‘ಕರುನಾಡ ಕಿರೀಟ’ ಬೀದರ್‌ ಯಾರಿಗೆ..?

Karnataka Assembly Election Bidar Final Round Survey
Highlights

ಬಸವಾದಿ ಶರಣರ ನಾಡು ಬೀದರ್‌ ಜಿಲ್ಲೆ ಈ ಹಿಂದೆ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ ಈ ಬಾರಿ ಮೂರೂ ಪಕ್ಷಗಳ ನಡುವೆ ಭರ್ಜರಿ ಪೈಪೋಟಿ ಕಂಡುಬರುತ್ತಿದೆ. ಜಿಲ್ಲೆಯ ಆರು ಸ್ಥಾನಗಳ ಪೈಕಿ ಹೆಚ್ಚಿನ ಸೀಟುಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಕಾದಾಡುತ್ತಿವೆ.

ಅಪ್ಪಾರಾವ್‌ ಸೌದಿ

ಬೀದರ್‌: ಬಸವಾದಿ ಶರಣರ ನಾಡು ಬೀದರ್‌ ಜಿಲ್ಲೆ ಈ ಹಿಂದೆ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ ಈ ಬಾರಿ ಮೂರೂ ಪಕ್ಷಗಳ ನಡುವೆ ಭರ್ಜರಿ ಪೈಪೋಟಿ ಕಂಡುಬರುತ್ತಿದೆ. ಜಿಲ್ಲೆಯ ಆರು ಸ್ಥಾನಗಳ ಪೈಕಿ ಹೆಚ್ಚಿನ ಸೀಟುಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಕಾದಾಡುತ್ತಿವೆ.

1. ಬೀದರ್‌

ಕಾಂಗ್ರೆಸ್‌- ರಹೀಂ ಖಾನ್‌

ಬಿಜೆಪಿ- ಸೂರ್ಯಕಾಂತ ನಾಗಮಾರಪಳ್ಳಿ

ಬಿಎಸ್‌ಪಿ- ಮಾರಸಂದ್ರ ಮುನಿಯಪ್ಪ

ಹಾಲಿ ಶಾಸಕ ಕಾಂಗ್ರೆಸ್ಸಿನ ರಹೀಂ ಖಾನ್‌ ಹಾಗೂ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ನಡುವೆ ನೇರ ಪೈಪೋಟಿ ಕಂಡುಬರುತ್ತಿದೆ. ರಹೀಂ ಖಾನ್‌ಗೆ ಎಲ್ಲ ಸಮುದಾಯಗಳ ಮತ ಸೆಳೆವ ಸಾಮರ್ಥ್ಯವಿದೆ. ಪ್ರತಿ ಬಾರಿಯೂ ಮುಸ್ಲಿಂ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದರಲ್ಲಿ ಅವರು ಸಿದ್ಧಹಸ್ತರು. ಆದರೆ ಈ ಬಾರಿ ಎಂಇಪಿ ಸ್ಪರ್ಧೆಯಿಂದ ಏನಾಗುತ್ತದೆ ಎಂಬುದನ್ನು ನೋಡಬೇಕಾಗಿದೆ. ಈ ಕ್ಷೇತ್ರವನ್ನು ಜೆಡಿಎಸ್‌ ತನ್ನ ಮೈತ್ರಿಯ ಪ್ರಕಾರ ಬಿಎಸ್ಪಿಗೆ ಬಿಟ್ಟುಕೊಟ್ಟಿದ್ದು, ಮಾರಸಂದ್ರ ಮುನಿಯಪ್ಪ ಸ್ಪರ್ಧಿಸುತ್ತಿದ್ದಾರೆ. ಬಿಎಸ್ಪಿ ಅಭ್ಯರ್ಥಿ ಎಸ್ಸಿ, ಎಸ್ಟಿಮತಗಳಿಗೆ ಕೈ ಹಾಕಿದರೆ ಕಾಂಗ್ರೆಸ್ಸಿಗೆ ಕಷ್ಟವಾಗಬಹುದು. ಇನ್ನು ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ಅವರು ಮಾಜಿ ಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಪುತ್ರ. ಕ್ಷೇತ್ರದಲ್ಲಿ ಅವರ ಕುಟುಂಬದ ಬಿಗಿಹಿಡಿತವಿದೆ. ನಾಗಮಾರಪಳ್ಳಿ ನಿಧನ ನಂತರ ಕುಟುಂಬದ ಪರ ಅನುಕಂಪವಿದ್ದು, ಅದು ಬಿಜೆಪಿಗೆ ಪ್ಲಸ್‌. ಆದರೆ ಸ್ಥಳೀಯ ಬಿಜೆಪಿ ನಾಯಕರು ಈ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತರು ನಿರ್ಣಾಯಕ. ಮುಸ್ಲಿಮರೂ ಸಾಕಷ್ಟಿದ್ದಾರೆ. ಎಸ್‌ಸಿ, ಎಸ್ಟಿ, ಕ್ರೈಸ್ತರ ಮತ ಸೆಳೆಯಲು ಎಲ್ಲ ಪಕ್ಷಗಳೂ ಯತ್ನಿಸುತ್ತಿವೆ. ಒಟ್ಟಿನಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆಯೇ ನೇರ ಸ್ಪರ್ಧೆ ಸಾಧ್ಯತೆ ಹೆಚ್ಚಿದೆ.

