ಬೆಂಗಳೂರು (ನ.18):  ರಾಜ್ಯದಲ್ಲಿ ಏಳು ಸಾವಿರ ಸಾರ್ಟ್‌ ಆಪ್‌ಗಳಿದ್ದು, ಮುಂದಿನ ಐದು ವರ್ಷದಲ್ಲಿ ಅದನ್ನು 20 ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಮಂಗಳವಾರ ಸುವರ್ಣ ನ್ಯೂಸ್‌-ಕನ್ನಡಪ್ರಭ ಸಂವಾದದಲ್ಲಿ ಪಾಲ್ಗೊಂಡು ಬೆಂಗಳೂರು ಟೆಕ್‌ ಶೃಂಗಸಭೆ ಕುರಿತು ಮಾತನಾಡಿದರು. ಮಾಹಿತಿ ತಂತ್ರಜ್ಞಾನವು ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಕೊಡುಗೆ ನೀಡಿದೆ. ಜೀವನ ಸುಧಾರಣೆಯಲ್ಲಿ ತಂತ್ರಜ್ಞಾನ ಪಾತ್ರ ಬಹಳ ಮುಖ್ಯ. ಮುಂದುವರಿದ ರಾಷ್ಟ್ರದ ಮಟ್ಟದಲ್ಲಿ ಐಟಿಯನ್ನು ಬಳಕೆ ಮಾಡಲಾಗುತ್ತಿದೆ. ವ್ಯವಸಾಯ, ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ಮಾಹಿತಿ ತಂತ್ರಜ್ಞಾನ ಅತ್ಯವಶ್ಯಕ. ಹೊರ ಗುತ್ತಿಗೆಯಿಂದ ಪ್ರಾರಂಭವಾಗಿ ಬೃಹತ್‌ ಮಟ್ಟದಲ್ಲಿ ಬೆಳೆದು ನಿಂತಿದೆ. ಐಟಿ ಕ್ಷೇತ್ರಕ್ಕೆ ಉಜ್ವಲ ಭವಿಷ್ಯ ಇದೆ ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿಯಲ್ಲಿ ಸಾರ್ಟ್‌ಆಪ್‌ ಮಹತ್ವದ ಕೊಡುಗೆ ನೀಡುತ್ತಿವೆ. 2014ರಿಂದ ಸ್ಟಾರ್ಟ್‌ಆಪ್‌ ಯುಗ ಆರಂಭಗೊಂಡಿದ್ದು, ಪ್ರಸ್ತುತ ಏಳು ಸಾವಿರ ಸಾರ್ಟ್‌ಆಪ್‌ಗಳು ಇವೆ. ಮುಂದಿನ ಐದು ವರ್ಷದಲ್ಲಿ ಇದರ ಸಂಖ್ಯೆ 20 ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಚಿಕ್ಕದಾಗಿ ಪ್ರಾರಂಭವಾದ ಸ್ಟಾರ್ಟ್‌ಆಪ್‌ಗಳು ದೊಡ್ಡದಾಗಿ ಬೆಳೆದ ಬಳಿಕ ಯೂನಿಕಾನ್‌ ಎಂದು ಕರೆಯಲಾಗುತ್ತದೆ. ಅಲ್ಪಾವಧಿಯಲ್ಲಿ ತಂತ್ರಜ್ಞಾನವನ್ನು ಬಳಸಿ ತಮ್ಮ ಕೌಶಲ್ಯ ಮೂಲಕ ಬೆಳೆದಿವೆ. ಇಂತಹ 14 ಯೂನಿಕಾನ್‌ ರಾಜ್ಯದಲ್ಲಿವೆ. ಮುಂದಿನ ದಿನದಲ್ಲಿ ಇವುಗಳ ಸಂಖ್ಯೆ 30ಕ್ಕೆ ಹೆಚ್ಚಳ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಹೊಸ ಬದಲಾವಣೆ ಮಾಡಲು ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

2 ಸಾವಿರ ಹುದ್ದೆಗಳ ನೇಮಕಾತಿಗೆ SBI ಅರ್ಜಿ ಆಹ್ವಾನ .

