ಕಲಬುರಗಿ[ಅ.21]: ರಾಜ್ಯ ಬಿಜೆಪಿ ನಾಯಕ ಉಮೇಶ್ ಕತ್ತಿ ಬಳಿಕ ಕಲ್ಯಾಣ ಕರ್ನಾಟಕದಲ್ಲಿ ಇದೀಗ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ. ಹಿಂದೆಯೂ ಈ ಕೂಗು ಇತ್ತಾದರೂ ಕಲಂ 371 (ಜೆ) ಜಾರಿಗೊಂಡ ನಂತರ ತುಸು ತಗ್ಗಿತ್ತು. ಆದರೀಗ ಬಿಜೆಪಿ ಸರ್ಕಾರದಲ್ಲಿ ಕ.ಕ ಪ್ರದೇಶ ಕಡೆಗಣಿಸಿರುವುದಕ್ಕೆ ಇಲ್ಲಿನ ಹೋರಾಟಗಾರರು ಪ್ರತ್ಯೇಕ ರಾಜ್ಯದ ಕೂಗು ಹಾಕಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೇಲಿಂದ ಮೇಲೆ ಅನ್ಯಾಯವಾಗುತ್ತಿದೆ. ಯಾವ ಪಕ್ಷದ ಸರ್ಕಾರ ಬಂದರು ಅನ್ಯಾಯ ಮುಂದುವರಿದಿದ್ದು, ಹೀಗಾಗಿ ಪ್ರತ್ಯೇಕ ರಾಜ್ಯದ ಕೂಗು ಹಾಕುತ್ತಿದ್ದೇವೆ ಎಂದು ಕ.ಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಮಹಾದೇವಪ್ಪಗೌಡ ಪಾಟೀಲ್‌ ನರಿಬೋಳ್  ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಹೆಸರಿಡಲಾಯ್ತೇ ವಿನಹಃ ನಿಜಾರ್ಥದಲ್ಲಿ ಕಲ್ಯಾಣ ಕೆಲಸ ಮಾಡುವ ಮನಸ್ಸು ಸರ್ಕಾರಕ್ಕಿಲ್ಲ. ನಮ್ಮ ಭಾಗಕ್ಕೆ ರಾಜಕೀಯವಾಗಿ, ಆರ್ಥಿಕ ಹಾಗೂ ಸಾಮಾಜಿಕವಾಗಿ ಆಳುವವರಿಂದ ನಿರಂತರ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ನಮ್ಮ ಜನಪ್ರತಿನಿಧಿಗಳು ಧ್ವನಿ ಎತ್ತದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶವ್ಯ ಕ್ತಪಡಿಸಿದ್ದಾರೆ.

ಈ ಪ್ರದೇಶ ಸಮಗ್ರ ಅಭಿವೃದ್ಧಿ ಪತದಲ್ಲಿ ಸಾಗಬೇಕಾದರೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಆದಾಗ ಮಾತ್ರ ಸಾಧ್ಯ ಎಂದು ಈ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿ ಜನಾಂದೋಲನ ರೂಪ ಪಡೆಯುವಂತೆ ಮಾಡಬೇಕಾಗಿದೆ. ವಿಶೇಷವಾಗಿ ರಾಜಕಾರಣಿಗಳು ತಮಗೆ ಅಧಿಕಾರ ಸಿಗದಿದ್ದಾಗ ಪ್ರತ್ಯೇಕ ರಾಜ್ಯ ಮಾತನಾಡುತ್ತಾರೆ. ಅಧಿಕಾರ ಸಿಕ್ಕ ಕೂಡಲೇ ಮರಿಯುತ್ತಾರೆ. ಇದು ಗೋಸುಂಬೆ ರಾಜಕಾರಣ ಈಗ ಮಾಜಿ ಸಚಿವ ಉಮೇಶ್ ಕತ್ತಿ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿ ಅದು ಮಹಾರಾಷ್ಟ್ರದಿಂದ 03 ಜಿಲ್ಲೆಗಳು ಸೇರಿಸಿಕೊಂಡು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುತ್ತಾರೆ. 

ನಮ್ಮಹೋರಾಟ ಹಾಗಲ್ಲ, ಈ ಭಾಗದ ಪ್ರಗತಿಗೆ ಕಲಂ 371 ಬಂತು. ಆಗ ಹೋರಾಟ ತುಸು ತಗ್ಗಿತ್ತು. ಈಗತಕಲಂ 371 (ಜೆ) ಫಲ ಅಷ್ಟಾಗಿ ದೊರಕುತ್ತಿಲ್ಲಎಂಬುದು ದಿಟವಾಗಿದ್ದು ಈಗ ಹೋರಾಟ ಮತ್ತೆ ಹೆಚ್ಚಿನ ಉಗ್ರರೂಪ ತಳೆಯಲಿದೆ ಎಂದು ಮಹಾದೇವಪ್ಪ ಗೌಡ ಹೇಳಿದ್ದಾರೆ. ಕ.ಕ ಮಂಡಳಿಗೆ ಮುಂಬೈ ಕರ್ನಾಟಕದವರಿಗೆ ಅಧ್ಯಕ್ಷರನ್ನಾಗಿ ಮಾಡಿದರೆ ನಮಗೆ ನ್ಯಾಯ ಹೇಗೆ ಸಿಗುತ್ತದೆ?  ಕಾರಜೋಳ ಅವರು ವಿಜಯಪುರ, ಬಾಗಲಕೋಟೆ ಕಲಂ 371 (ಜೆ) ನಲ್ಲಿ ಸೇರಿಸುವ ಮಾತನ್ನಾಡಿದ್ದಾರೆ. ನಮಗೆ 6 ಜಿಲ್ಲೆಗಳೇ ಹೆಚ್ಚಾಯ್ತುಎಂದಿರುವಾಗ ಕಾರಜೋಳ ಸಾಹೇಬರು ಇನ್ನೂ 2 ಜಿಲ್ಲೆ ಎಳೆದು ತರುತ್ತಿದ್ದಾರೆ. ಇವರೇನಾದರೂ ಕ.ಕ ಮಂಡಳಿಗೆ ಅಧ್ಯಕ್ಷರಾದಲ್ಲಿ ನಮ್ಮ ಕಥೆ ಗೋವಿಂದ ಎಂದು ವ್ಯಂಗವಾಡಿದರು.

