Asianet Suvarna News Asianet Suvarna News

IPL 2020: 2ನೇ ಕ್ವಾಲಿಫೈಯರ್: ಮುಂಬೈಗೆ ಫೈನಲ್ ಎದುರಾಳಿ ಯಾರು?

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ವಿರುದ್ಧ ಫೈನಲ್‌ನಲ್ಲಿ ಕಾದಾಡಲು ಇಂದು(ನ.08) ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

IPL 2020 Delhi Capitals vs SRH 2nd Qualifier Match will played in Abu Dhabi match preview kvn
Author
Abu Dhabi - United Arab Emirates, First Published Nov 8, 2020, 9:11 AM IST

ಅಬುಧಾಬಿ(ನ.08): 13ನೇ ಆವೃತ್ತಿಯ ಐಪಿಎಲ್‌ ಚಾಂಪಿಯನ್‌ ಯಾರು ಎನ್ನುವುದು ನಿರ್ಧಾರವಾಗಲು ಇನ್ನೆರಡು ಪಂದ್ಯ ಮಾತ್ರ ಬಾಕಿ ಇದೆ. ಫೈನಲ್‌ನಲ್ಲಿ ಟ್ರೋಫಿಗಾಗಿ ಸೆಣಸಾಡಲು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಈಗಾಗಲೇ ಕಾಯುತ್ತಿದೆ. ಮುಂಬೈ ವಿರುದ್ಧ ಜಿದ್ದಾಜಿದ್ದಿ ನಡೆಸಲಿರುವ ಮತ್ತೊಂದು ತಂಡ ಯಾವುದು ಎನ್ನುವುದು ಭಾನುವಾರ ನಿರ್ಧಾರವಾಗಲಿದೆ. ಇಲ್ಲಿ ನಡೆಯಲಿರುವ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ 2016ರ ಚಾಂಪಿಯನ್‌ ಸನ್‌ರೈಸ​ರ್ಸ್ ಹೈದರಾಬಾದ್‌ ಹಾಗೂ ಈವರೆಗೂ ಫೈನಲ್‌ಗೇ ಏರದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಕಾದಾಡಲಿವೆ.

ಉತ್ಕೃಷ್ಟ ಲಯದಲ್ಲಿ ಸನ್‌: ಆರಂಭಿಕ ಹಂತದಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಲೀಗ್‌ ಹಂತದ ಕೊನೆ ಕೊನೆಗೆ ಭರ್ಜರಿ ಪ್ರದರ್ಶನ ತೋರಿದ ಸನ್‌ರೈಸರ್ಸ್, 3ನೇ ಬಾರಿಗೆ ಫೈನಲ್‌ಗೇರುವ ಉತ್ಸಾಹದಲ್ಲಿದೆ. ಎದುರಾಳಿ ಡೆಲ್ಲಿಗೆ ಹೋಲಿಸಿದರೆ ತಂಡ ಅತ್ಯುತ್ತಮ ಲಯದಲ್ಲಿದೆ. ನಾಯಕ ಡೇವಿಡ್‌ ವಾರ್ನರ್‌ ತಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ವಾರ್ನರ್‌, ವಿಲಿಯಮ್ಸನ್‌, ಪಾಂಡೆ ಬ್ಯಾಟಿಂಗ್‌ ಆಧಾರ ಸ್ತಂಭವಾದರೆ, ಸಂದೀಪ್‌ ಶರ್ಮಾ, ಟಿ.ನಟರಾಜನ್‌, ರಶೀದ್‌ ಖಾನ್‌ ಬೌಲಿಂಗ್‌ನಲ್ಲಿ ಅಸಾಧಾರಣ ಯಶಸ್ಸು ಕಾಣುತ್ತಿದ್ದಾರೆ. ಮಿಚೆಲ್‌ ಮಾರ್ಶ್ ಗಾಯಗೊಂಡು ಹೊರಬಿದ್ದಿದ್ದರಿಂದ ಅವರ ಬದಲು ತಂಡ ಸೇರಿಕೊಂಡ ವಿಂಡೀಸ್‌ನ ಜೇಸನ್‌ ಹೋಲ್ಡರ್‌, ಸನ್‌ರೈಸ​ರ್ಸ್ ಅದೃಷ್ಟ ಬದಲಿಸುತ್ತಿದ್ದಾರೆ. ಅವರ ಆಲ್ರೌಂಡ್‌ ಪ್ರದರ್ಶನ ತಂಡ ಫೈನಲ್‌ ಹೊಸ್ತಿಲು ತಲುಪಲು ಪ್ರಮುಖ ಕಾರಣಗಳಲ್ಲಿ ಒಂದು. ಸನ್‌ರೈಸ​ರ್ಸ್ ಬೌಲರ್‌ಗಳು ಆರ್‌ಸಿಬಿ ವಿರುದ್ಧ ಎಲಿಮಿನೇಟರ್‌ನಲ್ಲಿ ತೋರಿದ ಪ್ರದರ್ಶನ ಪುನರಾವರ್ತಿಸಿದರೆ ಡೆಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ.

IPL 2020: 13ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಯಾರು?