ವರ್ಚುವಲ್‌ ಮೂಲಕ ನ.19ರಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಬೆಂಗಳೂರು ಟೆಕ್‌ ಸಮ್ಮೇಳನದಲ್ಲಿ 250ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿವೆ. 25 ರಾಷ್ಟ್ರಗಳು ಸಮ್ಮೇಳನದಲ್ಲಿ ಪ್ರದರ್ಶನ ತೋರುತ್ತಿದ್ದು, ಅವರ ಬಲವನ್ನು ಪ್ರದರ್ಶಿಸುತ್ತಿವೆ. ಲಿಂಕ್‌ ಶೇರ್‌ ಮಾಡಲಾಗುತ್ತಿದ್ದು, ಅದರ ಮೂಲಕ ಸಮ್ಮೇಳನದಲ್ಲಿ ಭಾಗವಹಿಸಬಹುದಾಗಿದೆ. ಕಳೆದ ವರ್ಷದ ಶೃಂಗಸಭೆಯಲ್ಲಿ 15 ಸಾವಿರ ಮಂದಿ ಭಾಗವಹಿಸಿದ್ದು, ಈ ಬಾರಿ 20 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಪರಿಣಾಮಕಾರಿಯಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ವಿಶ್ವಕ್ಕೆ ರಾಜ್ಯದ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಆವಿಷ್ಕಾರಗಳು ವೇಗವಾಗಿ ಸಾಗುತ್ತಿದ್ದು, ದತ್ತಾಂಶಗಳು ಹೆಚ್ಚುತ್ತಿವೆ. ಭಾರತ ದೇಶದಲ್ಲಿ ನಡೆಯುತ್ತಿರುವ ಆವಿಷ್ಕಾರಗಳನ್ನು ಗಮನಿಸಿದ ಇತರೆ ರಾಷ್ಟ್ರಗಳಿಗೆ ಅಚ್ಚರಿಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಈ ಸಮ್ಮೇಳನವು ಸಾಕಷ್ಟುಪ್ರಯೋಜನವಾಗಲಿದೆ. ಭವಿಷ್ಯ ಯಾವ ದಿಕ್ಕಿಗೆ ಕೊಂಡ್ಯೊಯುತ್ತಿದೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಕಲಿಕೆ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಗೊತ್ತಿರಬೇಕು. ಐಟಿ ಕ್ಷೇತ್ರವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಉದ್ಯಮದಾರರಿಗೆ ಉತ್ತಮ ವೇದಿಕೆಯಾಗಲಿದ್ದು, ಭವಿಷ್ಯ ನಿರ್ಧರಿಸಿಕೊಳ್ಳಲು ಉತ್ತಮ ಸ್ಥಳವಾಗಲಿದೆ. ಸದ್ಯವಾದಷ್ಟುಐಟಿ ವಲಯವನ್ನು ಸರಳೀಕರಣ ಮಾಡಲಾಗುತ್ತಿದೆ. ಸಮ್ಮೇಳನವು ಹೊಸ ಮನ್ವಂತರಕ್ಕೆ ಸಾಕ್ಷಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರಮುಖ ಆರ್ಥಿಕ ವಲಯದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸಿ ಉತ್ತಮಗೊಳಿಸಲು ವಿವಿಧ ಉಪಕ್ರಮಗಳ ಮೂಲಕ ಉದ್ಯೋನ್ಮುಖ ಉದ್ಯಮದ ಸಾಮರ್ಥ್ಯಗಳಿಗೆ ಒತ್ತು ನೀಡಲು ಮತ್ತು ಪೂರಕ ಪರಿಸರ ವ್ಯವಸ್ಥೆಯನ್ನು ಬೆಳೆಸಿ ವರ್ಧಿಸಲು ಸರ್ಕಾರವು ತನ್ನ ಹೊಣೆಗಾರಿಕೆಯನ್ನು ಕಂಡುಕೊಂಡಿದೆ. ವ್ಯವಹಾರವನ್ನು ಹೆಚ್ಚು ಸುಗಮವಾಗಿ ಕೈಗೊಳ್ಳಲು ಅನುವಾಗುವಂತೆ ಐಟಿ ಸೇವೆಗಳ, ಯಂತ್ರಾಂಶ ಮತ್ತು ತಂತ್ರಾಂಶ ಉತ್ಪನ್ನಗಳ ಮತ್ತು ಕ್ಲೌಡ್‌ ಸಂಬಂಧಿತ ಸೇವೆ ಕುರಿತು ಸಾರ್ವಜನಿಕ ಸಂಗ್ರಹಣೆಯನ್ನು ಕ್ರಮದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿಗಳಲ್ಲಿ ಐಟಿ ಮೂಲಸೌಕರ್ಯವೂ ಒಂದು. ರಾಜ್ಯದ ಪ್ರಗತಿಯ ಒರೆಗಲ್ಲಿಗೆ ಇದು ಅತ್ಯಂತ ಸ್ಪಷ್ಟಸಾಕ್ಷಿಯಾಗಿದೆ. ಬೆಂಗಳೂರು ಹೊರತುಪಡಿಸಿ ಇತರೆ ನಗರಗಳ ಬೆಳವಣಿಗೆಯ ವೇಗವನ್ನು ವರ್ಧಿಸಲು ಈ ಸಮಾವೇಶ ಶ್ರೀಕಾರ ಹಾಕಲಿದೆ ಎಂದು ತಿಳಿಸಿದರು.

ಕಲಿಕೆ ಅವಧಿ ಕಡಿಮೆ ಮಾಡಲ್ಲ:

ಉನ್ನತ ಶಿಕ್ಷಣ ಕಾಲೇಜುಗಳು ಪ್ರಾರಂಭವಾಗಿದ್ದು, ಕಲಿಕೆ ಅವಧಿ ಕಡಿಮೆ ಮಾಡುವುದಿಲ್ಲ. ಶೈಕ್ಷಣಿಕ ಅವಧಿಯನ್ನು ನಿಗದಿಯಂತೆ ಇಡಲಾಗಿದೆ. ಪಠ್ಯಕ್ರಮದಲ್ಲಿಯೂ ಕಡಿಮೆ ಇಲ್ಲ. ಮಾಚ್‌ರ್‍ನಲ್ಲಿ ಪರೀಕ್ಷೆ ನಡೆಸಲಾಗುವುದು. ಸರಿಯಾಗಿ ವಿದ್ಯಾರ್ಥಿಗಳು ಕಲಿಕೆ ಮಾಡಿದಿದ್ದರೆ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಯಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಕಿವಿಮಾತು ಹೇಳಿದರು.