ಮೋದಿಯನ್ನು ಚೀನಾ ಹೊಗಳೋದೇಕೆ?: ರಾಹುಲ್ ಪ್ರಶ್ನೆ!
ಮೋದಿಯನ್ನು ಚೀನಾ ಹೊಗಳೋದೇಕೆ?: ರಾಹುಲ್| ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ|
ನವದೆಹಲಿ(ಜೂ.23): ಚೀನಾ-ಭಾರತ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಗಡಿ ವಿಷಯವಾಗಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವಾಗಲೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾ ಹೊಗಳುತ್ತಿರುವುದೇಕೆ ಎಂದು ಸೋಮವಾರ ಪ್ರಶ್ನಿಸಿದ್ದಾರೆ.
ಶುಕ್ರವಾರ ಸರ್ವಪಕ್ಷಗಳ ಸಭೆ ವೇಳೆ ಮೋದಿ ನೀಡಿದ್ದ ಹೇಳಿಕೆಯನ್ನು ಚೀನಾ ಸಾಮಾಜಿಕ ಜಾಲತಾಣಗಳು ಹೇಗೆ ಸ್ವಾಗತಿಸಿವೆ ಎಂಬ ವರದಿಯನ್ನು ಲಗತ್ತಿಸಿರುವ ರಾಹುಲ್ ಗಾಂಧಿ, ‘ಚೀನಾ ನಮ್ಮ ಸೈನಿಕರನ್ನು ಕೊಂದಿದೆ, ನಮ್ಮ ಭೂಮಿಯನ್ನು ಅತಿಕ್ರಮಿಸಿದೆ. ಹಾಗಿದ್ದಾಗ್ಯೂ ಚೀನಾ ನಮ್ಮ ಪ್ರಧಾನಿಯನ್ನು ಏಕೆ ಹೊಗಳುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ನಮ್ಮ ಗಡಿಯನ್ನು ಯಾರೂ ಅತಿಕ್ರಮಿಸಿಲ್ಲ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಎಡವಟ್ಟು, ಭಾರೀ ಟೀಕೆ!
iಇನ್ನು ಇದಕ್ಕೂ ಮುನ್ನ ಭಾರತದ ಭೂ ಪ್ರದೇಶವನ್ನು ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಒಪ್ಪಿಸಿದ್ದಾರೆ (ಸರೆಂಡರ್ ಮಾಡಿದ್ದಾರೆ) ಎಂಬರ್ಥದಲ್ಲಿ ಟೀಕಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಮಾಡಿದ ಟ್ವೀಟ್‌ವೊಂದು ಭಾರೀ ಚರ್ಚೆಗೆ ಕಾರಣವಾಗಿತ್ತು. ‘ನರೇಂದ್ರ ಮೋದಿ ಅವರು ವಾಸ್ತವವಾಗಿ ಸುರೇಂದರ್ (ಸರೆಂಡರ್?) ಮೋದಿ’ ಎಂದು ರಾಹುಲ್ ಟ್ವೀಟ್ ಮಾಡಿದ್ದರು. ಅಲ್ಲದೇ ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಳ್ಳಲು ವಿದೇಶಿ ಮಾಧ್ಯಮವೊಂದರ ವರದಿಯನ್ನು ಟ್ಯಾಗ್ ಮಾಡಿದ್ದರು. ಈ ವಿಚಾರವಾಗಿ ರಾಹುಲ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು.