Asianet Suvarna News Asianet Suvarna News

ರಾಮಲಿಂಗಾರೆಡ್ಡಿ ಪುತ್ರಿ ಸ್ಪರ್ಧೆಗೆ ಜಯನಗರವನ್ನೇ ಆಯ್ಕೆ ಮಾಡಿದ್ದು ಏಕೆ?

ಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ತಮ್ಮ ತಂದೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಹಳೆಯ ಕಾರ್ಯಕ್ಷೇತ್ರವಾದ ಜಯನಗರ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ಮಾದರಿ ಜಯನಗರ’ವನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವ ಅವರು ಕ್ಷೇತ್ರದ ಹಾಲಿ ಸಮಸ್ಯೆ, ಸಮಸ್ಯೆಗೆ ತಮ್ಮಬಳಿ ಇರುವ ಪರಿಹಾರವನ್ನು ವಿವರಿಸಿದ್ದು ಹೀಗೆ.

Ramalinga Reddy Daughter Contest Election

ಶ್ರೀಕಾಂತ್ ಎನ್.ಗೌಡಸಂದ್ರ

ಬೆಂಗಳೂರು : ಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ತಮ್ಮ ತಂದೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಹಳೆಯ ಕಾರ್ಯಕ್ಷೇತ್ರವಾದ ಜಯನಗರ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಪ್ರಾಣಿ ದಯಾ ಸಂಸ್ಥೆಯೊಂದರ ಸಕ್ರಿಯ ಕಾರ್ಯಕರ್ತೆಯಾಗಿದ್ದರು. ಅನಂತರ ಯುವ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಸೌಮ್ಯ ರೆಡ್ಡಿ ಯುವಕರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ರಾಹುಲ್ ಗಾಂಧಿ ಚಿಂತನೆಯ ಪರವಾಗಿ ಮತ್ತು ತಮ್ಮ ತಂದೆಯ ನಾಮಬಲದಿಂದ ಜಯನಗರದಲ್ಲಿ ಸ್ಪರ್ಧಿಯಾಗಿದ್ದಾರೆ. ತಮ್ಮ ತಂದೆ ನಾಲ್ಕು ಬಾರಿ ಕ್ಷೇತ್ರದ ಶಾಸಕರಾಗಿದ್ದ ಜಯನಗರ ಕ್ಷೇತ್ರವನ್ನು ‘ನಿರುದ್ಯೋಗ ಮುಕ್ತ’ ಹಾಗೂ ‘ಮಾದರಿ ಜಯನಗರ’ವನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವ ಅವರು ಕ್ಷೇತ್ರದ ಹಾಲಿ ಸಮಸ್ಯೆ, ಸಮಸ್ಯೆಗೆ ತಮ್ಮಬಳಿ ಇರುವ ಪರಿಹಾರವನ್ನು ವಿವರಿಸಿದ್ದು ಹೀಗೆ.

ಪ್ರಚಾರ ಆರಂಭಿಸಿದ್ದೀರಿ ಜನರ ಸ್ಪಂದನೆ ಹೇಗಿದೆ?

ಜನರ ಸ್ಪಂದನೆ ಅತ್ಯುತ್ತಮವಾಗಿದೆ. ಮನೆ-ಮನೆ ಭೇಟಿ, ಕಾರ್ಯಕರ್ತರ ಸಭೆ, ಪಕ್ಷದ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಕಳೆದ ಹದಿನೈದು ವರ್ಷಗಳಿಂದ ನಾನೂ ಸಹ ಕ್ಷೇತ್ರದಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದರಿಂದ ಹಲವು ಜನರಿಗೆ ನಾನು ಗೊತ್ತಿದ್ದೇನೆ. ಹೀಗಾಗಿ ಉತ್ತಮ ಸ್ಪಂದನೆ ಇದೆ. 

ಸ್ಪರ್ಧೆಗೆ ಜಯನಗರವನ್ನೇ ಆಯ್ಕೆ ಮಾಡಿದ್ದು ಏಕೆ? ನಿಮ್ಮ ತಂದೆಯ ಹಳೆ ಕಾರ್ಯಕ್ಷೇತ್ರವಾಗಿತ್ತು ಎಂಬ ಕಾರಣಕ್ಕಾ?

ಅದೊಂದೇ ಕಾರಣವಲ್ಲ. ಅಪ್ಪ ಅವರು ನಾಲ್ಕು ಬಾರಿ ಈ ಕ್ಷೇತ್ರದಿಂದ ಶಾಸಕರಾಗಿದ್ದರು ಎಂಬುದು ಸತ್ಯ. ಆದರೆ, ಹದಿ ನೈದು ವರ್ಷದಿಂದ ಈ ಕ್ಷೇತ್ರದಲ್ಲೇ ನಾನೂ ಕೂಡ ಸಾಮಾಜಿಕ  ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಓದಿದ್ದು ಜಯನಗರ ನ್ಯಾಷನಲ್ ಕಾಲೇಜು. ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಈಗಿರುವ ಮರಗಳೆಲ್ಲವೂ ನಾನೇ ನೆಟ್ಟ ಗಿಡಗಳು. ಇಲ್ಲಿ ಉದ್ಯೋಗ ಮೇಳ ಮತ್ತಿತರ ಕಾರ್ಯಗಳನ್ನು ಮಾಡಿದ್ದೇನೆ.ಇಲ್ಲಿನ ಜನರೊಂದಿಗೆ ಉತ್ತಮ ಸಂಬಂಧ ಇದೆ. ಹೀಗಾಗಿ ಇಲ್ಲಿ ಸ್ಪರ್ಧಿಸುತ್ತಿದ್ದೇನೆ.

