ನವದೆಹಲಿ(ನ.30): ಕೊರೋನಾ ವೈರಸ್‌ ಕಾರಣದಿಂದಾಗಿ ವರ್ಕ್ ಫ್ರಂ ಹೋಮ್‌ ಪದ್ಧತಿ ಜಾರಿಯಾದ ಬಳಿಕ ಭಾರತೀಯರ ಕೆಲಸದ ಅವಧಿ ಸುಮಾರು 32 ನಿಮಿಷಗಳಷ್ಟುಹೆಚ್ಚಳಗೊಂಡಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಆಸ್ಪ್ರೇಲಿಯಾದ ಅಟ್ಲಾಸಿಯನ್‌ ಎಂಬ ಸಾಫ್ಟ್‌ವೇರ್‌ ಕಂಪನಿ 65 ದೇಶಗಳಲ್ಲಿ ಸಮೀಕ್ಷೆ ನಡೆಸಿ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ, ಭಾರತೀಯ ಉದ್ಯೋಗಿಗಳು ಈ ವರ್ಷದ ಆರಂಭಕ್ಕೆ ಹೋಲಿಸಿದರೆ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ 32 ನಿಮಿಷ ಹೆಚ್ಚು ಅವಧಿ ಕೆಲಸ ಮಾಡಿದ್ದಾರೆ. ಇನ್ನು ಇಸ್ರೇಲ್‌ನಲ್ಲಿ ಕೆಲಸದ ಅವಧಿ ಅತ್ಯಧಿಕ 47 ನಿಮಿಷ ಹೆಚ್ಚಳಗೊಂಡಿದ್ದರೆ, ಅಮೆರಿಕದಲ್ಲಿ 32 ನಿಮಿಷ, ದಕ್ಷಿಣ ಆಫ್ರಿಕಾದಲ್ಲಿ 38 ನಿಮಿಷ, ಆಸ್ಪ್ರೇಲಿಯಾದಲ್ಲಿ 32 ನಿಮಿಷ, ಜಪಾನ್‌ನಲ್ಲಿ 16 ನಿಮಿಷ, ದಕ್ಷಿಣ ಕೊರಿಯಾದಲ್ಲಿ 7 ನಿಮಿಷ ಹೆಚ್ಚಳಗೊಂಡಿದೆ.

ವರ್ಕ್ ಫ್ರಂ ಹೋಮ್‌ ಇರುವುದರಿಂದ ಉದ್ಯೋಗಿಗಳು ಕಚೇರಿಗೆ ತೆರಳಲು ಬೇಕಾಗುತ್ತಿದ್ದ ಪ್ರಯಾಣದ ಸಮಯ ಉಳಿತಾಯವಾಗಿದೆ. ಜೊತೆಗೆ ಮನೆಯಲ್ಲೇ ಇರುವ ಕಾರಣ ದಿನದಲ್ಲಿ 10ರಿಂದ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಉದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಾಹ್ನ ಕೆಲಸ ನಿಧಾನ:

ಇದೇ ವೇಳೆ ವರ್ಕ್ ಫ್ರಂ ಹೋಮ್‌ನ ಲಾಭ ಪಡೆದು ಮಧ್ಯಾಹ್ನದ ವೇಳೆ ಉದ್ಯೋಗಿಗಳು ಕೆಲ ಹೊತ್ತು ವಿಶ್ರಾಂತಿಯ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನದ ಅವಧಿಯಲ್ಲಿ ಕೆಲಸದ ಅವಧಿ ಇಳಿಕೆ ಆಗುತ್ತಿದೆ. ಆದರೆ, ಮುಂಜಾನೆ ಮತ್ತು ಸಂಜೆಯ ಉದ್ಯೋಗಿಗಳು ಅಧಿಕ ಕೆಲಸ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.