ಹರಪನಹಳ್ಳಿ(ಮೇ.10): ಕೋವಿಡ್‌ ಮೊದಲನೆ ಅಲೆ ಬಂದಾಗ ಮುನ್ನಚ್ಚರಿಕೆ ಕ್ರಮಕೈಗೊಂಡಿದ್ದರೆ ಎರಡನೆ ಅಲೆ ಬರುತ್ತಿರಲಿಲ್ಲ. ಎಲ್ಲೊ ಒಂದು ಕಡೆ ಎಡವಿದ್ದರಿಂದ ಈಗ ಅದರ ಪರಿಣಾಮ ಅನುಭವಿಸುತ್ತಿದ್ದೇವೆ. ಮುಂದೇ ಮೂರನೇ ಅಲೆ ಬರುತ್ತದೆ ಎಂದು ಹೇಳಿದ್ದು ಎದುರಿಸಲು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಹೇಳಿದ್ದಾರೆ.

ಅವರು ಪಟ್ಟಣದ ಮಿನಿವಿಧಾನ ಸೌಧದ ಆವರಣದಲ್ಲಿ ಭಾನುವಾರ ಕೋವಿಡ್‌ ನಿಯಂತ್ರಣ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಪ್ರತಿ ತಾಲೂಕಿನಲ್ಲೂ 100 ಕೋವಿಡ್‌ ಬೆಡ್‌, 10 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗುವುದು. ನಮಗೆ ಸರ್ಕಾರದ ಹಣ ಕಾಯಬೇಕಿಲ್ಲ. ಜಿಲ್ಲಾ ಖನಿಜ ಅನುದಾನವಿದ್ದು ಹಣಕ್ಕೆ ಕೊರತೆ ಇಲ್ಲ. ಔಷಧಿ, ಸಲಕರಣೆಗಳ ಸಮರ್ಪಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜನರೂ ಸಹ ಸಾಕಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ. ಪೊಲೀಸರು ಎಷ್ಟೊಂದು ನಿಭಾಯಿಸುತ್ತಾರೆ. ಒಂದು ಸುಳ್ಳು ಹೇಳಿ ಓಡಾಡುತ್ತಾರೆ. ಜನರಿಗೂ ಜವಾಬ್ದಾರಿ ಬರಬೇಕು ಎಂದ ಅವರು, ವೈದ್ಯರು ಸೇರಿದಂತೆ ಕೊರೋನಾ ವಾರಿಯ​ರ್ಸ್‌ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು. ನಿರ್ಲಕ್ಷ್ಯ ಮಾಡಬೇಡಿ, ಏನಾದರೂ ಕೊರತೆ ಇದ್ದರೆ ತಿಳಿಸಿ ಎಂದು ಅವರು ಹೇಳಿದ್ದಾರೆ.

"

ಜಿಲ್ಲಾಧಿಕಾರಿ ಪವನ್‌ ಕುಮಾರ ಮಲಪಾಟಿ ಮಾತನಾಡಿ, ಹರಪನಹಳ್ಳಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್‌ ಆಸ್ಪತ್ರೆಯನ್ನಾಗಿ ಶೀಘ್ರ ಮಾರ್ಪಾಡಿಸಲಾಗುವುದು. ಇತರ ರೋಗಿಗಳನ್ನು ಫಿವರ್‌ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಲಾಗುವುದು. ಹೋಂ ಐಸೋಲೇಷನ್‌ನಲ್ಲಿ ಇರುವವರ ಬಗ್ಗೆ ಪ್ರತಿ ದಿನ ಆಶಾ ಕಾರ್ಯಕರ್ತರು 2 ಬಾರಿ ಭೇಟಿ ನೀಡಿ ಆರೋಗ್ಯ ವಿಚಾರಿಸಬೇಕು ಎಂದು ಸೂಚಿಸಿದರು.

'ಯಾರೂ ಕೊರೋನಾದಿಂದ ಸತ್ತಿಲ್ಲ'

ಶಾಸಕ ಜಿ. ಕರುಣಾಕರ ರೆಡ್ಡಿ ಮಾತನಾಡಿ, ಹರಪನಹಳ್ಳಿ ತಾಲೂಕಿಗೆ ಅಗತ್ಯ ಔಷಧಿ, ಸಲಕರಣೆಗಳನ್ನು ಒದಗಿಸಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಸಂಸದರಾದ ವೈ. ದೇವೇಂದ್ರಪ್ಪ, ಜಿ.ಎಂ. ಸಿದ್ದೇಶ್ವರ, ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್‌ ಕೋವಿಡ್‌ ನಿಯಂತ್ರಣ ಕುರಿತು ಅನೇಕ ಸಲಹೆಗಳನ್ನು ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ಧನ, ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಸೀಲ್ದಾರ್‌ ಎಲ್‌.ಎಂ. ನಂದೀಶ, ಡಿವೈಎಸ್ಪಿ ಹಾಲಮೂರ್ತಿ ರಾವ್‌, ಟಿಎಚ್‌ಒ ಪಿ.ಕೆ. ವೆಂಕಟೇಶ, ಡಾ. ಶಿವಕುಮಾರ, ಬಿಇಒ ವೀರಭದ್ರಯ್ಯ, ಜಿಪಂ ಸದಸ್ಯರಾದ ಸುವರ್ಣ ಆರುಂಡಿ ನಾಗರಾಜ, ಎಚ್‌.ಬಿ. ಪರಶುರಾಮಪ್ಪ, ಡಾ. ಮಂಜುನಾಥ ಉತ್ತಂಗಿ, ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಸದಸ್ಯೆ ಪ್ರೇಮ ಪಾಲ್ಗೊಂಡಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona