ಕಲಬುರಗಿಯಲ್ಲಿ ಸದ್ಯಕ್ಕಿಲ್ಲ ವಿಮಾನ ಹಾರಾಟ: ಮತ್ತೆ ನಿರಾಸೆ
ವಿಮಾನ ಹಾರಾಟ ಇನ್ನೆರಡು ತಿಂಗಳು ಅನುಮಾನ| ನ.1 ರಂದೇ ಪ್ರಧಾನಿ ಮೋದಿಯಿಂದ ಯೋಜನೆಗೆ ಚಾಲನೆ ನೀಡುವ ಭರವಸೆ ಈ ಮುಂಚೆ ನೀಡಲಾಗಿತ್ತು| ನಿಲ್ದಾಣದಲ್ಲಿನ ಬಾಕಿ ಕಾಮಗಾರಿಗಳು ಇನ್ನೂ ಮುಗಿದಿಲ್ಲ, ಹೀಗಾಗಿ ರಾಜ್ಯೋತ್ಸವ ಡೆಡ್‌ಲೈನ್ ರದ್ದು| ಚಳಿಗಾಲದ ಅಧಿವೇಶನದ ಡೆಡ್‌ಲೈನ್ ನೀಡಿದ್ದಾರೆ ಎಂದ ಉಮೇಶ ಜಾಧವ್| ನ.18 ರಿಂದ ಡಿ.13 ರವರೆಗೆ ಸಂಸತ್ತಿನ ಚಳಿಗಾಳ ಅಧಿವೇಶನ, ಬಾಕಿ ಕಾಮಗಾರಿ ಅಷ್ಟರೊಳಗೇ ಮುಗಿತಾವಾ?|
ಶೇಷಮೂರ್ತಿ ಅವಧಾನಿ
ಕಲಬುರಗಿ(ಅ.29): ಕಲಬುರಗಿ ಜನರ 3 ದಶಕಗಳ ಬೇಡಿಕೆಯಾದ ’ಲೋಹದ ಹಕ್ಕಿ’ ಹಾರಾಟಕ್ಕೆ ನಿಗದಿಯಾಗಿದ್ದ ಕನ್ನಡ ರಾಜ್ಯೋತ್ಸವ ಡೆಡ್‌ಲೈನ್ ಕೊನೆ ಗಳಿಗೆಯಲ್ಲಿ ಸದ್ದಿಲ್ಲದೆ ಮುಂದೂಡಲ್ಪಟ್ಟಿದೆ.
ಸಂಪೂರ್ಣ ರಾಜ್ಯ ಸರಕಾರದ ಹಾಗೂ ಸ್ಥಳೀಯ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನ 175 ಕೋಟಿ ವೆಚ್ಚದಲ್ಲಿ 700 ಎಕರೆ ವಿಶಾಲ ಭೂಪ್ರದೇಶದಲ್ಲಿ ತಲೆ ಎತ್ತಿರುವ ಸುಸಜ್ಜಿತ ವಿಮಾನ ನಿಲ್ದಾಣದಲ್ಲಿನ ಕೊನೆ ಹಂತದ ಕಾಮಗಾರಿಗಳು ಇನ್ನೂ ನಡೆಯುತ್ತಿರುವುದರಿಂದ ರಾಜ್ಯೋತ್ಸವ ದಿನದಿಂದಲೇ ಇಲ್ಲಿಂದ ಶುರುವಾಗಬೇಕಿದ್ದ ಬಹು ನಿರೀಕ್ಷಿತ ವಿಮಾನಯಾನ ಸೇವೆ ಕೊನೆ ಗಳಿಗೆಯಲ್ಲಿ ಮುಂದೂಡಲ್ಪಟ್ಟಿರೋದು ಸಾರ್ವಜನಿಕ ವಲಯದಲ್ಲಿ ನಿರಾಶೆ ಮೂಡಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಂಸದ ಉಮೇಶ ಜಾಧವ್ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿದ ಮರುಕ್ಷಣವೇ ಕಲಬುರಗಿಯಿಂದ ಕನ್ನಡ ರಾಜ್ಯೋತ್ಸವ ದಿನ ನ.1ರಂದೇ ವಾಣಿಜ್ಯ ವಿಮಾನಸೇವೆ ಆರಂಭದ ಘೋಷಣೆ ಮಾಡಿದ್ದರು. ಆದರೆ, ಅವರೇ ಇಂದು ಚಳಿಗಾಲದ ಅಧಿವೇಶನದೊಳಗಾದರೂ ಯೋಜನೆಗೆ ಚಾಲನೆ ಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.
