* 1 ಲಕ್ಷ ಕೋವಿಡ್‌ ಯೋಧರ ಕೌಶಲ್ಯಾಭಿವೃದ್ಧಿ* 3ನೇ ಅಲೆ ಎದುರಿಸುವ ಈ ಸಿದ್ಧತೆಗೆ ಮೋದಿ ಚಾಲನೆ* 26 ರಾಜ್ಯಗಳ 111 ಕೇಂದ್ರಗಳಲ್ಲಿ 6 ವಿಭಾಗದಲ್ಲಿ ತರಬೇತಿ ಯೋಜನೆ* ‘ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ 3.0’ಗೆ 276 ಕೋಟಿ ವೆಚ್ಚ

ನವದೆಹಲಿ: ಕೋವಿಡ್‌ 3ನೇ ಅಲೆ ಸೇರಿದಂತೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಯಾವುದೇ ಸಾಂಕ್ರಾಮಿಕ ಪಿಡುಗನ್ನು ಯಶಸ್ವಿಯಾಗಿ ಎದುರಿಸುವ ನಿಟ್ಟಿನಲ್ಲಿ 1 ಲಕ್ಷಕ್ಕೂ ಹೆಚ್ಚು ಕೋವಿಡ್‌ ಯೋಧರಿಗೆ ಹೊಸ ಕೌಶಲ್ಯ ನೀಡುವ, ಕೌಶಲ್ಯ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದರು.

‘ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ 3.0’ ಅಡಿ ಈ ತರಬೇತಿ ಆಯೋಜಿಸಲಾಗಿದ್ದು, ದೇಶದ 26 ರಾಜ್ಯಗಳ 111 ಕೇಂದ್ರಗಳಲ್ಲಿ ಇದು ಜಾರಿಯಾಗಲಿದೆ. 276 ಕೋಟಿ ರು.ವೆಚ್ಚದ ಈ ಯೋಜನೆ ಮೂಲಕ 1 ಲಕ್ಷಕ್ಕೂ ಹೆಚ್ಚು ಕೋವಿಡ್‌ ಯೋಧರಿಗೆ 6 ಪ್ರಮುಖ ವಿಭಾಗಗಳಲ್ಲಿ ತರಬೇತಿ ನೀಡಲಾಗುವುದು. 2-3 ತಿಂಗಳ ತರಬೇತಿ ಇದಾಗಿರಲಿದೆ.

6 ವಿಭಾಗ:

ದೇಶದ ಖ್ಯಾತನಾಮ ತಜ್ಞರಿಂದ ವಿಶೇಷವಾಗಿ ರೂಪಿಸಲಾಗಿರುವ ಈ ಯೋಜನೆಯಡಿ ಗÜೃಹ ಆರೈಕೆ, ಪ್ರಾಥಮಿಕ ಆರೈಕೆ, ಸುಧಾರಿತ ಆರೈಕೆ, ತುರ್ತು ಆರೈಕೆ, ಮಾದರಿ ಸಂಗ್ರಹ ಮತ್ತು ವೈದ್ಯಕೀಯ ಉಪಕರಣ ಬಳಕೆ ಸಂಬಂಧ ತರಬೇತಿ ನೀಡಲಾಗುವುದು. ಈ ವಿಷಯಗಳ ಕುರಿತು ಯಾವುದೇ ಮಾಹಿತಿ ಇಲ್ಲದವರಿಗೆ ಅದರ ಬಗ್ಗೆ ತರಬೇತಿ ನೀಡಲಾಗುವುದು. ಮತ್ತು ಅರಿವು ಇದ್ದವರಿಗೆ ಆ ಕುರಿತ ಕೌಶಲ್ಯ ಹೆಚ್ಚಿಸಲಾಗುವುದು.

ಉದ್ದೇಶ:

ಆರೋಗ್ಯ ಕ್ಷೇತ್ರದಲ್ಲಿ ಇಲ್ಲದ ಲಕ್ಷಾಂತರ ಜನರನ್ನು ಆರೋಗ್ಯ ಸೇವೆ ನೀಡಬಹುದಾದ ರೀತಿಯಲ್ಲಿ ತರಬೇತಿ ನೀಡಲಾಗುವುದು. ಇದು ಉದ್ಯೋಗ ಸೃಷ್ಟಿಯ ಜೊತೆಗೆ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮಾನವ ಸಂಪನ್ಮೂಲ ಸೃಷ್ಟಿಗೆ ನೆರವಾಗಲಿದೆ.

