* ಠಾಕ್ರೆ ವಿದಾಯ ಭಾಷಣ, ನನ್ನವರಿಂದಲೇ ನನಗೆ ದ್ರೋಹ* ಸೇನೆ ಒಂದು ಕುಟುಂಬ, ಅದರ ವಿಭಜನೆಗೆ ನಾನು ಬಿಡಲ್ಲ* ನಾಳೆ ಎಲ್ಲರನ್ನೂ ಒಗ್ಗೂಡಿಸುವೆ
ಮುಂಬೈ(ಜೂ.30): ಅತ್ತ ಸುಪ್ರೀಂ ಕೋರ್ಟ್ ವಿಶ್ವಾಸಮತಕ್ಕೆ ಆದೇಶ ನೀಡುತ್ತಿದ್ದಂತೆಯೇ ಇತ್ತ ಸೋಲು ಖಚಿತ ಎಂದು ಮನಗಂಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ರಾಜೀನಾಮೆ ಘೋಷಿಸಿ, ಫೇಸ್‌ಬುಕ್ ಲೈವ್‌ನಲ್ಲಿ ಭಾವುಕ ಭಾಷಣ ಮಾಡಿದರು.
‘ನಾವೆಲ್ಲರೂ ಸುಪ್ರೀಂಕೋರ್ಚ್ ಆದೇಶ ಪಾಲಿಸಬೇಕು. ಮುಖ್ಯಮಂತ್ರಿ ಸ್ಥಾನ ಮತ್ತು ವಿಧಾನ ಪರಿಷತ್ ಸ್ಥಾನ ಎರಡಕ್ಕೂ ನಾನು ರಾಜೀನಾಮೆ ನೀಡುತ್ತಿದ್ದೇನೆ. ಏಕೆಂದರೆ ನಾಳೆ ಶಿವ ಸೈನಿಕರ ಕೈಯಲ್ಲಿ ರಕ್ತ ಕಾಣುವುದಕ್ಕೆ ನಾನು ಬಯಸುವುದಿಲ್ಲ’ ಎಂದು ನುಡಿದರು.
‘ಯಾರನ್ನು ನಾವು ಬೆಳೆಸಿದೆವೋ, ಯಾರನ್ನು ನಾವು ಉತ್ತೇಜಿಸಿದೆವೋ ಅವರೇ ನಮಗೆ ದ್ರೋಹ ಮಾಡಿದರು. ನಾನು ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದೆ, ಅದೇ ರೀತಿ ತೆರಳುತ್ತಿದ್ದೇನೆ. ಸೇನೆ ಯಾವಾಗಲೂ ಒಂದೇ ಕುಟುಂಬವಿದ್ದಂತೆ, ಅದನ್ನು ಯಾವುದೇ ಕಾರಣಕ್ಕೂ ಹರಿದುಹೋಗಲು ಬಿಡುವುದಿಲ್ಲ. ನಾನು ಎಲ್ಲಿಗೂ ಹೋಗುವುದಿಲ್ಲ. ಮತ್ತೆ ಎಲ್ಲಾ ನನ್ನೆಲ್ಲಾ ಬೆಂಬಲಿಗರನ್ನು ಒಟ್ಟುಗೂಡಿಸುತ್ತೇನೆ’ ಎಂದು ಘೋಷಿಸಿದರು.
‘ನನಗೆ ಸಿಎಂ ಆಗಲು ಅವಕಾಶ ಕೊಟ್ಟಸೋನಿಯಾ ಗಾಂಧಿ ಮತ್ತು ಅಜಿತ್ ಪವಾರ್‌ಗೆ ವಂದನೆಗಳು’ ಎಂದೂ ಉದ್ಧವ್ ಕೃತಜ್ಞತೆ ಸಲ್ಲಿಸಿದರು.
ಸಂಪುಟದಲ್ಲೂ ವಿದಾಯ ಭಾಷಣ:
ಸುಪ್ರೀಂ ತೀರ್ಪಿಗೂ ಮುನ್ನ ಸಂಪುಟ ಸಭೆ ನಡೆಸಿದ್ದ ಉದ್ಧವ್ ಠಾಕ್ರೆ ಅಲ್ಲೂ ವಿದಾಯ ಭಾಷಣ ಮಾಡಿ, ಎರಡೂವರೆ ವರ್ಷ ಸಹಕಾರ ನೀಡಿದ್ದಕ್ಕೆ ಸಹೋದ್ಯೋಗಿಗಳಿಗೆ ಮತ್ತು ಸರ್ಕಾರಿ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ‘ಕಳೆದ ಎರಡೂವರೆ ವರ್ಷಗಳಲ್ಲಿ ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೀರಿ. ಇದಕ್ಕಾಗಿ ನಾನು ನಿಮಗೆ ಎಂದೆಂದಿಗೂ ಕೃತಜ್ಞ. ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ’ ಎಂದು ಭಾವನಾತ್ಮಕವಾಗಿ ಕೇಳಿಕೊಂಡರು.