ಗೊಂದಲದಲ್ಲಿ ಡೆಲ್ಲಿ: ಆರಂಭದಲ್ಲಿ ಅಬ್ಬರಿಸಿ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಬೀಗಿದ್ದ ಡೆಲ್ಲಿ, ಲೀಗ್‌ ಹಂತದ 10ನೇ ಪಂದ್ಯದಿಂದ ಲಯ ಕಳೆದುಕೊಂಡು ಪರದಾಡುತ್ತಿದೆ. ತಂಡದ ಅಗ್ರ ಕ್ರಮಾಂಕ ಸ್ಥಿರತೆ ಕಾಪಾಡಿಕೊಂಡಿಲ್ಲ. ಧವನ್‌, ಪೃಥ್ವಿ ಶಾ, ಅಜಿಂಕ್ಯ ರಹಾನೆ ಒಟ್ಟೊಟ್ಟಿಗೆ ಕೈಕೊಟ್ಟ ಉದಾಹರಣೆಯೂ ಇದೆ. ಅಗ್ರ 3 ಬ್ಯಾಟ್ಸ್‌ಮನ್‌ಗಳು ಒಟ್ಟು 9 ಬಾರಿ ಸೊನ್ನೆಗೆ ಔಟಾಗಿದ್ದಾರೆ. ನಾಯಕ ಶ್ರೇಯಸ್‌ ಅಯ್ಯರ್‌ ತಮ್ಮ ಮೇಲಿರುವ ಒತ್ತಡದಿಂದಾಗಿ ಆಕ್ರಮಣಕಾರಿ ಆಟವಾಡಲು ಸಾಧ್ಯವಾಗುತ್ತಿಲ್ಲ. ರಿಷಭ್‌ ಪಂತ್‌ ತಮ್ಮ ಕಳಪೆ ಲಯ ಮುಂದುವರಿಸಿದ್ದು, ತಂಡದ ತಲೆನೋವು ಹೆಚ್ಚಿಸಿದೆ. ಆಸೀಸ್‌ ಆಲ್ರೌಂಡರ್‌ ಡೇನಿಯಲ್‌ ಸ್ಯಾಮ್ಸ್‌ ತಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಿಲ್ಲ. ಹೀಗಾಗಿ ಅವರನ್ನು ಹೊರಗಿಟ್ಟು ಶಿಮ್ರೊನ್‌ ಹೆಟ್ಮೇಯರ್‌ರನ್ನು ವಾಪಸ್‌ ಕರೆತರಬಹುದು. ಆಗ ಆಲ್ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಬ್ಯಾಟಿಂಗ್‌ ಜವಾಬ್ದಾರಿ ಜೊತೆ 4 ಓವರ್‌ ಬೌಲಿಂಗ್‌ ಕೋಟಾವನ್ನೂ ಪೂರ್ಣಗೊಳಿಸಬೇಕು. ಡೆಲ್ಲಿ ತನ್ನ ವೇಗಿಗಳಾದ ಕಗಿಸೋ ರಬಾಡ ಹಾಗೂ ಏನ್ರಿಚ್‌ ನೋಕಿಯ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಸ್ಪಿನ್ನರ್‌ಗಳಾದ ಆರ್‌.ಅಶ್ವಿನ್‌ ಹಾಗೂ ಅಕ್ಷರ್‌ ಪಟೇಲ್‌ ಸಹ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಬೇಕಿದೆ. ಮೇಲ್ನೋಟಕ್ಕೆ ಸನ್‌ರೈಸ​ರ್ಸ್ ಈ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ಪಿಚ್‌ ರಿಪೋರ್ಟ್‌: ಇಲ್ಲಿನ ಪಿಚ್‌ ನಿಧಾನಗತಿಯದ್ದಾಗಿದ್ದು, ರನ್‌ ಗಳಿಸುವುದು ಅಷ್ಟುಸುಲಭವಲ್ಲ. ಸನ್‌ರೈಸ​ರ್ಸ್ 3 ದಿನಗಳಲ್ಲಿ 2ನೇ ಬಾರಿ ಇದೇ ಕ್ರೀಡಾಂಗಣದಲ್ಲಿ ಆಡಲಿರುವ ಕಾರಣ ವಾತಾವರಣದ ಸಂಪೂರ್ಣ ಮಾಹಿತಿ ಇರಲಿದೆ. ಮೊದಲು ಬ್ಯಾಟ್‌ ಮಾಡುವ ತಂಡ 160ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ.

ಸಂಭಾವನೀಯ ಆಟಗಾರರ ಪಟ್ಟಿ

ಸನ್‌ರೈಸರ್ಸ್: ಡೇವಿಡ್ ವಾರ್ನರ್‌(ನಾಯಕ), ಶ್ರೀವಸ್ತ್ ಗೋಸ್ವಾಮಿ, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್‌, ಪ್ರಿಯಂ ಗರ್ಗ್‌, ಜೇಸನ್ ಹೋಲ್ಡರ್‌, ಅಬ್ದುಲ್ ಸಮದ್‌, ರಶೀದ್ ಖಾನ್‌, ಸಂದೀಪ್ ಶರ್ಮಾ‌, ಶಾಬಾಜ್ ನದೀಂ, ಟಿ. ನಟರಾಜನ್‌.

ಡೆಲ್ಲಿ: ಶಿಖರ್ ಧವನ್‌, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್‌(ನಾಯಕ), ರಿಷಭ್‌ ಪಂತ್‌, ಶಿಮ್ರೋನ್ ಹೆಟ್ಮೇಯರ್‌, ಮಾರ್ಕಸ್ ಸ್ಟೋಯ್ನಿಸ್‌, ಅಕ್ಷರ್ ಪಟೇಲ್‌, ಆರ್‌ ಅಶ್ವಿನ್‌, ಕಗಿಸೋ ರಬಾಡ, ಆನ್ರಿಚ್ ನೋಕಿಯ.

ಸ್ಥಳ: ಅಬುಧಾಬಿ
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

Follow Us:
Download App:
  • android
  • ios