ಲಾಕ್‌ಡೌನ್ ಇರದಿದ್ದರೆ 8.2 ಲಕ್ಷ ಜನಕ್ಕೆ ವೈರಸ್ ಬರ್ತಿತ್ತು!
ಲಾಕ್‌ಡೌನ್ ಇರದಿದ್ದರೆ 8.2 ಲಕ್ಷ ಜನಕ್ಕೆ ವೈರಸ್ ಬರ್ತಿತ್ತು!| ನಿರ್ಬಂಧ ಹಾಕಿದ್ದರೆ 1.2 ಲಕ್ಷ ಮಂದಿಗೆ ಸೋಂಕು-ಕೇಂದ್ರ| ಲಾಕ್‌ಡೌನ್ ಹಾಕಿದ್ದಕ್ಕೆ 7500 ಜನಕ್ಕೆ ಮಾತ್ರ ಕೊರೋನಾ
ನವದೆಹಲಿ(ಏ.12): ಮಾರಕ ಕೊರೋನಾ ವೈರಸ್ ನಿಗ್ರಹಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಐರೋಪ್ಯ ರಾಷ್ಟ್ರಗಳ ರೀತಿ ಭಾರತ ಏನಾದರೂ ಮೈಮರೆತು ಕುಳಿತಿದ್ದರೆ ಏ.15ರ ವೇಳೆಗೆ ದೇಶದಲ್ಲಿ 8.2 ಲಕ್ಷ ಮಂದಿ ಸೋಂಕುಪೀಡಿತರಾಗುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.
ಶನಿವಾರ ಕೊರೋನಾ ಕುರಿತ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ಮಾತನಾಡಿ, ‘ಮಾಚ್‌ರ್ 22ರಂದು ಜನತಾ ಕಫä್ರ್ಯ ವಿಧಿಸಲಾಯಿತು. ಮಾಚ್‌ರ್ 25ರಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಯಾಯಿತು. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಆಂತರಿಕ ವಿಶ್ಲೇಷಣೆ ನಡೆಸಿದೆ. ಲಾಕ್‌ಡೌನ್ ಇಲ್ಲದೇ ಇದ್ದಲ್ಲಿ ಪ್ರಕರಣಗಳ ಸಂಖ್ಯೆ ಶೇ.41ರಷ್ಟುಹೆಚ್ಚಾಗುತ್ತಿತ್ತು. ಸೋಂಕಿತರ ಸಂಖ್ಯೆ ಏ.11ರ ವೇಳೆಗೆ 2.08 ಲಕ್ಷಕ್ಕೆ, ಏ.15ರ ವೇಳೆಗೆ 8.2 ಲಕ್ಷಕ್ಕೆ ಹೆಚ್ಚಾಗುತ್ತಿತ್ತು ಎಂಬ ಮಾಹಿತಿ ಲಭಿಸಿದೆ’ ಎಂದರು.
ಮೊದಲ ಬಾರಿಗೆ ಒಂದೇ ದಿನ 1000+ ಕೇಸ್ ಪತ್ತೆ: 8 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
‘ಲಾಕ್‌ಡೌನ್ ಹೇರದೆ ಕೆಲವು ನಿಗ್ರಹ ಕ್ರಮಗಳನ್ನು ಮಾತ್ರ ಕೈಗೊಂಡಿದ್ದರೆ ಏ.11ರ ವೇಳೆಗೆ 45,370 ಮಂದಿ ಹಾಗೂ ಏ.15ರ ವೇಳೆಗೆ 1.2 ಲಕ್ಷ ಮಂದಿ ಸೋಂಕಿತರಾಗುತ್ತಿದ್ದರು. ಆದರೆ ಸಾಮಾಜಿಕ ಅಂತರವನ್ನು ಪ್ರೋತ್ಸಾಹಿಸಿ, ಮಾ.25ರಿಂದ ಲಾಕ್‌ಡೌನ್ ಹಾಗೂ ಇನ್ನಿತರೆ ನಿಗ್ರಹ ಕ್ರಮಗಳನ್ನು ಕೈಗೊಂಡಿದ್ದರಿಂದ ಸೋಂಕಿತರ ಸಂಖ್ಯೆ 7500ರ ಸುಮಾರಿನಲ್ಲಿದೆ’ ಎಂದು ಅಗರ್‌ವಾಲ್ ಹೇಳಿದರು. ‘ಇದು ಸರ್ಕಾರದ ಆಂತರಿಕ ಸಮೀಕ್ಷೆಯೇ ವಿನಾ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ನಡೆಸಿರುವ ಅಧ್ಯಯನ ವರದಿ ಅಲ್ಲ’ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
‘ಲಾಕ್‌ಡೌನ್ ವಿಧಿಸಿದ್ದರಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ದೇಶದಲ್ಲಿ ಶನಿವಾರ ಸಂಜೆ 4 ಗಂಟೆಯವರೆಗೆ 7447 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಲಾಕ್‌ಡೌನ್, ಪರಸ್ಪರರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಇತರ ನಿರ್ಬಂಧ ಕ್ರಮಗಳು ಫಲ ನೀಡಿವೆ’ ಎಂದು ಅಗರ್‌ವಾಲ್ ತಿಳಿಸಿದರು.