ಗೋವಾ(ಡಿ.12): 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಎಟಿಕೆ ಮೋಹನ್ ಬಗಾನ್ ಹಾಗೂ ಹೈದ್ರಾಬಾದ್ ಎಫ್‌ಸಿ ನಡುವಿನ ಪಂದ್ಯ 1-1 ಗೋಲುಗಳಲ್ಲಿ ಡ್ರಾ ಗೊಂಡಿತು.

ಮೊದಲಾರ್ಧದಲ್ಲೊ ಎಟಿಕೆ ಮೋಹನ್ ಬಗಾನ್ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಪಂದ್ಯದ 55ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಆಕರ್ಷಕ ಗೋಲು ಬಾರಿಸುವ ಮೂಲಕ ಎಟಿಕೆ ತಂಡದ ಪರ ಗೋಲಿನ ಖಾತೆ ತೆರೆದರು. ಆದರೆ ಪಂದ್ಯದ 65ನೇ ನಿಮಿಷದಲ್ಲಿ ನಿಕಿಲ್ ಪೂಜಾರಿ ಹಾಗೂ ಜಾವ ವಿಕ್ಟರ್‌ ಕಾಂಬಿನೇಷನ್‌ನಲ್ಲಿ ರೋಚಕ ಗೋಲು ದಾಖಲಾಗುವ ಮೂಲಕ ಉಭಯ ತಂಡಗಳು ತಲಾ 1-1 ಗೋಲು ದಾಖಲಿಸಿದವು.

ಇನ್ನು ಆ ಬಳಿಕ ಎರಡು ತಂಡಗಳು ಮುನ್ನಡೆ ಸಾಧಿಸಲು ಸಾಕಷ್ಟು ಪ್ರಯತ್ನಿಸಿದವಾದರೂ ಗೋಲು ಗಳಿಸಿಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.  5 ಪಂದ್ಯಗಳಿಂದ 10 ಅಂಕ ಗಳಿಸಿರುವ ಎಟಿಕೆ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, 4 ಪಂದ್ಯಗಳಿಂದ 6 ಅಂಕ ಗಳಿಸಿರುವ ಹೈದ್ರಾಬಾದ್ ಫುಟ್ಬಾಲ್ ಕ್ಲಬ್ 5ನೇ ಸ್ಥಾನದಲ್ಲಿದೆ. 

ಮಾಜಿ ಫುಟ್ಬಾಲಿಗೆ ಯತಿರಾಜ್ ನಿಧನ

ಬೆಂಗಳೂರು: ಭಾರತದ ಮಾಜಿ ಫುಟ್ಬಾಲಿಗ, ಬೆಂಗಳೂರು ಮೂಲದ ಧರ್ಮಲಿಂಗಮ್ ಯತಿರಾಜ್(86) ಶುಕ್ರವಾರ ನಿಧನರಾಗಿದ್ದಾರೆ. ಯತಿರಾಜ್ 1962ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕ ಜಯಿಸಿದ್ದರು. ಇವರ ನಿಧನಕ್ಕೆ ಕರ್ನಾಟಕ ಫುಟ್ಬಾಲ್ ಸಂಸ್ಥೆ ಸಂತಾಪ ಸೂಚಿಸಿದೆ.