ತಿರುವನಂತಪುರ(ಮೇ.13): ದೇಶಾದ್ಯಂತ ಕೊಲೋನಾ ಲಸಿಕೆ ಹಾಗೂ ಸೋಂಕಿತರ ಗುಣಮುಖಕ್ಕೆ ವೈದ್ಯರು ಸೂಚಿಸಲಾಗುತ್ತಿರುವ ರೆಮ್‌ಡೆಸಿವಿರ್‌ ಔಷಧದ ಹಾಹಾಕಾರ ಉದ್ಭವವಾಗಿರುವಾಗಲೇ, ಬಳಸದೆ ಉಳಿಸಿಕೊಂಡಿದ್ದ 1 ಲಕ್ಷದಷ್ಟು ರೆಮ್‌ಡೆಸಿವಿರ್‌ ಔಷಧವನ್ನು ಕೇಂದ್ರ ಸರ್ಕಾರಕ್ಕೆ ಕೇರಳ ಸರ್ಕಾರ ವಾಪಸ್‌ ನೀಡಿದ್ದು, ಅವುಗಳನ್ನು ಅಗತ್ಯವಿರುವ ರಾಜ್ಯಗಳಿಗೆ ಮರು ಹಂಚಿಕೆ ಮಾಡುವಂತೆ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕೊರೋನಾದ ಸಂಕಷ್ಟದ ಸಂದರ್ಭದಲ್ಲಿ ಕೇರಳದ ಈ ಕ್ರಮವು ಮಾದರಿಯಾಗಿದೆ.

ಜೊತೆಗೆ ಕೇರಳದಲ್ಲಿ ಒಂದೇ ಒಂದು ಕೊರೋನಾ ಲಸಿಕೆಯನ್ನು ವ್ಯರ್ಥ ಮಾಡಲಾಗಿಲ್ಲ ಎಂದು ತಿಳಿದುಬಂದಿದೆ. ಲಸಿಕೆ ಆರಂಭವಾದಾಗ ಲಸಿಕೆ ಅಭಿಯಾನದ ಜಾಗೃತಿಯ ಕೊರತೆಯಿಂದಾಗಿ ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಲಸಿಕೆಯ ಡೋಸ್‌ಗಳು ವ್ಯರ್ಥವಾಗಿದ್ದವು.

"

ಲಸಿಕೆ ವ್ಯರ್ಥವಾಗುವುದು ಹೇಗೆ?

ಲಸಿಕೆಗಳ ವ್ಯರ್ಥವು ಸೇವೆ ಹಾಗೂ ಪೂರೈಕೆ ಮಟ್ಟದ ಮೂರು ಹಂತಗಳಲ್ಲಿ ಉಂಟಾಗುತ್ತವೆ. ಲಸಿಕೆಗಳ ಸಾಗಣಿಕೆ ವೇಳೆ, ಕೋಲ್ಡ್ ಚೈನ್ ಪಾಯಿಂಟ್‌ಗಳಲ್ಲಿ ಮತ್ತು ಲಸಿಕೆ ಕೇಂದ್ರಗಳಲ್ಲಿ. ಕೇರಳವು ಲಸಿಕೆಯ ಸಂಗ್ರಹಣೆ, ಪೂರೈಕೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಹೊರಡಿಸಿತ್ತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಯಂತೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿತ್ತು. ಲಸಿಕೆಗಳ ಸಮರ್ಪಕ ಬಳಕೆಯನ್ನು ಖಾತರಿಪಡಿಸಲಾಗಿತ್ತು.

ಪ್ರತಿ 5 ಎಂಎಲ್‌ನ ಲಸಿಕೆ ಬಾಟಲಿಯಲ್ಲಿ 10 ಡೋಸ್‌ಗಳಿರುತ್ತವೆ. ಅಂದರೆ ಒಂದು ಬಾಟಲಿಯ ಲಸಿಕೆಯನ್ನು ಹತ್ತು ಜನರಿಗೆ ನೀಡಬಹುದು. ನುರಿತ ದಾದಿಯರಾದರೆ ಪ್ರತಿ ಬಾಟಲಿಯಿಂದ 11 ರಿಂದ 13 ಡೋಸ್‌ಗಳವರೆಗೂ ಲಸಿಕೆ ನೀಡಲು ಸಾಧ್ಯ. ಸಾಮಾನ್ಯವಾಗಿ ಪ್ರತಿ ಬಾಟಲಿಯಲ್ಲಿಯೂ ಶೇ 1.1ರಷ್ಟು ಲಸಿಕೆ ವ್ಯರ್ಥವಾಗುತ್ತದೆ. ಅಂದರೆ 10 ಡೋಸ್‌ಗಳ ಬಾಟಲಿಯಲ್ಲಿ ಒಂದು ಡೋಸ್ ವ್ಯರ್ಥವಾಗುತ್ತದೆ. ಹೀಗಾಗಿ 10 ಜನರ ಬದಲು 8-9 ಜನರಿಗೆ ಮಾತ್ರ ಲಸಿಕೆ ನೀಡಲು ಸಾಧ್ಯ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona