ಬೆಂಗಳೂರು [ಜ.22]:  ಮೂರೂವರೆ ವರ್ಷಗಳ ಹಿಂದೆ ಅಮಾನ್ಯಗೊಂಡ ನೋಟು ಬದಲಾವಣೆ ದಂಧೆಯಲ್ಲಿ ದುಪ್ಪಟ್ಟು ಸಂಪಾದಿಸಬಹುದು ಎಂದು ನಂಬಿಸಿ ಕ್ಯಾಬ್‌ ಚಾಲಕನಿಂದ 10 ಲಕ್ಷ ಹಣ ಪಡೆದು ಟೋಪಿ ಹಾಕಿದ್ದ ಸೌಂದರ್ಯವರ್ಧಕ ವಸ್ತುಗಳ ವ್ಯಾಪಾರಿ ಸೇರಿದಂತೆ ನಾಲ್ವರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌.ಪುರದ ರಾಜೇಂದ್ರ ಪ್ರಸಾದ್‌ ಅಲಿಯಾಸ್‌ ರಾಜೇಂದ್ರ, ವಿಲ್ಸನ್‌ ಗಾರ್ಡನ್‌ನ ಸುರೇಶ್‌ ಕುಮಾರ್‌ ಅಲಿಯಾಸ್‌ ಸುರೇಶ್‌, ನವಾಜ್‌ ಷಾ ಹಾಗೂ ಮೈಸೂರು ರಸ್ತೆಯ ಬ್ಯಾಟರಾಯನಪುರದ ಕೆ.ಸತೀಶ್‌ ಬಂಧಿತರಾಗಿದ್ದು, ಆರೋಪಿಗಳಿಂದ ಅಮಾನ್ಯಗೊಂಡ 500 ಮತ್ತು 1000 ರು. ಮುಖಬೆಲೆಯ 99 ಲಕ್ಷ ರು. ನಗದು ಜಪ್ತಿಯಾಗಿದೆ.

ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಅಶ್ವತ್‌ ಗೌಡ ನೇತೃತ್ವದ ತಂಡ, ಹಣ ಕೊಡುವುದಾಗಿ ಹೇಳಿ ದೂರುದಾರರಿಂದ ಕರೆ ಮಾಡಿಸಿ ಆರೋಪಿಗಳನ್ನು ಸೋಮವಾರ ಖೆಡ್ಡಾಕ್ಕೆ ಕೆಡವಿದ್ದಾರೆ. ಆರೋಪಿಗಳು ಇದೇ ರೀತಿ ನಾಲ್ಕೈದು ಮಂದಿಗೆ ವಂಚಿಸಿರುವ ಬಗ್ಗೆ ಮಾಹಿತಿ ಇದೆ.

ತಲೆಗೆ ಗನ್ ಇಟ್ಟು, ನಗದು, ಮೊಬೈಲ್ ಸಹಿತ ಕಾರನ್ನೇ ಎಗರಿಸಿದ್ರು....

ಕ್ಯಾಬ್‌ ಚಾಲಕ ನಾಗರಾಜ್‌ ಅವರು, ತಮ್ಮ ಕುಟುಂಬದ ಜತೆ ಬಾಗಲೂರು ಕ್ರಾಸ್‌ ಬಳಿ ನೆಲೆಸಿದ್ದಾರೆ. ಎರಡು ತಿಂಗಳ ಹಿಂದೆ ಟ್ರಾವೆಲ್ಸ್‌ ಕೆಲಸದ ನಿಮಿತ್ತ ಮಲ್ಲೇಶ್ವರ 18ನೇ ಕ್ರಾಸ್‌ ಸಮೀಪದ ಟಾಟಾ ಇನ್ಸಿಟಿಟ್ಯೂಟ್‌ಗೆ ಅವರು ತೆರಳಿದ್ದರು. ಕೆಲಸ ಮುಗಿಸಿದ ನಂತರ ಹತ್ತಿರದ ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ ಊಟ ಮಾಡುತ್ತಿದ್ದರು. ಆಗ ರಾಜೇಂದ್ರ, ತಾನಾಗಿಯೇ ನಾಗರಾಜ್‌ ಅವರನ್ನು ಮಾತನಾಡಿಸಿ ಪರಿಚಯಿಸಿಕೊಂಡಿದ್ದಾನೆ. ಲೋಕಾಭಿರಾಮದ ಮಾತುಕತೆ ಬಳಿಕ ನಿಮಗೆ ಕಾರು ಬಾಡಿಗೆ ಕೊಡಿಸುತ್ತೇನೆ ಎಂದು ಹೇಳಿದ ಆರೋಪಿ, ಎರಡ್ಮೂರು ಬಾರಿ ನಾಗರಾಜ್‌ಗೆ ಗ್ರಾಹಕರನ್ನು ಹಿಡಿದುಕೊಟ್ಟಿದ್ದ. ಇದರಿಂದ ರಾಜೇಂದ್ರನ ಮೇಲೆ ನಾಗರಾಜ್‌ಗೆ ವಿಶ್ವಾಸ ಮೂಡಿತ್ತು.

ತರುವಾಯ ಆ ವಿಶ್ವಾಸವನ್ನೇ ಬಳಸಿಕೊಂಡ ರಾಜೇಂದ್ರ, ‘ನನಗೆ ಪರಿಚಯದ ವ್ಯಕ್ತಿ 2016ರಲ್ಲಿ ಅಮಾನ್ಯಗೊಂಡ  500 ಮತ್ತು 1000  ರು. ಮುಖಬೆಲೆಯ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡುತ್ತಾನೆ. ಆತನಿಂದ ಒಂದು ಕೋಟಿ ಮೌಲ್ಯದ ಹಳೆ ನೋಟುಗಳನ್ನು 10 ಲಕ್ಷ ರು. ಖರೀದಿಸಿದರೆ, ನಂತರ ಆತನೇ ಮತ್ತೊಬ್ಬ ಗಿರಾಕಿಗೆ 14 ಲಕ್ಷ ರು.ಗೆ ಮರು ಖರೀದಿ ಮಾಡಿಸುತ್ತಾನೆ. ರಿಸರ್ವ್ ಬ್ಯಾಂಕ್‌ನಲ್ಲಿ ಹೊಸ ನೋಟುಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಈ ವ್ಯವಹಾರದಿಂದ ನಿಮಗೆ 4 ಲಕ್ಷ ರು. ಲಾಭ ಬರುತ್ತದೆ. ಅದರಲ್ಲಿ ಆ ಇಬ್ಬರು 2 ಲಕ್ಷ ರು.ಗಳನ್ನು ಇಟ್ಟುಕೊಂಡು ಉಳಿದ 12 ಲಕ್ಷಗಳನ್ನು ನಿಮಗೆ ಕೊಡುತ್ತೇನೆ’ ಎಂದಿದ್ದ.

ರಾಜೇಂದ್ರನ ಮಾತು ನಂಬಿದ ನಾಗರಾಜ್‌, 10 ಲಕ್ಷ ಕೊಡುವುದಾಗಿ ಹೇಳಿದ್ದರು. ಆಗ ನಾಗರಾಜ್‌ ಸೂಚನೆ ಮೇರೆಗೆ ಅವರ ಸಂಬಂಧಿ ರಾಜಣ್ಣ, ಕಾರ್ಪೋರೇಷನ್‌ ಬಳಿಯ ಯೂನಿಟಿ ಬಿಲ್ಡಿಂಗ್‌ ಬಳಿ ರಾಜೇಂದ್ರನನ್ನು ಭೇಟಿಯಾಗಿದ್ದರು. ಆಗ ತನ್ನ ಸಹಚರರಾದ ಸುರೇಶ, ನವಾಜ್‌, ಸತೀಶ್‌ ಅವರನ್ನು ಪರಿಚಿಯಿಸಿದ್ದ. ನಂತರ 10 ಲಕ್ಷಗಳನ್ನು ಪಡೆದು 1 ಕೋಟಿ ರು. ಮೌಲ್ಯದ ನಿಷೇಧಿತ ನೋಟು ಕೊಟ್ಟಿದ್ದರು. ಆದರೆ ಮತ್ತೆ ಆ ಹಣವನ್ನು ಬದಲಾವಣೆ ಮಾಡಿಸುತ್ತೇವೆಂದು ಹೇಳಿ ನಗರದಲ್ಲೆಲ್ಲಾ ಸುತ್ತಾಡಿಸಿ ವಂಚಿಸಿದ್ದರು.

ಮಗನ ಮದುವೆಗೆ ಇಟ್ಟಿದ್ದ ಹಣ

ಚಲಾವಣೆ ನೋಟುಗಳ ದಂಧೆಯಿಂದ ಹಣ ಸಂಪಾದಿಸಬಹುದು ಎಂಬ ದುರಾಸೆಗೆ ಬಿದ್ದ ನಾಗರಾಜ್‌ ಹಾಗೂ ಆತನ ಸೋದರ ಸಂಬಂಧಿ ರಾಜಣ್ಣ ಅವರು, ಆರೋಪಿಗಳಿಗೆ ಸಾಲ ಮಾಡಿ ಹಣ ಕೊಟ್ಟಿದ್ದರು.

ಕಾಸ್ಮೆಟಿಕ್‌ ವ್ಯಾಪಾರಿಗಳು: ಇನ್ನು ಆರೋಪಿಗಳ ಪೈಕಿ ರಾಜೇಂದ್ರ, ಸೌಂದರ್ಯವರ್ಧಕ ವಸ್ತುಗಳ ವ್ಯಪಾರ ಮಾಡುತ್ತಾನೆ. ಇನ್ನುಳಿದವರು ಸಣ್ಣಪುಟ್ಟವ್ಯವಹಾರ ಮಾಡುತ್ತಿದ್ದು, ಹಣದಾಸೆಗೆ ಈ ದಂಧೆಗಿಳಿದಿದ್ದಾರೆ. ಮೂರು ವರ್ಷಗಳಿಂದ ಹಲವು ಮಂದಿಗೆ ವಂಚಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.