ಬೆಂಗಳೂರು (ಜೂ.30) : ರಾಜ್ಯ ಸರ್ಕಾರದ ಕುಟುಂಬ ಯೋಜನೆಯನ್ನು ಉತ್ತೇಜಿಸಲು ರಾಜ್ಯ ರಸ್ತೆ ಸಾರಿಗೆ ನಿಗಮವು ನೌಕರರಿಗೆ ‘ವಿಶೇಷ ವೇತನ ಬಡ್ತಿ’ ನೀಡುವುದಕ್ಕೆ ಮುಂದಾಗಿದೆ. 

ಒಂದು ಅಥವಾ ಎರಡು ಮಕ್ಕಳನ್ನು ಹೊಂದಿದ್ದು, ಎರಡು ವರ್ಷದಿಂದ ಈಚೆಗೆ ಸಂತಾಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸಂಸ್ಥೆಯ ನೌಕರರು (ಪತಿ ಅಥವಾ ಪತ್ನಿ) ಈ ವಿಶೇಷ ವೇತನ ಬಡ್ತಿಗೆ ಅರ್ಹರಾಗಿರುತ್ತಾರೆ. 

ಚಿಕಿತ್ಸೆ ಪಡೆದ ದಿನಾಂಕದಿಂದ  ವಿಶೇಷ ವೇತನ ಬಡ್ತಿ ಅನ್ವಯವಾಗಲಿದೆ. ಅದು ಅವರ ಹುದ್ದೆಯ ವೇತನ ಶ್ರೇಣಿಯ ವಾರ್ಷಿಕ ವೇತನ ಬಡ್ತಿ ಆಧರಿಸಿರಲಿದ್ದು, ತಮ್ಮ ಪೂರ್ಣ ಸೇವಾವಧಿಗೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ. ನೌಕರರು ಮಾತ್ರವಲ್ಲದೇ ತರಬೇತಿ ಹಂತದಲ್ಲಿರುವ ಸಿಬ್ಬಂದಿಯೂ ಅರ್ಜಿಸಲ್ಲಿಸಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಆದೇಶದಲ್ಲಿ ತಿಳಿಸಿದ್ದಾರೆ.