ಅಬು ಧಾಬಿ(ನ.06): ಹೊಸ ತಂಡ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಹೊಸ ಬೆಳಕು ಸೇರಿದಂತೆ ಹಲವು ಅಂಶಗಳು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವರವಾಗಿತ್ತು. ಹೀಗಾಗಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟ ಕೊಹ್ಲಿ ಸೈನ್ಯ, ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹತ್ವದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ಹೀಗಾಗಿ ಗೆಲುವಿಗೆ 132 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಸುಲಬ ಗೆಲುವು ನಿರೀಕ್ಷಿಸಿತ್ತು. ಆದರೆ ಆರ್‌ಸಿಬಿ ಬೌಲಿಂಗ್ ದಾಳಿಗೆ ಸನ್‌ರೈಸರ್ಸ್ ಹೈದರಾಬಾದ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡಿತು.

ಆರಂಭಿಕ ಶ್ರೀವತ್ಸ ಗೋಸ್ವಾಮಿ ಡಕೌಟ್ ಆದರೆ, ನಾಯಕ ಡೇವಿಡ್ ವಾರ್ನರ್ 17 ರನ್ ಸಿಡಿಸಿ ನಿರ್ಗಮಿಸಿದರು. ಮನೀಶ್ ಪಾಂಡೆ ಹಾಗೂ ಕೇನ್ ವಿಲಿಯಮ್ಸ್ ಬ್ಯಾಟಿಂಗ್‌ನಿಂದ ಹೈದರಾಬಾದ್ ಚೇತರಿಸಿಕೊಂಡಿತು. ಆದರೆ ಪಾಂಡೆ 24 ರನ್ ಸಿಡಿಸಿ ಔಟಾದರು. ಪ್ರಿಯಂ ಗರ್ಗ್ ಕೇವಲ  7 ರನ್ ಸಿಡಿಸಿ ಔಟಾದರು.

ಕೇನ್ ವಿಲಿಯಮ್ಸನ್ ಹಾಗೂ ಜೇಸನ್ ಹೋಲ್ಡರ್ ಜೊತೆಯಾಟದಿಂದ ಹೈದರಾಬಾದ್ ತಂಡ ಕೊಂಚ ನಿಟ್ಟುಸಿರುಬಿಟ್ಟಿತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಲಿಯಮ್ಸನ್ ಹಾಗೂ ಹೋಲ್ಡರ್ ಜೊತೆಯಾಟಕ್ಕೆ ಬ್ರೇಕ್ ಹಾಕಲು ಇನ್ನಿಲ್ಲದ ಪ್ರಯತ್ನ ಮಾಡಿತು.  

ಕೇನ್ ವಿಲಿಯಮ್ಸನ್ ಅಜೇಯ 50 ಹಾಗೂ ಹೋಲ್ಡರ್ ಅಜೇಯ 24 ರನ್ ಸಿಡಿಸಿದರು. ಈ ಮೂಲಕ ಹೈದರಾಬಾದ್ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 6 ವಿಕೆಟ್ ಗೆಲುವು ದಾಖಲಿಸಿದ ಹೈದರಾಬಾದ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2ನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ.