*  ಪ್ರಸ್ತುತ ಕೆಆರ್‌ಎಸ್‌ನಲ್ಲಿ 100.16 ಅಡಿ ನೀರು ಸಂಗ್ರಹ*  ಉತ್ತಮ ಮುಂಗಾರು ಪೂರ್ವ ಮಳೆ ರೈತರ ಮೊಗದಲ್ಲಿ ಮೂಡಿಸಿದ ಮಂದಹಾಸ *  ಜಲಾಶಯದ ಗರಿಷ್ಠ ಮಟ್ಟ 124.80 ಅಡಿ 

ಮಂಡ್ಯ(ಮೇ.18): ಹತ್ತು ವರ್ಷಗಳ ಬಳಿಕ ಬೇಸಿಗೆ ಅವಧಿಯ ಮೇ ತಿಂಗಳಲ್ಲಲಿ ಇದೇ ಮೊದಲ ಬಾರಿಗೆ ಕೃಷ್ಣರಾಜಸಾಗರ ಜಲಾಶಯದಲ್ಲಿ 100 ಅಡಿಗಿಂತ ಹೆಚ್ಚು ನೀರು ಸಂಗ್ರಹವಾಗುವುದರೊಂದಿಗ ದಾಖಲೆ ಸೃಷ್ಟಿಸಿದೆ. ಹಾಲಿ ಅಣೆಕಟ್ಟೆಯಲ್ಲಿ 100.16 ಅಡಿಯಷ್ಟು ನೀರು ಸಂಗ್ರಹವಾಗಿರುವುದರಿಂದ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆ ಸೇರಿದಂತೆ ಹಲವಾರು ತಾಲೂಕುಗಳ ಜನರ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲವೆಂಬ ಆಶಾಭಾವನೆ ಮೂಡಿದೆ.

ಈ ಬಾರಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚು ಸುರಿದಿರುವುದರಿಂದ ಬೇಸಿಗೆ ಬೆಳೆಗಳಿಗೆ ಹೆಚ್ಚು ನೀರಿನ ಬೇಡಿಕೆ ಸೃಷ್ಟಿಯಾಗಲಿಲ್ಲ. ಇದರಿಂದ ಅಣೆಕಟ್ಟೆಯಲ್ಲಿ ಹೆಚ್ಚು ನೀರು ಸಂಗ್ರಹವಾಗುವಂತಾಯಿತು. ಬೆಳೆಗಳಿಗೆ ವರ್ಷಧಾರೆ ಆಸರೆಯಾಗಿದ್ದರಿಂದ ಅಣೆಕಟ್ಟೆಯಿಂದ ನೀರನ್ನು ಬಿಡುಗಡೆ ಮಾಡಲೂ ಇಲ್ಲ. ಉತ್ತಮ ಮುಂಗಾರು ಪೂರ್ವ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು.

KRS Water Level : ಕೆಆರ್‌ಎಸ್‌ನಲ್ಲಿ ದಾಖಲೆ ನೀರು ಸಂಗ್ರಹ

ಕೆಆರ್‌ಎಸ್‌ನಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟದ 10 ವರ್ಷದ ದಾಖಲೆಗಳನ್ನೊಮ್ಮೆ ಅವಲೋಕಿಸಿದರೆ 2013ರ ಏಪ್ರಿಲ್‌ನಲ್ಲಿ ಜಲಾಶಯದ ನೀರಿನ ಮಟ್ಟ64.12 ಅಡಿಗೆ ಕುಸಿದಿತ್ತು. ಆ ಸಮಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಿಸುವಂತಾಗಿತ್ತು.

ಎರಡನೇ ಬಾರಿಗೆ 2017ರ ಮೇ ತಿಂಗಳಲ್ಲಿ ಅಣೆಕಟ್ಟೆಯ ನೀರಿನ ಮಟ್ಟಡೆಡ್‌ ಸ್ಟೋರೇಜ್‌ಗಿಂತಲೂ ಕೆಳ ಹಂತವಾದ 70.03 ಅಡಿ ಹಾಗೂ 2018ರ 70.13 ಅಡಿ ತಲುಪಿ ಆತಂಕ ಮೂಡಿಸಿತ್ತು. ಕೃಷ್ಣರಾಜಸಾಗರದ ಡೆಡ್‌ ಸ್ಟೋರೇಜ್‌ ಹಂತ 74.76 ಅಡಿಯಾಗಿದೆ.

ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದಲ್ಲಿ 100.16 ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯಲ್ಲಿ 22.936 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 87 ಅಡಿಯಷ್ಟುನೀರು ಸಂಗ್ರಹವಾಗಿತ್ತು.

KRS Makes History: ದಾಖಲೆ ಬರೆದ ಜೀವನಾಡಿ ಕೆಆರ್‌ಎಸ್: ರೈತರಲ್ಲಿ ಸಂತಸ!

ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಅಣೆಕಟ್ಟೆಗೆ 2825 ಕ್ಯುಸೆಕ್‌ ಒಳಹರಿವಿದ್ದರೆ, ಜಲಾಶಯದಿಂದ 1437 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ವಿಶ್ವೇಶ್ವರಯ್ಯ ನಾಲೆಗೆ 375 ಕ್ಯುಸೆಕ್‌, ನದಿಗೆ 1012 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 87 ಅಡಿ ನೀರು ದಾಖಲಾಗಿತ್ತು. ಅಂದು ಜಲಾಶಯಕ್ಕೆ 675 ಕ್ಯುಸೆಕ್‌ ಒಳಹರಿವಿದ್ದರೆ, 3743 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿತ್ತು. ಆ ವೇಳೆ ಅಣೆಕಟ್ಟೆಯಲ್ಲಿ 14.226 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಯ ಒಟ್ಟು ಸಂಗ್ರಹಣಾ ಸಾಮರ್ಥ್ಯ 49.452 ಟಿಎಂಸಿ ಅಡಿಗಳಾಗಿತ್ತು.

ವರ್ಷ ನೀರಿನ ಮಟ್ಟ

2012 83.70 ಅಡಿ
2013 64.12 ಅಡಿ
2014 84.27 ಅಡಿ
2015 84.18 ಅಡಿ
2016 79.24 ಅಡಿ
2017 70.03 ಅಡಿ
2018 70.13 ಅಡಿ
2019 82.05 ಅಡಿ
2020 96.28 ಅಡಿ
2021 88.50 ಅಡಿ
2022 100.16 ಅಡಿ

ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ

ಗರಿಷ್ಠ ಮಟ್ಟ- 124.80 ಅಡಿ
ಇಂದಿನ ಮಟ್ಟ- 100.16 ಅಡಿ
ಒಳಹರಿವು - 2825 ಕ್ಯುಸೆಕ್‌
ಹೊರಹರಿವು - 1437 ಕ್ಯುಸೆಕ್‌
ನೀರಿನ ಸಂಗ್ರಹ - 22.936 ಟಿಎಂಸಿ ಅಡಿ