ಅಯ್ಯಯ್ಯೋ, ಐಪಿಎಲ್ ಕ್ರಿಕೆಟಿಗರ ಪತ್ನಿಯರಿಗೂ ಡ್ರಗ್ಸ್ ಚಟ..!
ಡ್ರಗ್ಸ್ ಮಾಫಿಯಾ ಕಹಾನಿ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸದ್ಯ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ಡ್ರಗ್ಸ್ ಭೂತ ಇದೀಗ ಕ್ರಿಕೆಟಿಗರು ಹಾಗೂ ಅವರ ಪತ್ನಿಯರನ್ನು ಸುತ್ತಿಕೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಸೆ.25): ಮಾದಕ ವಸ್ತು ಲೋಕದ ಜತೆ ಬಾಲಿವುಡ್ ಹೊಂದಿರುವ ನಂಟಿನ ಕುರಿತು ತನಿಖೆ ನಡೆಯುತ್ತಿರುವಾಗಲೇ, ಚಿತ್ರ ನಟಿ ಶೆರ್ಲಿನ್ ಚೋಪ್ರಾ ಹೊಸ ಬಾಂಬ್ ಸಿಡಿಸಿದ್ದಾರೆ.
ಐಪಿಎಲ್ ಕ್ರಿಕೆಟ್ ಪಂದ್ಯದ ಬಳಿಕ ನಡೆಯುವ ಪಾರ್ಟಿಗಳಲ್ಲಿ ಎಗ್ಗಿಲ್ಲದೆ ಡ್ರಗ್ಸ್ ಸೇವನೆ ನಡೆಯುತ್ತದೆ. ಇಂತಹ ಒಂದು ಪಾರ್ಟಿಗೆ ನಾನೂ ಸಾಕ್ಷಿಯಾಗಿದ್ದೇನೆ. ಚಿತ್ರ ನಟಿಯರು, ಕ್ರಿಕೆಟಿಗರ ಪತ್ನಿಯರು ಮಾದಕ ವಸ್ತು ಸೇವಿಸುವುದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿದ್ದಾರೆ.
ಚಿತ್ರ ನಟರ ಡ್ರಗ್ಸ್ ನಂಟಿನ ಕುರಿತು ತನಿಖೆ ನಡೆಸುತ್ತಿರುವ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಸೂಚಿಸಿದರೆ, ವಿಚಾರಣೆಗೆ ಹಾಜರಾಗಿ ನೆರವಾಗಲೂ ಸಿದ್ಧಳಿದ್ದೇನೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ನಟರ ಜತೆಗೆ ಕ್ರಿಕೆಟಿಗರಿಗೂ ಸಂಕಷ್ಟ ಶುರುವಾಗುವ ಲಕ್ಷಣ ಗೋಚರವಾಗತೊಡಗಿದೆ.
ಶೆರ್ಲಿನ್ ಹೇಳಿದ್ದೇನು?:
ಹಿಂದಿ ಸುದ್ದಿವಾಹಿನಿಯೊಂದರ ಜತೆ ಮಾತನಾಡಿರುವ ಶೆರ್ಲಿನ್, ಕೋಲ್ಕತಾದಲ್ಲಿ ಆಯೋಜನೆಗೊಂಡಿದ್ದ ಐಪಿಎಲ್ ಪಂದ್ಯ ನೋಡಲು ಹೋಗಿದ್ದೆ. ಪಂದ್ಯದ ನಂತರ ನಡೆವ ಪಾರ್ಟಿಗೆ ಆಹ್ವಾನ ಬಂದಿತ್ತು. ಅದರಲ್ಲಿ ಜನಪ್ರಿಯ ಕ್ರಿಕೆಟಿಗರು, ಅವರ ಪತ್ನಿಯರು ಭಾಗವಹಿಸಿದ್ದರು. ಪಾರ್ಟಿಯಲ್ಲಿ ಡಾನ್ಸ್ ಮಾಡಿ ಸುಸ್ತಾದ ಕಾರಣ ಶೌಚಾಲಯಕ್ಕೆ ಹೋದೆ. ಅಲ್ಲಿ ನನಗೆ ಆಘಾತ ಕಾದಿತ್ತು. ಸ್ಟಾರ್‌ಗಳ ಪತ್ನಿಯರು ಕೊಕೇನ್ ಸೇವಿಸುತ್ತಿದ್ದರು. ನನ್ನನ್ನು ನೋಡಿ ನಕ್ಕರು. ನಾನೂ ನಕ್ಕು ವಾಪಸಾದೆ. ಒಂದು ವೇಳೆ, ನಾನೇನಾದರೂ ಪುರುಷರ ಶೌಚಾಲಯಕ್ಕೆ ಹೋಗಿದ್ದರೆ ಚಿತ್ರಣ ಬೇರೆಯದೇ ಇರುತ್ತಿತ್ತು. ಇಂತಹ ಡ್ರಗ್ಸ್ ಪಾರ್ಟಿಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.