ಯಾವುದೇ ಸ್ಥಿತಿ ಎದುರಿಸಲು ಸಿದ್ಧರಾಗಿ: ಮೋದಿ

ಕೋವಿಡ್‌ ಯೋಧರ ಕೌಶಲ್ಯ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಕೊರೋನಾ ವೈರಸ್‌ನ ಅಪಾಯ ಮತ್ತು ವೈರಸ್‌ ರೂಪಾಂತರಗೊಳ್ಳುವ ಅಪಾಯ ಈಗಲೂ ನಮ್ಮ ಮುಂದೆ ಇರುವ ಕಾರಣ, ಇಂಥ ಪರಿಸ್ಥಿತಿಯನ್ನು ಎದುರಿಸಲು ಸದಾ ಸಿದ್ಧವಾಗಿರಬೇಕು’ ಎಂದು ಕರೆ ನೀಡಿದರು.

‘2ನೇ ಅಲೆಯಲ್ಲಿ ಈ ಸಾಂಕ್ರಾಮಿಕವು, ವೈರಸ್‌ ನಮ್ಮ ಮುಂದೆ ಏನೇನು ಸವಾಲುಗಳನ್ನು ಒಡ್ಡಬಲ್ಲದು ಎಂಬುದನ್ನು ಎತ್ತಿತೋರಿಸಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಸವಾಲು ಮೆಟ್ಟಿನಿಲ್ಲಲು ನಾವು ನಮ್ಮ ಸಿದ್ಧತೆಯನ್ನು ಇನ್ನಷ್ಟುತೀವ್ರಗೊಳಿಸಬೇಕಿದೆ. ಅದನ್ನು ಎದುರಿಸುವಲ್ಲಿ ಈ ತರಬೇತಿ ಯೋಜನೆಯ ಒಂದು ಮಹತ್ವದ ಹೆಜ್ಜೆ’ ಎಂದು ಬಣ್ಣಿಸಿದರು.

ಈ ಸಾಂಕ್ರಾಮಿಕ ಪಿಡುಗು ವಿಶ್ವದ ಪ್ರತಿಯೊಂದು ದೇಶ, ಸಂಸ್ಥೆ, ಸಮಾಜ, ಕುಟುಂಬ ಮತ್ತು ವ್ಯಕ್ತಿಯ ಶಕ್ತಿಯನ್ನು ಪರೀಕ್ಷಿಸಿದೆ. ಜೊತೆಗೆ ಅದೇ ವೇಳೆ ನಮ್ಮ ಸಾಮರ್ಥ್ಯ ವೃದ್ಧಿಯಾಗಬೇಕಾದ ಬಗ್ಗೆ ಸಂದೇಶವನ್ನು ರವಾನಿಸಿದೆ. ಭಾರತ ಇಂಥದ್ದೊಂದು ಸವಾಲನ್ನು ಸ್ವೀಕರಿಸಿ ಕೋವಿಡ್‌ ನಿರ್ವಹಣೆ ವಿಷಯದಲ್ಲಿನ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ ಎಂದು ಹೇಳಿದರು.

ನಮ್ಮ ದೇಶದ ಜನಸಂಖ್ಯೆಯನ್ನು ಗಮನಿಸಿದಾಗ, ದೇಶದ ಆರೋಗ್ಯ ವಲಯದಲ್ಲಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸಬೇಕಾದ ಅನಿವಾರ್ಯತೆ ಇದ್ದೇ ಇದೆ. ಈ ಕಾರಣಕ್ಕಾಗಿಯೇ ಕಳೆದ 7 ವರ್ಷಗಳಲ್ಲಿ ಹೊಸ ಏಮ್ಸ್‌, ಹೊಸ ವೈದ್ಯಕೀಯ ಕಾಲೇಜು, ಹೊಸ ನರ್ಸಿಂಗ್‌ ಕಾಲೇಜುಗಳನ್ನು ಆರಂಭಿಸುವ ಮೂಲಕ ಸರ್ಕಾರ ಹಂತಹಂತವಾಗಿ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಹೆಚ್ಚಿಸುವ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ ಎಂದು ಮೋದಿ ಹೇಳಿದರು.

ಇದೇ ವೇಳೆ ವೈದ್ಯಕೀಯ ಸೇವೆಯ ಪ್ರಮುಖ ಭಾಗಿವಾಗಿದ್ದರೂ, ಎಲೆಮರೆಯ ಕಾಯಿಗಳಂತೆ ಇರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಎಎನ್‌ಎಂ (ದಾದಿಯರ) ಸೇವೆಯನ್ನು ಪ್ರಧಾನಿ ಬಹುವಾಗಿ ಸ್ಮರಿಸಿದರು.