2. ಭಾಲ್ಕಿ

ಕಾಂಗ್ರೆಸ್‌- ಈಶ್ವರ ಖಂಡ್ರೆ

ಬಿಜೆಪಿ- ಡಿ.ಕೆ. ಸಿದ್ರಾಮ್‌

ಜೆಡಿಎಸ್‌- ಪ್ರಕಾಶ್‌ ಖಂಡ್ರೆ

ಖಂಡ್ರೆ ಕುಟುಂಬದ ಸದಸ್ಯರ ನಡುವಣ ಕಾಳಗದಿಂದ ಪ್ರಸಿದ್ಧಿಯಾಗಿರುವ ಕ್ಷೇತ್ರ ಇದು. ಸಚಿವ ಈಶ್ವರ ಖಂಡ್ರೆ ಕಾಂಗ್ರೆಸ್ಸಿನ ಹಾಲಿ ಶಾಸಕರಾಗಿದ್ದಾರೆ. 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಈಶ್ವರ ಖಂಡ್ರೆಗೆ ಪೈಪೋಟಿ ನೀಡಿದ್ದ ಡಿ.ಕೆ. ಸಿದ್ರಾಮ್‌ ಈ ಬಾರಿ ಬಿಜೆಪಿ ಹುರಿಯಾಳಾಗಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರಕಾಶ್‌ ಖಂಡ್ರೆ ಜೆಡಿಎಸ್‌ನಿಂದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಪ್ರಕಾಶ್‌ ಖಂಡ್ರೆ ಅವರಿಗೆ ಕಡೆಯ ಕ್ಷಣದಲ್ಲಿ ಟಿಕೆಟ್‌ ತಪ್ಪಿತು. ಹೀಗಾಗಿ ಅವರು ತಡ ಮಾಡದೇ ಜೆಡಿಎಸ್‌ ಸೇರಿದರು. ಹಾಗೆ ನೋಡಿದರೆ ಭಾಲ್ಕಿಯಲ್ಲಿ ಬಿಜೆಪಿ ಸಂಘಟಿಸಿ, ಎರಡು ಬಾರಿ ಶಾಸಕರಾಗಿದ್ದವರು ಪ್ರಕಾಶ್‌. ಅಂಥವರಿಗೆ ಟಿಕೆಟ್‌ ತಪ್ಪಿರುವುದು ಬಿಜೆಪಿ ಮೂಲ ಪಾಳೆಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದಕ್ಕೆ ಪುಷ್ಟಿನೀಡುವಂತೆ ಬಸವಕಲ್ಯಾಣ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮರಾಠಾ ಸಮುದಾಯದ ಪ್ರಮುಖ ಎಂ.ಜಿ. ಮೂಳೆ ಜೆಡಿಎಸ್‌ ಸೇರಿದ್ದಾರೆ. ಬಸವಲಕ್ಯಾಣದಿಂದ ಜೆಡಿಎಸ್‌ ನಾಯಕ, ಮರಾಠಾ ಸಮುದಾಯದ ಪಿಜಿಆರ್‌ ಸಿಂಧ್ಯಾ ಸ್ಪರ್ಧಿಸಿದ್ದಾರೆ. ಇವೆರಡೂ ಅಂಶ ಪ್ರಕಾಶ್‌ ಅವರಿಗೆ ವರದಾನವಾದರೆ, ಮರಾಠಾ ಮತ ನಂಬಿರುವ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗಬಹುದು. ಜತೆಗೆ ಬಿಜೆಪಿ- ಜೆಡಿಎಸ್‌ ಕಿತ್ತಾಟದಲ್ಲಿ ಕಾಂಗ್ರೆಸ್ಸಿಗೂ ಲಾಭವಾಗುವುದು. ಹೀಗಾಗಿ ಇಲ್ಲಿ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ.

3. ಬೀದರ್‌ ದಕ್ಷಿಣ

ಕಾಂಗ್ರೆಸ್‌- ಅಶೋಕ್‌ ಖೇಣಿ

ಬಿಜೆಪಿ- ಡಾ ಶೈಲೇಂದ್ರ ಬೆಲ್ದಾಳೆ

ಜೆಡಿಎಸ್‌- ಬಂಡೆಪ್ಪ ಖಾಶೆಂಪೂರ್‌

ಸಂಪೂರ್ಣ ಹಳ್ಳಿಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಕಳೆದ ಬಾರಿ ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ನೈಸ್‌ ಕಂಪನಿ ಮುಖ್ಯಸ್ಥ ಅಶೋಕ್‌ ಖೇಣಿ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಬಾರಿ ಅವರು ಕಾಂಗ್ರೆಸ್‌ ಅಭ್ಯರ್ಥಿ. ಕಳೆದ ಬಾರಿ ಕೆಜೆಪಿ ಹುರಿಯಾಳಾಗಿದ್ದ ಡಾ. ಶೈಲೇಂದ್ರ ಬೆಲ್ದಾಳೆ ಬಿಜೆಪಿಯಿಂದ ಅಖಾಡಕ್ಕೆ ಇಳಿದಿದ್ದಾರೆ. ಇದೇ ಕ್ಷೇತ್ರದಲ್ಲಿ 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಬಂಡೆಪ್ಪ ಖಾಶೆಂಪೂರ್‌ ಜೆಡಿಎಸ್‌ನಿಂದ ಮತ್ತೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಗೆದ್ದರೆ ಕ್ಷೇತ್ರವನ್ನು ಸಿಂಗಾಪುರ ಮಾಡುತ್ತೇನೆ ಎಂದಿದ್ದ ಖೇಣಿ ಅವರು ಪ್ರಭುತ್ವ ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ, ಲಿಂಗಾಯತರ ಪ್ರಾಬಲ್ಯ ಇದ್ದರೂ ಕುರುಬ ಹಾಗೂ ಹಿಂದುಳಿದ ವರ್ಗವನ್ನು ಕಡೆಗಣಿಸುವಂತಿಲ್ಲ. ಖೇಣಿ ಹಾಗೂ ಬೆಲ್ದಾಳೆ ಲಿಂಗಾಯತರು. ಲಿಂಗಾಯತ ಮತ ವಿಭಜನೆಯಿಂದ ತಮಗೆ ಲಾಭವಾಗುತ್ತದೆ ಎಂಬ ನಿರೀಕ್ಷೆ ಖಾಶೆಂಪೂರ್‌ ಅವರದ್ದು. ಇದಕ್ಕೆ ಪೂರಕವಾಗಿ ಖೇಣಿ ಸಹೋದರ ಸಂಜಯ ಖೇಣಿ ಜೆಡಿಎಸ್‌ ಸೇರ್ಪಡೆ ಅವರಿಗೆ ವರದಾನ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಅಳಿಯ ಚಂದ್ರ ಸಿಂಗ್‌ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದಾರೆ. ಲಿಂಗಾಯತರ ಜತೆಗೆ ಅಹಿಂದ ಮತ ಕೈಹಿಡಿದರೆ ಖೇಣಿಗೆ ಲಾಭ. ಕಾಂಗ್ರೆಸ್‌- ಜೆಡಿಎಸ್‌ ಮಧ್ಯೆ ಮತ ವಿಭಜನೆಯಾದರೆ ಜೆಡಿಎಸ್‌ಗೆ ಅನುಕೂಲ. ಒಟ್ಟಿನಲ್ಲಿ ತ್ರಿಕೋನ ಸ್ಪರ್ಧೆ ಇದೆ.

