ದೇಶದಲ್ಲಿ ಚಿನ್ನದ ಅಡಮಾನ ಸಾಲ ಹೆಚ್ಚುತ್ತಿದೆ ಎಂಬ ಆರ್‌ಬಿಐ ವರದಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ವಿಪಕ್ಷ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮಂಗಳಸೂತ್ರ ಕಸಿಯಲಾಗುತ್ತದೆ ಎನ್ನುವ ಮೋದಿ ಅವರ ಚುನಾವಣಾ ಸಮಯದ ಮಾತು ನಿಜವಾಗಿದೆ. ಅವರ ಕಾಲದಲ್ಲಿ ಒತ್ತಾಯವಾಗಿ ಮಂಗಳಸೂತ್ರ ಅಡಮಾನ ಇಡಲಾಗುತ್ತಿದೆ’ ಎಂದು ಟಾಂಗ್ ನೀಡಿದ್ದಾರೆ.
ನವದೆಹಲಿ (ಮಾ.6): ದೇಶದಲ್ಲಿ ಚಿನ್ನದ ಅಡಮಾನ ಸಾಲ ಹೆಚ್ಚುತ್ತಿದೆ ಎಂಬ ಆರ್‌ಬಿಐ ವರದಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ವಿಪಕ್ಷ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮಂಗಳಸೂತ್ರ ಕಸಿಯಲಾಗುತ್ತದೆ ಎನ್ನುವ ಮೋದಿ ಅವರ ಚುನಾವಣಾ ಸಮಯದ ಮಾತು ನಿಜವಾಗಿದೆ. ಅವರ ಕಾಲದಲ್ಲಿ ಒತ್ತಾಯವಾಗಿ ಮಂಗಳಸೂತ್ರ ಅಡಮಾನ ಇಡಲಾಗುತ್ತಿದೆ’ ಎಂದು ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ‘ನರೇಂದ್ರ ಮೋದಿ ಜೀ ನೀವು ಮಂಗಳಸೂತ್ರಗಳ ಕಸಿಯುವಿಕೆ ಬಗ್ಗೆ ಮಾತನಾಡಿದ್ದೀರಿ. ಈಗ ನಿಜವಾಗಿದೆ. ನಿಮ್ಮ ಆಡಳಿತದಲ್ಲಿ ಮಹಿಳೆಯರು ತಮ್ಮ ಚಿನ್ನಾಭರಣ ಅಡಮಾನ ಇಡುವಂತೆ ಮಾಡಲಾಗುತ್ತಿದೆ.
ನೀವು ನೋಟು ರದ್ಧತಿ ಮೂಲಕ ಮಹಿಳೆಯರ ಹಣವನ್ನು ಕಣ್ಮರೆಯಾಗುವಂತೆ ಮಾಡಿದ್ದೀರಿ. ಈಗ ಹಣದುಬ್ಬರ ಮತ್ತು ಮನೆಯ ಉಳಿತಾಯ ಕುಸಿಯುತ್ತಿರುವುದರಿಂದ ಅವರು ಆಭರಣಗಳನ್ನು ಅಡಮಾನ ಇಡುವಂತೆ ಮಾಡಲಾಗಿದೆ’ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ: ಪ್ರಧಾನಿ ಮೋದಿ
ಬ್ಯಾಂಕ್‌ಗಳು ಚಿನ್ನದ ಮೇಲೆ ನೀಡುವ ಸಾಲ, ವರ್ಷದಿಂದ ವರ್ಷಕ್ಕೆ ಶೇ.71.3ರಷ್ಟು ಏರಿಕೆಯಾಗಿ, ಡಿಸೆಂಬರ್‌ನಲ್ಲಿ 1.72 ಲಕ್ಷ ಕೋಟಿ ರು. ಆಗಿದೆ ಎಂದು ಆರ್‌ಬಿಐ ಹೇಳಿತ್ತು
ಕಾಂಗ್ರೆಸ್ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ: ಮೋದಿ
ಕಳೆದ ವರ್ಷ ಏಪ್ರಿಲ್ 22 ರಂದು ಚುನಾವಣೆ ವೇಳೆ ಜೈಪುರಕ್ಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದರು. ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಮಾಡಲಿದೆ’ ಎಂಬ ಆ ಪಕ್ಷದ ಭರವಸೆ ಹಾಗೂ ಅದರ ನಾಯಕ ರಾಹುಲ್ ಗಾಂಧಿ ಏ.7ರಂದು ನೀಡಿದ್ದ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಪ್ರಧಾನಿ ಮೋದಿಯವರು ‘ಶ್ರಮದಿಂದ ಗಳಿಸಿದ ಸಂಪತ್ತನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗಾದರೂ ಇದೆಯೇ? ಆದರೂ ಇದನ್ನು ಕಾಂಗ್ರೆಸ್ ಮಾಡಲಿದೆ. ತಾಯಂದಿರು ಶ್ರಮದಿಂದ ಗಳಿಸಿ ಮಾಡಿಸಿಕೊಂಡಿರುವ ಚಿನ್ನದ ತಾಳಿ ಕಿತ್ತುಕೊಳ್ಳಲಾಗುತ್ತದೆ ಹಾಗೂ ಅದನ್ನು ‘ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕುದಾರರು ಮುಸ್ಲಿಮರು’ ಎಂದಿದ್ದ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಅವರ ನೀತಿಯಂತೆ ಮುಸಲ್ಮಾನರು, ಒಳನುಸುಳುಕೋರರು ಹಾಗೂ ‘ಹೆಚ್ಚು ಮಕ್ಕಳಿದ್ದವರಿಗೆ’ ಹಂಚಲಾಗುತ್ತದೆ’ ಎಂದು ವಾಗ್ದಾಳಿ ನಡೆಸಿದ್ದರು.
