗೆ ವಿದ್ಯುತ್ ಖರೀದಿಯನ್ನು ಕಡ್ಡಾಯಗೊಳಿಸಿ ಆದೇಶಿಸಲಿದ್ದೇವೆ. ಹಾಗೆಯೇ ಜಲಜನಕ ಶಕ್ತಿ ಬಳಕೆಯ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ವಿಶ್ವ ನಾಯಕರಾಗ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವೆ: ಭಗವಂತ ಖೂಬಾ
ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ವಿಭಾಗದ ಕೇಂದ್ರೀಯ ಸಂಸ್ಥೆಯನ್ನು (ಸಿಪೆಟ್) ಕೇಂದ್ರ ಸರ್ಕಾರ ಬೀದರ್ ಜಿಲ್ಲೆಯಲ್ಲಿ ಸ್ಥಾಪಿಸುವದು ಪಕ್ಕಾ. ಈ ಹಿಂದೆ ದಿ.ಅನಂತಕುಮಾರ ಅವರು ಈ ಬಗ್ಗೆ ಘೋಷಣೆ ಮಾಡಿ ಹೋಗಿದ್ದರು. ಆದರೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರ ಸಹಕಾರ ಕೇಂದ್ರಕ್ಕೆ ಸಿಗದೇ ಸಿಪೆಟ್ ಬೇರೆಡೆ ಹೋಗಿತ್ತು. ಅದೇನೇ ಇರಲಿ ಬೀದರ್‌ನಲ್ಲಿ ಮುಂದಿನ ದಿನಗಳಲ್ಲಿ ಸಿಪೆಟ್ ಸ್ಥಾಪಿಸುವದಾಗಿ ಕೇಂದ್ರ ಸಚಿವ ಖೂಬಾ ತಿಳಿಸಿದರು. ಬೀದರ್‌ನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಡಿಸಿ ಕಚೇರಿಯಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣವಾಗಲಿ
ಬೀದರ್ ಜಿಲ್ಲಾ ಸಂಕೀರ್ಣ ಈಗಿರುವ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿಯೇ ನಿರ್ಮಾಣವಾಗಬೇಕು. ಅಂದು ಜನರ ಒತ್ತಾಸೆಯಂತೆ ನಿರ್ಧಾರವಾಗಿದ್ದನ್ನು ಬದಲಿಸೋದು ತಪ್ಪು ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರದ ಸಂಕೀರ್ಣ ಹೃದಯಭಾಗದಲ್ಲಿರಲಿ. ಈ ಹಿಂದೆ ಶಾಸಕ ಖಂಡ್ರೆ ಅವರ ವಿರುದ್ಧ ಆರೋಪ ಮಾಡಿ ನಾವು ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಸಂಕೀರ್ಣ ನಿರ್ಮಾಣದ ನಿರ್ಧಾರವಾಗುವಂತೆ ಮಾಡಿದ್ದೇವೆ. ಇದೀಗ ಹೆಜ್ಜೆ ಹಿಂದಿಡಲ್ಲ. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರೊಂದಿಗೆ ಮಾತನಾಡಿ ಮನವೊಲಿಸುತ್ತೇನೆ ಎಂದರು.