4. ಔರಾದ್‌

ಕಾಂಗ್ರೆಸ್‌- ವಿಜಯಕುಮಾರ ಕೌಡ್ಯಾಳ್‌

ಬಿಜೆಪಿ- ಪ್ರಭು ಚವ್ಹಾಣ

ಜೆಡಿಎಸ್‌- ಧನಾಜಿ ಜಾಧವ್‌

ಬೀದರ್‌ ಜಿಲ್ಲೆಯ ಎಸ್ಸಿ ಮೀಸಲು ಕ್ಷೇತ್ರ. ಬಿಜೆಪಿಯಿಂದ ಪ್ರಭು ಚವ್ಹಾಣ್‌ ಎರಡು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿಯನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶೋಧಿಸುವಷ್ಟರಲ್ಲಿ ತಡವಾಗಿರುತ್ತದೆ. ಪ್ರತಿ ಬಾರಿಯ ಸಮಸ್ಯೆ ಈ ಸಲವೂ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಭೀಮಸೇನ ಶಿಂಧೆ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಬಲ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಾಗಿ ನೌಕರಿ ತ್ಯಜಿಸಿ, ಕ್ಷೇತ್ರ ಪ್ರವಾಸ ಮಾಡಿದ್ದರು. ಆದರೆ ಜಾತಿ, ಒಳಜಾತಿ ಲೆಕ್ಕಾಚಾರದಲ್ಲಿ ವಿಜಯಕುಮಾರ ಕೌಡ್ಯಾಳ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ. ಪ್ರಭು ಚವ್ಹಾಣ ಅವರ ವಿರುದ್ಧ ಪ್ರಭುತ್ವ ವಿರೋಧಿ ಅಲೆ ಇದ್ದು, ಅದು ತನ್ನ ನೆರವಿಗೆ ಬರುತ್ತದೆ. ವಿಜಯಕುಮಾರ್‌ ಅವರು ವ್ಯಕ್ತಿತ್ವ ಜನರಿಗೆ ಹಿಡಿಸುತ್ತದೆ ಎಂಬ ಅಭಿಪ್ರಾಯ ಹೊಂದಿದೆ. ಆದರೆ ಭೀಮಸೇನ ಶಿಂಧೆ ಬೆಂಬಲಿಗರು ಮುನಿಸಿಕೊಂಡಿರುವುದು ಕಾಂಗ್ರೆಸ್‌ಗೆ ಒಳಪೆಟ್ಟು ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿ 30 ಸಾವಿರಕ್ಕೂ ಅಧಿಕ ಮತ ಪಡೆದಿದ್ದ ಧನಾಜಿ ಜಾಧವ್‌ಗೆ ಜೆಡಿಎಸ್‌ ಕಣಕ್ಕಿಳಿಸಿದೆ. ಜೆಡಿಎಸ್‌ ಈ ಕ್ಷೇತ್ರದಲ್ಲಿ ಪ್ರಬಲವಾಗಿಲ್ಲ.

5. ಹುಮನಾಬಾದ್‌

ಕಾಂಗ್ರೆಸ್‌- ರಾಜಶೇಖರ ಪಾಟೀಲ್‌

ಬಿಜೆಪಿ- ಸುಭಾಷ ಕಲ್ಲೂರ್‌

ಜೆಡಿಎಸ್‌- ನಸೀಮೋದ್ದೀನ್‌ ಪಟೇಲ್‌

ಕ್ಷೇತ್ರದಲ್ಲಿ ಈ ಬಾರಿ ರೋಚಕ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಏಕೆಂದರೆ ಇಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಮೂರೂ ಪಕ್ಷಗಳು ಪ್ರಬಲವಾಗಿವೆ. ಮುಸ್ಲಿಂ, ಲಿಂಗಾಯತ, ಎಸ್ಸಿ-ಎಸ್ಟಿಮತದಾರರು ಅಧಿಕವಾಗಿರುವ ಕ್ಷೇತ್ರವಿದು. ಮೂರು ಬಾರಿ ಶಾಸಕರಾಗಿರುವ ರಾಜಶೇಖರ ಪಟೀಲ್‌ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಜೆಡಿಎಸ್‌ ಮಾಜಿ ರಾಜ್ಯಾಧ್ಯಕ್ಷ ದಿವಂಗತ ಮಿರಾಜುದ್ದೀನ್‌ ಪಟೇಲ್‌ ಸಹೋದರ ನಸೀಮೋದ್ದೀನ್‌ ಪಟೇಲ್‌ ಅವರನ್ನು ಜೆಡಿಎಸ್‌ ಮತ್ತೊಮ್ಮೆ ಎದುರಾಳಿಯಾಗಿ ಕಣಕ್ಕೆ ಇಳಿಸಿದೆ. ಕಳೆದ ಬಾರಿ ನಸೀಮೋದ್ದೀನ್‌ 40 ಸಾವಿರ ಮತ ಗಳಿಸಿ, ಎರಡನೇ ಸ್ಥಾನ ಪಡೆದಿದ್ದರು. ಈ ಹಿಂದೆ ಪ್ರಕರಣವೊಂದರ ಸಂಬಂಧ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶದಿಂದಾಗಿ ಶಾಸಕತ್ವ ಕಳೆದುಕೊಂಡಿದ್ದ ಸುಭಾಷ ಕಲ್ಲೂರ್‌ ಅವರನ್ನು ಬಿಜೆಪಿ ತನ್ನ ಹುರಿಯಾಳಾಗಿ ಅಖಾಡಕ್ಕೆ ನಿಲ್ಲಿಸಿದೆ. ಮೂರೂ ಪಕ್ಷಗಳಿಗೆ ಟಿಕೆಟ್‌ ವಂಚಿತರ ಅಸಮಾಧಾನ ಇಲ್ಲ. ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಗಳಾದ ಎಸ್ಸಿ, ಎಸ್ಟಿಮತ ಬೇಟೆಗಾಗಿ ಬಹುಜನ ಸಮಾಜ ಸಂಘದ ಅಂಕುಶ ಗೋಖಲೆ ಸ್ಪರ್ಧೆ ಮಾಡುತ್ತಿದ್ದಾರೆ. ಮತ ವಿಭಜನೆಯಾದರೆ ಬಿಜೆಪಿಗೆ ಅನುಕೂಲವಾಗಲಿದೆ. ಕಾಂಗ್ರೆಸ್ಸಿನ ಮತಬುಟ್ಟಿಗೆ ಕೈ ಹಾಕಿ ಜೆಡಿಎಸ್‌ ಕೂಡ ಗೆಲ್ಲಲು ಯತ್ನಿಸುತ್ತಿದೆ.

