ಚಾಮರಾಜನಗರ: ಮಾದಪ್ಪನ ಹುಂಡಿಯಲ್ಲಿ 1.70 ಕೋಟಿ ಹಣ, ಕೆಜಿಗಟ್ಟಲೇ ಆಭರಣ..!
ವಾರಾಂತ್ಯ ಮತ್ತು ಸೋಮವಾರದಂದು ಭಕ್ತರ ದಂಡೇ ಹರಿದು ಬಂದು ಕೇವಲ ಚಿನ್ನದ ರಥ, ಲಡ್ಡು ಮಾರಾಟ ಹಾಗೂ ಇತರ ಸೇವೆಗಳಿಂದಲೇ ದಿನವೊಂದಕ್ಕೆ ಲಕ್ಷಾಂತರ ರು. ಹೆಚ್ಚು ಆದಾಯ ಬರುತ್ತಿದೆ.
ಹನೂರು(ಜು.15): ಚಾಮರಾಜನಗರ ಜಿಲ್ಲೆಯ ಪ್ರಮುಖ ಮತ್ತು ಹೆಚ್ಚು ಆದಾಯ ಹೊಂದಿರುವ ದೇವಾಲಯಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೋಟ್ಯಂತರ ರು. ನಗದು, ಕೆಜಿಗಟ್ಟಲೇ ಬೆಳ್ಳಿ ಸಂಗ್ರಹವಾಗಿದೆ. ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಕೇವಲ 27 ದಿನಗಳಲ್ಲಿ 1,70,65,814 ರು . ಸಂಗ್ರಹವಾಗಿದೆ. ಇದರಲ್ಲಿ ನಾಣ್ಯಗಳೇ 9 ಲಕ್ಷದಷ್ಟಿದೆ. ಇದರೊಂದಿಗೆ 80 ಗ್ರಾಂ ಚಿನ್ನ ಹಾಗೂ 1.4 ಕೆಜಿ ಬೆಳ್ಳಿಯನ್ನು ಏಳುಮಲೆ ಒಡೆಯನಿಗೆ ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ವಿವಿಧ ಸೇವೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾರಾಂತ್ಯ ಮತ್ತು ಸೋಮವಾರದಂದು ಭಕ್ತರ ದಂಡೇ ಹರಿದು ಬಂದು ಕೇವಲ ಚಿನ್ನದ ರಥ, ಲಡ್ಡು ಮಾರಾಟ ಹಾಗೂ ಇತರ ಸೇವೆಗಳಿಂದಲೇ ದಿನವೊಂದಕ್ಕೆ ಲಕ್ಷಾಂತರ ರು. ಹೆಚ್ಚು ಆದಾಯ ಬರುತ್ತಿದೆ. ಇದೆ ಸಂದರ್ಭದಲ್ಲಿ ಕಾರ್ಯದರ್ಶಿ ಕ್ಯಾತಾಯಿನಿ ದೇವಿ, ಉಪ ಕಾರ್ಯದರ್ಶಿ ಬಸವರಾಜು, ದೇವಾಲಯದ ನೌಕರರು ಇದ್ದರು.
ಚಾಮರಾಜನಗರ: 'ಕೋಟಿ' ಒಡೆಯ ಮಾದಪ್ಪ, 2.57 ಕೋಟಿ ರೂ ಹುಂಡಿ ಸಂಗ್ರಹ
ಹುಂಡಿ ಹಣ ಕದ್ದು ಸಿಕ್ಕಿ ಬಿದ್ದ ನೌಕರ
ಹುಂಡಿ ಎಣಿಕೆಯ ಕಾರ್ಯದಲ್ಲಿ ತೊಡಗಿದ್ದ ಪ್ರಾಧಿಕಾರದ ಡಿ ಗ್ರೂಪ್ ನೌಕರ 40 ಸಾವಿರ ರು. ಕದ್ದ ಆರೋಪದ ಹಿನ್ನಲೆ ಆತನನ್ನು ಬಂಧಿಸಿರುವ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಮಹದೇಶ್ವರ ಬೆಟ್ಟದ ನಿವಾಸಿಯಾದ ಪುದೂರು ಗ್ರಾಮದ ಪನೀರ್ ಸೆಲ್ವಂ ಎಂಬಾತನೇ ಬಂಧಿತ ಆರೋಪಿ.
ಘಟನೆ ವಿವರ:
ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನೌಕರರು ಭಾಗವಹಿಸಿದ್ದು, ಇದರಲ್ಲಿ ಪನೀರ್ ಸೆಲ್ವಂ ಕೂಡ ಇದ್ದನು. ಎಣಿಕೆಯ ವೇಳೆ ಸಂಗ್ರಹವಾದ ಹಣವನ್ನು ಜೋಡಿಸಿ ಟೇಬಲ್‌ನಲ್ಲಿ ಇಡಲಾಗಿತ್ತು. ಆದರೆ ಎಣಿಕೆ ಕಾರ್ಯದಲ್ಲಿ ಪನೀರ್ ಸೆಲ್ವಂನ ವರ್ತನೆಯ ಮೇಲೆ ಅನುಮಾನ ವ್ಯಕ್ತವಾಯಿತು. ಈ ಬಗ್ಗೆ ಆತನನ್ನು ಪರಿಶೀಲಿಸಿದಾಗ ಜೇಬಿನಲ್ಲಿ 500 ರು. ನ 80 ನೋಟುಗಳುಳ್ಳ 40 ಸಾವಿರ ರು. ಇತ್ತು. ಈ ಬಗ್ಗೆ ಅಧಿಕಾರಿಗಳು ವಿಚಾರಿಸಲಾಗಿ ಆತ ಎಟಿಎಂನಿಂದ 20 ಸಾವಿರ ರು. ಹಾಗೂ ಬೇರೆ ವ್ಯಕ್ತಿಯಿಂದ 20 ಸಾವಿರ ರು. ಪಡೆದಿರುವುದಾಗಿ ತಿಳಿಸಿದನು. ಆದರೆ ಹುಂಡಿ ಎಣಿಕೆಯಲ್ಲಿ ಭಾಗವಹಿಸುವವರು ಹಣವನ್ನು ಹೊಂದುವಂತಿಲ್ಲ ಎಂಬ ನಿಯಮವಿದೆ. ಆಗಿದ್ದರೂ ಹಣವನ್ನು ಹೊಂದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಆತನನ್ನ ವಿಚಾರಿಸಿ ಬಂಧಿಸಲಾಯಿತು. ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.
ಈ ಸಂಬಂಧ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.