ಬೆಂಗಳೂರು (ಮಾ.03) : ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ 2016-17 ಹಾಗೂ 2017-18ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದುಕೊಂಡ ಅಭ್ಯರ್ಥಿಗಳಿಗೆ ಒಂದು ವರ್ಷ ಸರ್ಕಾರಿ ಮತ್ತು ಗ್ರಾಮೀಣ ಸೇವೆ ಕಡ್ಡಾಯ ನೀತಿ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಕಡ್ಡಾಯ ಸೇವಾ ಅಧಿನಿಯಮ-2012’ ಸಿಂಧುತ್ವ ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌. ದೇವದಾಸ್‌ ಈ ಆದೇಶ ಮಾಡಿದ್ದಾರೆ. 

2016-17 ಹಾಗೂ 2017-18ನೇ ಶೈಕ್ಷಣಿಕ ಸಾಲಿನ ಅಭ್ಯರ್ಥಿಗಳು ಕೋರ್ಸ್‌ಗೆ ಪ್ರವೇಶ ಪಡೆದ ವೇಳೆ ಪದವಿ ಪೂರ್ಣಗೊಳಿಸಿದ ನಂತರ ಕಡ್ಡಾಯವಾಗಿ ಒಂದು ವರ್ಷ ಸರ್ಕಾರಿ ಮತ್ತು ಗ್ರಾಮೀಣ ಸೇವೆ ಸಲ್ಲಿಸುವ ನೀತಿಯ ಬಗ್ಗೆ ಸಂಬಂಧಪಟ್ಟವೈದ್ಯಕೀಯ ಕಾಲೇಜುಗಳು ಮಾಹಿತಿ ನೀಡಿಲ್ಲ. ಪ್ರವೇಶದ ಮಾಹಿತಿ ಪುಸ್ತಿಕೆಯಲ್ಲಿ ಆ ಬಗ್ಗೆ ವಿವರ ಪ್ರಕಟಿಸಿರಲಿಲ್ಲ. ಮುಖ್ಯವಾಗಿ ಅಭ್ಯರ್ಥಿಗಳು ಪ್ರವೇಶದ ವೇಳೆ ಪದವಿ ಪಡೆದ ನಂತರ ಕಡ್ಡಾಯ ಸೇವೆ ಮಾಡುವ ಕುರಿತು ಬಾಂಡ್‌ ಸಹ ಬರೆದುಕೊಟ್ಟಿಲ್ಲ. ಇದರಿಂದ ಈ ಎರಡು ಸಾಲಿನ ಅಭ್ಯರ್ಥಿಗಳಿಗೆ ಕಡ್ಡಾಯ ಸೇವೆ ನೀತಿ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರೋಗಿಗಳಿಗೆ ಚಿಕಿತ್ಸೆ ನೀಡಲಾಗದ ಸ್ಥಿತಿ: ವೈದ್ಯರ ಎಚ್ಚರಿಕೆ!

ಹಾಗೆಯೇ, 2018-19ನೇ ಶೈಕ್ಷಣಿಕ ವರ್ಷ ಪ್ರವೇಶದ ವೇಳೆ ಅಭ್ಯರ್ಥಿಗಳಿಗೆ ಕಡ್ಡಾಯ ಸೇವೆ ಬಗ್ಗೆ ಪೂರ್ವ ಮಾಹಿತಿ ನೀಡಲಾಗಿದೆ. ಪ್ರವೇಶ ಮಾಹಿತಿ ಪುಸ್ತಿಕೆಯಲ್ಲಿ ವಿವರ ಪ್ರಕಟಿಸಲಾಗಿದೆ. ಪ್ರವೇಶದ ವೇಳೆ ಅಭ್ಯರ್ಥಿಗಳು ಬಾಂಡ್‌ ಸಹ ಬರೆದುಕೊಟ್ಟಿದ್ದಾರೆ. ಆದ್ದರಿಂದ 2018-19ನೇ ಶೈಕ್ಷಣಿಕ ವರ್ಷ ಮತ್ತು ನÜಂತರದಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆದು ಒಂದು ವರ್ಷದ ಸರ್ಕಾರಿ ಮತ್ತು ಗ್ರಾಮೀಣ ಸೇವೆ ಬಗ್ಗೆ ಬಾಂಡ್‌ ಬರೆದುಕೊಡುವ ಅಭ್ಯರ್ಥಿಗಳಿಗೆ ಈ ನೀತಿ ಅನ್ವಯವಾಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.