ದುಬೈ(ಸೆ.24):  ನಾಯಕ ಕೆಎಲ್ ರಾಹುಲ್ ಏಕಾಂಗಿ ಹೋರಾಟದಿಂದ  ಕಿಂಗ್ಸ್ ಇಲೆವೆನ್ ಪಂಜಾಬ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ರಾಹುಲ್  ಸೆಂಚುರಿ ಸಿಡಿಸಿ ಅಬ್ಬರಿಸಿದರು. ಆದರೆ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಮಯಾಂಕ್ ಅಗರ್ವಾಲ್ ಸೇರಿದಂತೆ ಇತರ ಬ್ಯಾಟ್ಸ್‌ಮನ್‌ಗಳಿನಿಂದ ರನ್ ಹರಿದು ಬರಲಿಲ್ಲ. ಹೀಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ 3 ವಿಕೆಟ್ ನಷ್ಟಕ್ಕೆ 206 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ತಂಡಕ್ಕೆ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 57 ರನ್ ಜೊತೆಯಾಟ ನೀಡಿತು. ಅಪಾಯದ ಸೂಚನೆ ನೀಡಿದ ಈ ಜೋಡಿಯನ್ನು ಯಜುವೇಂದ್ರ ಚಹಾಲ್ ಬೇರ್ಪಡಿಸಿದರು. ಮಯಾಂಕ್ ಅಗರ್ವಾಲ್ 26 ರನ್ ಸಿಡಿಸಿ ಔಟಾದರು. 

ನಿಕೊಲಸ್ ಪೂರನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸಲು ಅವಕಾಶವೇ ನೀಡಲಿಲ್ಲ. ಶಿವಂ ದುಬೆ ದಾಳಿಗೆ ಇಬ್ಬರು ಸ್ಫೋಟಕ ಬ್ಯಾಟ್ಸ್‌ಮನ್‌ ಪೆವಿಲಿಯನ್ ಸೇರಿಕೊಂಡರು.  ಆದರೆ ರಾಹುಲ್ ಮಾತ್ರ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಈ ವೇಳೆ ನಾಯಕ ವಿರಾಟ್ ಕೊಹ್ಲಿ 2 ಕ್ಯಾಚ್ ಕೈಚೆಲ್ಲಿ ರಾಹುಲ್‌ಗೆ ಜೀವದಾನ ನೀಡಿದರು.

ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕರುಣ್ ನಾಯರ್ ಜೊತೆಗೂಡಿದ ರಾಹುಲ್ ಅಬ್ಬರಕ್ಕೆ ಆರ್‌ಸಿಬಿ ಚಿಂತೆ ಹೆಚ್ಚಿಸಿತು. 63 ಎಸೆತದಲ್ಲಿ ರಾಹುಲ್ ಶತಕ ಪೂರೈಸಿದರು.  ಸಿಕ್ಸರ್ ಮೂಲಕ ಅಬ್ಬರಿಸಿದ ರಾಹುಲ್ 69 ಎಸೆತದಲ್ಲಿ ಅಜೇಯ 132 ರನ್ ಚಚ್ಚಿದರು. ಇತ್ತ ಕರುಣ್ ನಾಯರ್ ಅಜೇಯ 15 ರನ್ ಸಿಡಿಸಿದರು.

ರಾಹುಲ್ ಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ 3 ವಿಕೆಟ್ ನಷ್ಟಕ್ಕೆ 206 ರನ್ ಸಿಡಿಸಿತು.