ಚಿತ್ತಾಪುರ[ಅ.23]: ನಾನು ಈ ಕ್ಷೇತ್ರದ ಶಾಸಕನಾಗಿ 2ನೇ ಬಾರಿ ಅಯ್ಕೆಯಾಗಿದ್ದು, ನನ್ನ ಅಧಿಕಾರ ಅವಧಿಯಾದ 6 ವರ್ಷದಲ್ಲಿ ಶಾಸಕನಾಗಿ, ಐಟಿ-ಬಿಟಿ, ಪ್ರವಾಸೊದ್ಯಮ, ಸಮಾಜ ಕಲ್ಯಾಣ ಸಚಿವನಾಗಿ ರಾಜ್ಯಕ್ಕೆ ಮತ್ತು ಕ್ಷೇತ್ರದ ಮತದಾರರ ಗೌರವವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದೇನೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. 

ತಾಲೂಕಿನ ಅಳ್ಳೋಳ್ಳಿ ಗ್ರಾಮದಲ್ಲಿ 3 ಕೋಟಿ ವೆಚ್ಚದ ಚಿತ್ತಾಪುರ ಲಾಡ್ಲಾಪುರ ರಸ್ತೆ ಸುಧಾರಣೆಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ನಮ್ಮ ಕುಟುಂಬವು ತತ್ವ ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತ ಬರುತ್ತಿದೆ. ಚುನಾವಣೆಗೆ ಸ್ಪರ್ಧಿಸುವಾಗ ಮಾತ್ರ ಪಕ್ಷ ಭೇದ ಇರುತ್ತದೆ. ಚುನಾವಣೆ ನಂತರ ಪ್ರತಿಯೊಬ್ಬ ಮತದಾರರಿಗೆ ಸೌಲಭ್ಯ ಒದಗಿಸುವುದು ನನ್ನ ಕರ್ತವ್ಯವಾಗಿರುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸರ್ಕಾರದ ಯೋಜನೆ ಕಟ್ಟ ಕಡೆಯ ವ್ಯಕ್ತಿ ಹಾಗೂ ಪ್ರತಿಮನೆ ಮನೆಗೂ ತರುವ ಕೆಲಸ ಮಾಡಿದ್ದೇನೆ. 30  ಲಕ್ಷ ಹಾಗೂ ಜಿಪಂ ಸದಸ್ಯರಿಗೆ 50 ಲಕ್ಷ ಅನುದಾನ ನೀಡಿದ್ದೇನೆ. ಕಲಬುರಗಿ ದಕ್ಷಿಣ, ಗ್ರಾಮೀಣ, ಸೇಡಂ, ಚಿಂಚೋಳಿಯಲ್ಲಿ ಬಿಜೆಪಿ ಶಾಸಕರು ಇದ್ದರೂ ಕೂಡ ತಾರತಮ್ಯ ಮಾಡದೇ ಎಲ್ಲರಿಗೂ ಅನುದಾನ ನೀಡಿದ್ದೇನೆ.  ನನಗೆ ಜಿಲ್ಲೆಯ ಅಭಿವೃದ್ಧಿ ಮುಖ್ಯವಾಗಿತ್ತೇ ವಿನಃ ರಾಜಕೀಯ ಮಾಡುವ ಮನಸ್ಥಿತಿ ಇದ್ದಿರಲಿಲ್ಲ,ಆದರೆ ಈಗಿನ ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುವುದಲ್ಲದೇ ಮಂಜೂರಾದ ಕಾಮಗಾರಿಗಳಿಗೆ ಅನುದಾನ ತಡೆಹಿಡಿಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ:

