ಬೆಂಗಳೂರು(ಫೆ.21): ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ಸಂಬಂಧ ವಿಪ್ರೊ ಸಂಸ್ಥೆಯ ಸಂಸ್ಥಾಪಕ ಅಜಿಂ ಪ್ರೇಮ್‌ಜಿ ವಿರುದ್ಧ ತನಿಖೆ ಕೋರಿ ಇಂಡಿಯಾ ಅವೇಕ್‌ ಫಾರ್‌ಟ್ರಾನ್ಸ್‌ಪರೆನ್ಸಿ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌, ಅರ್ಜಿದಾರರಿಗೆ 10 ಲಕ್ಷ ದಂಡ ವಿಧಿಸಿದೆ. ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸಪರೆನ್ಸಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಆಲಿಸಿದ ನ್ಯಾ.ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿದ್ದ 3 ಪ್ರತ್ಯೇಕ ಅರ್ಜಿ ವಜಾಗೊಂಡಿದ್ದರೂ ಸಹ ಒಂದೇ ವಿಚಾರಕ್ಕೆ ಪದೇ ಪದೇ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥ ಮಾಡಲಾಗಿದೆ, ನ್ಯಾಯಾಂಗವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಭಿಪ್ರಾಯ ಪಟ್ಟನ್ಯಾಯಪೀಠ, ಅರ್ಜಿದಾರ ಸಂಸ್ಥೆಗೆ 10 ಲಕ್ಷ ದಂಡ ವಿಧಿಸುತ್ತಿರುವುದಾಗಿ ಆದೇಶದಲ್ಲಿ ತಿಳಿಸಿದೆ.

ಇದೇ ಆರೋಪಕ್ಕೆ ಸಂಬಂಧಿಸಿದಂತೆ ಅಜಿಂ ಪ್ರೇಮ್‌ಜಿ ವಿರುದ್ಧ ಆರ್‌ಬಿಐ ಕಾಯಿದೆ ಅಡಿ ಕ್ರಿಮಿನಲ್‌ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನವರಿ ತಿಂಗಳಲ್ಲಿ ವಜಾಗೊಳಿಸಿತ್ತು. ಅರ್ಜಿದಾರರು ಮಾಡಿದ್ದ ದೂರಿಗೆ ಆರ್‌ಬಿಐ ಈಗಾಗಲೇ 2017ರ ಸೆ.5ರಂದು ಉತ್ತರ ನೀಡಿದೆ. ಆ ಬಗ್ಗೆ ಅರ್ಜಿದಾರರಿಗೆ ಏನಾದರೂ ತಕರಾರು ಇದ್ದರೆ ಅವರು ಸೂಕ್ತ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಆದರೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸುವುದು ಅಥವಾ ಹೈಕೋರ್ಟ್‌ನಲ್ಲಿ ರಿಟ್‌ ದಾಖಲಿಸುವುದರಿಂದ ಅಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನಂಜಾವಧೂತ ಶ್ರೀ ವಿರುದ್ಧದ ಕ್ರಿಮಿನಲ್‌ ಕೇಸು ರದ್ದತಿ ಇಲ್ಲ

ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ಪ್ರಶ್ನಿಸಿದ್ದ ಅರ್ಜಿ

ಅಜೀಂ ಪ್ರೇಮ್‌ಜಿ ಸೇರಿ ಕಂಪನಿಯ ಹಲವು ನಿರ್ದೇಶಕರು ಬ್ಯಾಂಕಿಂಗೇತರ ಹಣಕಾಸು ವ್ಯವಹಾರ (ಎನ್‌ಬಿಎಫ್‌ಸಿ) ನಡೆಸುತ್ತಿದ್ದಾರೆ. ಆರ್‌ಬಿಐ ಕಾಯಿದೆ ಸೆಕ್ಷನ್‌ 451ಎ ಪ್ರಕಾರ ನೋಂದಣಿ ಮಾಡಿಸದೆ ಎನ್‌ಬಿಎಫ್‌ಸಿ ವಹಿವಾಟು ನಡೆಸುವಂತಿಲ್ಲ ಎಂದು ಆರೋಪಿಸಿ ಅರ್ಜಿದಾರರು ಆರ್‌ಬಿಐಗೆ ದೂರು ನೀಡಿದ್ದರು. ಅನಂತರ ಆರ್‌ಬಿಐ ಸಮಗ್ರ ಉತ್ತರ ನೀಡಿತ್ತು. ಆದರೂ ಅರ್ಜಿದಾರರ ಸಂಸ್ಥೆ, ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿ ಆರ್‌ಬಿಐ ಕಾಯಿದೆ ಅಡಿ ಅಜಿಂ ಪ್ರೇಮ್‌ಜಿ ಮತ್ತಿತರರ ವಿರುದ್ಧ ಕ್ರಿಮಿನಲ್‌ ಕ್ರಮ ಜರುಗಿಸಬೇಕೆಂದು ಕೋರಿದ್ದರು. ಆದರೆ, ನ್ಯಾಯಾಲಯ 2020ರ ಜು.28ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಇದೇ ವಿಚಾರ ಪ್ರಶ್ನಿಸಿ ಪ್ರತ್ಯೇಕವಾಗಿ ಮೂರು ಅರ್ಜಿಗಳನ್ನು ಅರ್ಜಿದಾರರ ಸಂಸ್ಥೆ ಹೈಕೋರ್ಟ್‌ನಲ್ಲಿ ಸಲ್ಲಿಸಿತ್ತು.