6. ಬಸವಕಲ್ಯಾಣ

ಕಾಂಗ್ರೆಸ್‌- ಬಿ. ನಾರಾಯಣ

ಬಿಜೆಪಿ- ಮಲ್ಲಿಕಾರ್ಜುನ ಖೂಬಾ

ಜೆಡಿಎಸ್‌- ಪಿಜಿಆರ್‌ ಸಿಂಧ್ಯಾ

ಸಮಾನತೆ ಸಾರಿದ್ದ ಬಸವಾದಿ ಶರಣರು ನಡೆದಾಡಿದ್ದ ನೆಲ. ಆದರೆ ಇಲ್ಲಿ ಜಾತಿವಾರು ಮತಗಳ ಕಾರುಬಾರು ಇದೆ. ಕಳೆದ ಬಾರಿ ಜೆಡಿಎಸ್‌ನಿಂದ ಮಲ್ಲಿಕಾರ್ಜುನ ಖೂಬಾ ಗೆದ್ದಿದ್ದರು. ಈ ಬಾರಿ ಅವರು ಬಿಜೆಪಿ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಸಡ್ಡು ಹೊಡೆಯಲು ಜೆಡಿಎಸ್‌ ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ಅವರನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ ಪಕ್ಷ ಬಿ. ನಾರಾಯಣ ಅವರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಸರ್ಕಾರ ಬಸವಕಲ್ಯಾಣ ನಿರ್ಲಕ್ಷಿಸಿದೆ, ಹೈದರಾಬಾದ್‌- ಕರ್ನಾಟಕ ಅಭಿವೃದ್ಧಿ ವಂಚಿತವಾಗಿದೆ ಎಂಬುದನ್ನೇ ಮುಂದಿಟ್ಟುಕೊಂಡು ಖೂಬಾ ಮತ್ತೊಮ್ಮೆ ಆರಿಸಿಬರಲು ಯತ್ನಿಸುತ್ತಿದ್ದಾರೆ. ತಮ್ಮ ಸಮಾಜದವರಿಗೆ ಟಿಕೆಟ್‌ ನೀಡಬೇಕು ಎಂದು ಬಿಜೆಪಿ ಒತ್ತಾಯ ಮಂಡಿಸಿತ್ತು. ಆದರೆ ಅದಕ್ಕೆ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಸಿಟ್ಟಾಗಿತ್ತು. ಅದರ ಲಾಭ ಪಡೆಯಲು ಜೆಡಿಎಸ್‌ ಮರಾಠಾ ಸಮುದಾಯದ ಸಿಂಧ್ಯಾ ಅವರನ್ನು ಅಖಾಡಕ್ಕೆ ಇಳಿಸಿ, ಅತ್ಯುತ್ತಮ ಆಟವಾಡಿದೆ. ಮರಾಠಾ ನಾಯಕ, ಮಾಜಿ ಶಾಸಕ ಮಾರುತಿ ರಾವ್‌ ಮೂಳೆ ಬೆಂಬಲವಾಗಿ ನಿಂತಿದ್ದಾರೆ. ಮರಾಠಾ ಸಮುದಾಯದ ಜತೆಗೆ ಲಿಂಗಾಯತ ಹಾಗೂ ಮುಸ್ಲಿಂ ಮತದಾರರ ಸಂಖ್ಯೆಯೂ ಗಮನಾರ್ಹವಾಗಿವೆ. ಆ ವರ್ಗಗಳತ್ತ ಕಾಂಗ್ರೆಸ್‌ ದೃಷ್ಟಿಹರಿಸಿದೆ. ಕಳೆದ ಬಾರಿ ನಾರಾಯಣ ಪರಾಭವಗೊಂಡಿದ್ದರು. ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

loader