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಕೂಡಾ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ಪ್ರಶ್ನಿಸುವ ಧೈರ್ಯ ಯಾರು ಮಾಡುತ್ತಿಲ್ಲ. ಕಳೆದ ತಿಂಗಳು ರಾಜ್ಯದಲ್ಲಿ ಸಂಭವಿಸಿದ ಭೀಕರ ನೆರೆಯಿಂದ ಆ ಭಾಗದ ಸುಮಾರು 7 ಲಕ್ಷ ಜನರು ಮನೆ ಮಠ ಕಳೆದುಕೊಂಡು ಬೀದಿಪಾಲಾಗಿ ಗಂಜಿ ಕೇಂದ್ರದಲ್ಲಿ ವಾಸಿಸುವ ಪರಿಸ್ಥಿತಿ ಇದೆ. ಆ ಭಾಗದ ಜನರು ಪರಿಹಾರ ಕೇಳಿದರೆ 10 ಸಾವಿರ ಕೊಟ್ಟು ಅದೇ ಬಹಳವಾಯಿತು ಎಂದು ಒಬ್ಬ ಸಚಿವರು ಹೇಳಿದರೆ ಇನ್ನೊಬ್ಬರು ನನ್ನ ಹೊಲದಲ್ಲಿ ನೆರೆಗೆ 1 ಕೋಟಿ ಹಾನಿಯಾಗಿದೆ, ಪರಿಹಾರ ದೊರತರೆ ನನಗೆ ಮೊದಲು ಸಿಗಬೇಕು ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ರಾಜ್ಯವು ನೆರೆ ಸಂತ್ರಸ್ತರಿಗಾಗಿ 38 ಸಾವಿರ ಕೋಟಿ ಪರಿಹಾರ ಕೇಳಿದರೆ ಕೇಂದ್ರ 14  ಸಾವಿರ ಕೋಟಿ ನೀಡಿದೆ. ಇದೆಲ್ಲ ನೋಡಿದರೆ ಈ ಸರ್ಕಾರ ಯಾರ ಪರ ಇದೆ ಎನ್ನುವುದೇ ಅನುಮಾನ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್, ತಾಪಂ ಸದಸ್ಯ ರವಿ ಪಡ್ಲಾ, ಜಿಪಂ ಸದಸ್ಯ ಶಿವರುದ್ರ ಭೀಣಿ,ಭೀಮಣ್ಣ ಸಾಲಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿಗೌಡ ನಾಲವಾರ, ಗ್ರಾಪಂ ಅಧ್ಯಕ್ಷ ಸಾಬಣ್ಣಸೊಮನ್, ಜಯಪ್ರಕಾಶ್ ಕಮಕನೂರ, ಸಿದ್ದಮ್ಮಕಾಸನೂರ, ಮಲ್ಲಿಕಾರ್ಜುನ ಡಬ್ಬಿಗೇರ, ಸಾಹೇಬಗೌಡಪೊಲೀಸ್ ಪಾಟೀಲ್, ಶರಣು ಡೊಣಗಾಂವ, ದೇವಿಂದ್ರ ಅಣಕಲ್, ಹಣಮಂತ ಸಂಕನೂರ ಸೇರಿದಂತೆ ಇತರರುಇದ್ದರು. ಸಾಬಣ್ಣ ಮಡ್ಡಿ ಸ್ವಾಗತಿಸಿದರು.

ಸಚಿವ ಸ್ಥಾನ ನೀಡದೇ ಜಿಲ್ಲೆ ಕಡೆಗಣನೆ

ರಾಜ್ಯ ಸರ್ಕಾರ ವಿಭಾಗೀಯ ಜಿಲ್ಲೆಯಾಗಿರುವ ಕಲಬುರಗಿ ಸಚಿವ ಸ್ಥಾನ ನೀಡದೇ ಜಿಲ್ಲೆಗೆ ಅನ್ಯಾಯ ಮಾಡಿದೆ. ಅವರ ಪಕ್ಷದವರೇ 5 ವಿಧಾನಸಭೆ ಮತ್ತು ಪರಿಷತ್ ಸದಸ್ಯರು ಇದ್ದರೂ ಕೂಡಾ ಸಚಿವ ಸ್ಥಾನ ನೀಡದಿರುವ ಕುರಿತು ಅವರಿಗೆ ಹೈಕಮಾಂಡ್ ಪ್ರಶ್ನಿಸುವ ಧೈರ್ಯ ಇಲ್ಲಎಂದು ಕುಟುಕಿದರು. ಬಿಜೆಪಿ ಶಾಸಕರು ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಹೈಕಮಾಂಡ್ ಮೇಲೆ ಒತ್ತಡ ಹೇರಲು ಶಾಸಕರು, ಜಿಪಂ, ತಾಪಂ, ಗ್ರಾಪಂ ಚುನಾಯಿತ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಾನು ಅದರಲ್ಲಿ ಭಾಗಿಯಾಗಿ ಸಚಿವರ ಸ್ಥಾನಕ್ಕೆಒತ್ತಾಯ ಮಾಡುವುದಾಗಿ ತಿಳಿಸಿದರು.