ಸಂಸದ ಜಾಧವ ಅವರು, ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕೊನೆಯ ಹಂತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ನ.18 ರಿಂದ ಡಿ.13ರ ವರೆಗೆ ನಡೆಯಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಪೂರ್ವದಲ್ಲೇ ವಿಮಾನ ಯೋಜನೆಗೆ ಚಾಲನೆ ನೀಡುವಂತೆ ಕ್ರಮಕ್ಕೆ ಮುಂದಾಗಿರಿ ಎಂದು ಅಧಿಕಾರಿಗಳನ್ನೇನೋ ಸೂಚಿಸಿದ್ದಾರೆ.
ಆದರೆ ಸಂಸದ ಡಾ. ಜಾಧವರ ಈ ಹೊಸ ಡೆಡ್‌ಲೈನ್ ಸಹ ವರ್ಕೌಟ್ ಆಗೋದು ಡೌಟ್. ಏಕೆಂದರೆ ವಿಮಾನ ನಿಲ್ದಾಣ ಕಾರ್ಯಾರಂಭದ ಪ್ರಮುಖ ಘಟ್ಟವೆ ಕೊನೆ ಹಂತದ ಕಾಮಗಾರಿಗಳ ಮೇಲಿದೆ. ತುರ್ತು ಲ್ಯಾಂಡಿಂಗ್ ಇತ್ಯಾಗಿ ಕೆಲಸಗಳು ಇಲ್ಲಿನ್ನೂ ಆಗಬೇಕಿಉದೆ. ಹೀಗಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರ ಈ ನಿಲ್ದಾಣದಿಂದ ವಾಣಿಜ್ಯ ಸೇವೆಗೆ ಇಂತಿಂತಹ ಕೆಮಗಾರಿಗಳೆಲ್ಲವೂ ಪೂರ್ಣಗೊಳ್ಳಲಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದರಿಂದಾಗಿ ವಾಸ್ತ ಅರಿಯದೆ ಉದ್ಘಾಟನೆಯ ದಿನಾಂಕ ನಿಗದಿಪಡಿಸುತ್ತಿರುವ ಜನನಾಯಕರಿಗೆ ತುಸು ಮುಜುಗುರ ಉಂಟುಮಾಡಿದೆ.
ಚಿಳಿಗಾಲದ ಅಧಿವೇಶನ ಶುರುವಾದಲ್ಲಿ ಪ್ರಧಾನಿಗಳು ಯೋಜನೆ ಉದ್ಘಾಟನೆಗೆ ಸಮಯ ನೀಡಿವುದೋ ದುಸ್ತರವಾಗುತ್ತದೆ. ಹೀಗಾಗಿ ಅಧಿವೇಶನ ಪೂರ್ವದಲ್ಲಿ ನಿಲ್ದಾಣಕ್ಕೆ ಚಾಲನೆ ದೊರಕದೆ ಹೋದಲ್ಲಿ ಅದು ಅಂದಾಜು 2 ತಿಂಗಳು ಮುಂದೆ ಹೋಗೋದಂತೂ ನಿಶ್ಚಿತ ಎನ್ನಲಾಗುತ್ತಿದೆ. ಹೆಚ್ಚುಕಡಿಮೆ 2020, ಜನೆವರಿ 1 ರಂದು, ಹೊಸ ವರುಷದ ಕೊಡುಗೆಯಾಗಿ ಈ ನಿಲ್ದಾಣಕ್ಕೆ ಚಾಲನೆ ನೀಡುವ ಎಲ್ಲಾ ಲಕ್ಷಣಗಳು ಇವೆ. ಆದರೆ ವಿಮಾನ ಹಾರಿಸುವ ಆತುರದಲ್ಲಿರುವ ಜನನಾಯಕರು ಗಳಿಗ್ಗೊಂದು ಹೇಳಿಕೆ ನೀಡುತ್ತ ಏತನ್ಮಧ್ಯದಲ್ಲೇ ಮುಹೂರ್ತ ನಿಗದಿಗೆ ಹರಸಾಹಸ ಪಟ್ಟರು ಅಚ್ಚರಿ ಪಡಬೇಕಿಲ್ಲ.
