ಅಬು ಧಾಬಿ(ಅ.25): ಉತ್ತಮ ಆರಂಭ ಸಿಗದಿದ್ದಿದ್ದರೂ ಮುಂಬೈ ಇಂಡಿಯನ್ಸ್ ಅಬು ಧಾಬಿ ಕ್ರೀಡಾಂಗಣದಲ್ಲಿ ಅಬ್ಬರಿಸಿದೆ. ಹಾರ್ಧಿಕ್ ಪಾಂಡ್ಯ ಸಿಕ್ಸರ್‌ಗೆ ರಾಜಸ್ಥಾನ ರಾಯಲ್ಸ್ ಸುಸ್ತಾಗಿದೆ.  ಪಾಂಡ್ಯ ಸಿಡಿಸಿದ ಅಜೇಯ 60 ರನ್ ನೆರವಿನಿಂದ  ಮುಂಬೈ ಇಂಡಿಯನ್ಸ್ 5ವಿಕೆಟ್ ನಷ್ಟಕ್ಕೆ 195 ರನ್ ಸಿಡಿಸಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತು. ಆದರೆ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟದಿಂದ ಮುಂಬೈ ಚೇತರಿಸಿಕೊಂಡಿತು. 2 ವಿಕೆಟ್‌ಗೆ ಈ ಜೋಡಿ 83 ರನ್ ಜೊತೆಯಾಟ ನೀಡಿತು.

ಇಶಾನ್ ಕಿಶನ್ 36 ಎಸೆತದಲ್ಲಿ 37 ರನ್ ಸಿಡಿಸಿ ಔಟಾದರು. ಸೂರ್ಯಕುಮಾರ್ ಯಾದವ್ 26 ಎಸೆತದಲ್ಲಿ 40 ರನ್ ಸಿಡಿಸಿ ಔಟಾದರು. ನಾಯಕ ಕೀರನ್ ಪೋಲಾರ್ಡ್ ಕೇವಲ 6 ರನ್ ಸಿಡಿಸಿ ಶ್ರೇಯಸ್ ಗೋಪಾಲ್‌ಗೆ ವಿಕೆಟ್ ಒಪ್ಪಿಸಿದರು. 

ಸೌರಬ್ ತಿವಾರಿ ಹೋರಾಟ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾಯಿತು. ತಿವಾರಿ 34 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಸ್ಫೋಟಕ ಇನ್ನಿಂಗ್ಸ್ಸ್, ರಾಜಸ್ಥಾನ ರಾಯಲ್ಸ್ ಲೆಕ್ಕಚಾರ ಉಲ್ಟಾ ಆಯಿತು.  ಸಿಕ್ಸರ್ ಮೂಲಕವೇ ಪಾಂಡ್ಯ ಅಬ್ಬರ ಆರಂಭಗೊಂಡಿತು. ಕೇವಲ 20 ಎಸೆತದಲ್ಲಿ ಪಾಂಡ್ಯ ಅರ್ಧಶತಕ ಸಿಡಿಸಿದರು. 21 ಎಸೆತದಲ್ಲಿ 7 ಭರ್ಜರಿ  ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ ಅಜೇಯ 60 ರನ್ ಸಿಡಿಸಿದರು. ಪಾಂಡ್ಯ ಅಬ್ಬರದಿಂದ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 195 ರನ್ ಸಿಡಿಸಿತು.