ಪ್ರತ್ಯೇಕ ರಾಜ್ಯ ಕೇಳೋದಾದ್ರೆ ಮುಂಬೈ ಕರ್ನಾಟಕ ಅಂತ್ಹೇಳ್ರಿ: 

ಕತ್ತಿಯವರೆ ನೀವು ರಾಜ್ಯ ಒಡೆಯುವುದು ಅಧಿಕಾರಗೋಸ್ಕರನಾ? ಅಭಿವೃದ್ಧಿಗೋಸ್ಕರನ ಎಂಬುದು ಸ್ಪಷ್ಟಪಡಿಸಿ. ಅಲ್ಲದೇ ನೀವು ಪ್ರತ್ಯೇಕ ರಾಜ್ಯ ಕೇಳುವುದಾದರೆ ಮುಂಬೈ ಕರ್ನಾಟಕ ಪ್ರತ್ಯೇಕ ರಾಜ್ಯದ ಕುರಿತು ಮಾತನಾಡಿ, ಏನಾದರು ಮಾಡಿ ಉತ್ತರ ಕರ್ನಾಟಕ ಎನ್ನಬೇಡಿ ಕಲ್ಯಾಣ ಕರ್ನಾಟಕ ಉತ್ತರ ಕರ್ನಾಟಕದಲ್ಲಿ ಸೇರಲು ಇಚ್ಛೀಸುವುದಿಲ್ಲ, ಅದು ಬೇಕಾಗಿಯೂ ಇಲ್ಲ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಅನ್ಯಾಯ ಮುಂಬೈ ಕರ್ನಾಟಕದವರಿಂದಲೇ ಆಗಿದೆ .ಅದಕ್ಕಾಗಿಯೇ 371 (ಜೆ) ತಿದ್ದುಪಡಿಗಾಗಿ ಹೋರಾಟ ಮಾಡಿದ್ದು, ಆದ್ದರಿಂದ ಮುಂಬೈ ಕರ್ನಾಟಕದವರ ಜೊತೆ ಸೇರಿ ಉತ್ತರ ಕರ್ನಾಟಕ ರಾಜ್ಯಕ್ಕೆ ನಾವು ಬೆಂಬಲಿಸುವುದಿಲ್ಲ. ನಮ್ಮದೇನ್ನಿದ್ದರು ಕಲ್ಯಾಣ ಕರ್ನಾಟಕ 6 ಜಿಲ್ಲೆಗಳ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ನಾವು ಹೋರಾಟ ಎಂದು ಕತ್ತಿಗೆ ತಿರುಗೇಟು ನೀಡಿದರು.

ಒಂದು ವೇಳೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಗೋವಿಂದ ಕಾರಜೋಳರನ್ನು ನೇಮಕ ಮಾಡಿದ್ದೆ ಆದರೆ ಅಭಿವೃದ್ಧಿ ಮಂಡಳಿ ಮೇಲೆಯೇ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಬೇಕಾಗುತ್ತದೆ. ಏನಾದರು ಎದುರಿಸಲು ಸಿದ್ಧರಿದ್ದೇವೆ. ಅಭಿವೃದ್ಧಿ ಮಂಡಳಿಗೆ ಹೋಗಿ ಅವರು ಅಧಿಕಾರ ಸ್ವೀಕಾರ ಮಾಡದಂತೆ ತಡೆಯುತ್ತೇವೆ. ಕ.ಕ ಪ್ರದೇಶಾಭಿವೃದ್ಧಿ ಮಂಡಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಮಹಾದೇವಪ್ಪ ಗೌಡ ಎಚ್ಚರಿಸಿದ್ದಾರೆ.

ನ.1ರ ರಾಜ್ಯೋತ್ಸವ ದಿನದಂದು ಕಲ್ಯಾಣದ ಹೆಬ್ಬಾಗಿಲು ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯದ ಧ್ವಜ ಹಾರಾಡಲಿದೆ. ನ.1 ರಂದು ಕಲಬುರಗಿಯ ಸರದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ನೆರವೇರಿಸುತ್ತೇವೆ ಎಂದು ಕ.ಕಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್ ಅವರು ಹೇಳಿದ್ದಾರೆ.