ಸ್ಟಾರ್ ಏರ್‌ಲೈನ್ಸ್ ವಿಮಾನ ಸೇವೆ ನೀಡಲು ಸಿದ್ಧ!
ಕೇಂದ್ರದ ಉಡಾನ್ ಯೋಜನೆಯಡಿಯಲ್ಲಿರುವ ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಸೇವೆ ನೀಡಲು ತಾವು ಸಿದ್ಧವೆಂದು ಸಂಜಟ್ ಘೋಡಾವತ್ ಗುಂಪಿನ ಸ್ಟಾರ್ ಏರ್‌ಲೈನ್ಸ್ ಅಧಿಕಾರಿಗಳು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಟಾರ್ ಗುಂಪಿನ ಹಿರಿಯ ಅಧಿಕಾರಿಗಳು ಸಂದೇಶ ರವಾನಿಸುವ ಮೂಲಕ ವಿಮಾನ ಹಾರಾಟದ ನಿರೀಕ್ಷೆಯಲ್ಲಿರುವ ಕಲಬುರಗಿ ಭಾಗದ ಜನಮನದಜಲ್ಲಿ ಹೊಸ ಕನಸು ಬಿತ್ತಿದಂತಾಗಿದೆ. ಇದಲ್ಲದೆ ಲಯನ್ಸ್ ಏರ್‌ಲೈನ್ ಸಹ ಕಲಬುರಗಿ ತಿರುಪತಿ, ದೆಹಲಿ ನಡುವೆ ವಿಮಾನ ಹಾರಾಟಕ್ಕೆ ಒಪ್ಪಂದ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಕಲಬುರಗಿಯಿಂದ 3 ವಿಮಾನಯಾನ ಸಂಸ್ಥೆಗಳಿಗೆ ವಿಮಾನ ಸೇವೆ ಒದಗಿಸುವ ಪರವಾನಿಗೆ ಉಡಾನ್ ಯೋಜನೆಯಲ್ಲಿ ಲಭಿಸಿದೆ.
ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಜಂಗಲ್ ಸ್ವಚ್ಛತೆ, ನೆಲಹಾಸು ಸ್ವಚ್ಛತೆ, ಗುಣಮಟ್ಟದ ರಸ್ತೆ ಸೇರಿದಂತೆ ಬಾಕಿ ಕಾಮಗಾರಿಗಳು ಮುಗಿಸಿ ಉದ್ಘಾಟನೆಗೆ ಅಣಿಯಾಗಿಸಬೇಕು. ಸುಂದರವಾಗಿ ಕಾಣುವಂತೆ ಲ್ಯಾಂಡ್ ಸ್ಕೇಪಿಂಗ್ ಮಾಡಿ. ನ.18ರಿಂದ ಡಿ.13ರ ವರೆಗೆ ಸಂಸತ್ತಿನ ಚಳಿಗಾಳ ಅಧಿವೇಶನ ನಡೆಯುವುದರಿಂದ ಅದಕ್ಕೆ ಪೂರ್ವದಲ್ಲಿಯೆ ಲೋಕಾರ್ಪಣೆಗೆ ಬಾಕಿ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ತಾಂತ್ರಿಕ ವರದಿ ಪಡೆದು ಮುಖ್ಯಮಂತ್ರಿಗಳ ಮೂಲಕ ಪ್ರಧಾನಮಂತ್ರಿಯವರನ್ನು ಉದ್ಘಾನೆಗೆ ಅಧಿಕೃತವಾಗಿ ಆಹ್ವಾನಿಸಲು ಕ್ರಮ ವಹಿಸಿರಿ, ಈ ಬಗ್ಗೆ ಈಗಾಗಲೆ ಕೇಂದ್ರ ವಿಮಾನಯಾನ ಸಚಿವರನ್ನು ದೆಹಲಿಯಲ್ಲಿ ಭೇಟಿಯಾಗಿ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಮನವಿ ಮಾಡಿದ್ದೇನೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಅವರು ಹೇಳಿದ್ದಾರೆ.