ದುಬೈ(ಅ.25): ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಕಳೆದುಕೊಂಡು 145 ರನ್ ಬಾರಿಸಿದೆ.

ಹೌದು, ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಆರ್‌ಸಿಬಿ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಫಿಂಚ್ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಆಟ ಕೇವಲ 22 ರನ್‌ಗಳಿಗೆ ಸೀಮಿತವಾಯಿತು.

ಆಸರೆಯಾದ ಎಬಿಡಿ-ಕೊಹ್ಲಿ: ಒಂದು ಹಂತದಲ್ಲಿ 46 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್‌ಸಿಬಿ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಆಸರೆಯಾದರು. ಎಬಿಡಿ 36 ಎಸೆತಗಳಲ್ಲಿ 4 ಬೌಂಡರಿ ಸಹಿತ 39 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್‌ ನೆರವಿನಿಂದ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಮಾರಕ ದಾಳಿ ನಡೆಸಿದ ಸಿಎಸ್‌ಕೆ ಬೌಲರ್‌ಗಳು: ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನೇ ಹೊಂದಿರುವ ಆರ್‌ಸಿಬಿ ತಂಡ ರನ್‌ ಗಳಿಸಲು ಸಿಎಸ್‌ಕೆ ಬೌಲರ್‌ಗಳು ಸುಲಭವಾಗಿ ಅವಕಾಶ ಮಾಡಿಕೊಡಲಿಲ್ಲ. ಸ್ಯಾಮ್ ಕರ್ರನ್ 3 ವಿಕೆಟ್ ಕಬಳಿಸಿದರೆ, ದೀಪಕ್ ಚಹರ್ 2 ಹಾಗೂ ಮಿಚೆಲ್ ಸ್ಯಾಂಟ್ನರ್ ಒಂದು ವಿಕೆಟ್ ಪಡೆದರು.