ಯಾವ ವಿಚಾರವಿಟ್ಟುಕೊಂಡು ಮತದಾರರ ಮುಂದೆ ಹೋಗುವಿರಿ?

ಕೆಲವೊಂದು ಪ್ರದೇಶಗಳು ಅಭಿವೃದ್ಧಿ ಹೊಂದಿಲ್ಲ. ಹಲವು ಕಡೆ ಒಳಚಚರಂಡಿ ಸಮಸ್ಯೆ ಇದೆ. ಕಸದ ಸಮಸ್ಯೆ ತುಂಬಾ ಇದೆ. ಇಲ್ಲಿನ ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲೆ ಹಾಗೂ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳ ಗುಣಮಟ್ಟಕ್ಕೆ ತರಬೇಕಿದೆ. ಹೀಗಾಗಿ ‘ನಿರುದ್ಯೋಗ ಮುಕ್ತ’ ಹಾಗೂ ‘ಮಾದರಿ ಜಯನಗರ’ ಮಾಡಲು ಪ್ರಣಾಳಿಕೆಯೊಂದಿಗೆ ಜನರ ಮುಂದೆ
ಹೋಗುತ್ತಿದ್ದೇನೆ.

ಸಮಸ್ಯೆ ತುಂಬಾ ಇದೆ ಎಂದು ಹೋಗುವಿರಾ?

ಖಂಡಿತ ಇಲ್ಲ. ಜಯನಗರ ಕ್ಷೇತ್ರವನ್ನು ಅತ್ಯಂತ ವಾಸಯೋಗ್ಯ ಬಡಾವಣೆಯಾಗಿ ಅಭಿವೃದ್ಧಿ ಮಾಡಿದ್ದ ನಮ್ಮ ಅಪ್ಪಾಜಿ ಅವರು. ಆದರೆ, ೨೦೦೮ರಲ್ಲಿ ಇದ್ದ ಜಯನಗರವೇ ಬೇರೆ ಈಗ ಇರುವ ಜಯ ನಗರವೇ ಬೇರೆ. ಕಸದ ಸಮಸ್ಯೆ, ಸಂಚಾರದಟ್ಟಣೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಸರ್ಕಾರದ ಜನಪ್ರಿಯ ಕಾರ್ಯಗಳನ್ನು ಜನರಿಗೆ ತಲುಪಿಸದಿರುವುದು ಸೇರಿ ಹಲವು ವೈಫಲ್ಯಗಳಿವೆ. ಕಾಲಕಾಲಕ್ಕೆ ಸೃಷ್ಟಿಯಾಗುವ ಸಮಸ್ಯೆಗಳನ್ನುಗುರುತಿಸಿ ಪರಿಹಾರ ಕಲ್ಪಿಸಬೇಕಾಗಿರುವುದು ಜನಪ್ರತಿನಿಧಿಯ ಕರ್ತವ್ಯ.

ಕಸದ ಸಮಸ್ಯೆಗೆ ನಿಮ್ಮ ಪರಿಹಾರವೇನು?

ಬಿಜೆಪಿ ಅವಧಿಯಲ್ಲಿ ನಗರದ ಮಾನ ಹರಾಜು ಆಗಿದ್ದು ಜನ ನೋಡಿದ್ದಾರೆ. ಜಯನಗರ ಕ್ಷೇತ್ರದಲ್ಲಿ ಕಸ ಸಮಸ್ಯೆ ಪರಿಹಾರ ಕಲ್ಪಿಸಲು ಮೂಲದಲ್ಲಿಯೇ ಕಸ ಬೇರ್ಪಡಿಸುವಿಕೆ, ಕೋರಮಂಗಲ ಮಾದರಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ, ಬಯೋಗ್ಯಾಸ್ ಘಟಕ ನಿರ್ಮಾಣ, ಪ್ರತಿಯೊಂದು ವಾರ್ಡ್ ನಲ್ಲೂ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹೊಂದಿದ್ದೇವೆ.

 ಹಿರಿಯ ಆಕಾಂಕ್ಷಿಗಳನ್ನು ಬದಿಗಿರಿಸಿ ಟಿಕೆಟ್ ಗಿಟ್ಟಿಸಿದ್ದೀರಲ್ಲಾ ಬಂಡಾಯ ಕಾಡುತ್ತಿಲ್ಲವೇ? 

ನಾನು ಹಾಗೂ ಅಪ್ಪ ಅವರು ಗೆಲುವಿನ ಅರ್ಹತೆ ಇದ್ದರೆ ಮಾತ್ರ ಟಿಕೆಟ್ ನೀಡಿ ಎಂದು ಪಕ್ಷಕ್ಕೆ ಮನವಿ ಮಾಡಿದ್ದೆವು. ಪಕ್ಷದ ಕಡೆಯಿಂದ ಸಮೀಕ್ಷೆ ಮಾಡಿ ನಾನು ಅಥವಾ ಅಪ್ಪ ಆದರೆ ಗೆಲ್ಲಬಹುದು ಎಂದು ವರದಿ ಬಂದಿತ್ತು. ಹೀಗಾಗಿ ಟಿಕೆಟ್ ಕೊಟ್ಟಿದ್ದಾರೆ.

Follow Us:
Download App:
  • android
  • ios