* ಸರ್ಕಾರ ಮಾತುಕತೆಗೆ ಆಹ್ವಾನಿಸಿದರೂ ಏಕೆ ಹೋಗಲಿಲ್ಲ?* 43 ರೈತ ಸಂಘಟನೆಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌* ಕೃಷಿ ಕಾಯ್ದೆಗೆ ತಡೆ ನೀಡಿದ್ದರೂ ಪ್ರತಿಭಟನೆ ಏಕೆ?: ರೈತರಿಗೆ ಚಾಟಿ

ನವದೆಹಲಿ(ಅ.05): ‘ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು(Farm law) ಈಗಾಗಲೇ ತಡೆ ಹಿಡಿಯಲಾಗಿದೆ. ಆದ​ರೂ ರೈತರು ಪ್ರತಿಭಟನೆ ನಡೆಸುತ್ತಿರುವುದು ಏಕೆ?’ ಎಂದು ಸುಪ್ರೀಂ ಕೋರ್ಟ್‌(Supreme Court) ಖಾರವಾಗಿ ಪ್ರಶ್ನಿಸಿದೆ. ಇದೇ ವೇಳೆ, ಲಖೀಂಪುರದಲ್ಲಿ(Lakhimpur) ನಾಲ್ವರು ರೈತರ ಸಾವಿನ ಬಗ್ಗೆಯೂ ಖೇದ ವ್ಯಕ್ತ​ಪ​ಡಿ​ಸಿ​ರುವ ಕೋರ್ಟ್‌, ‘ಇಂಥ ಸಂದ​ರ್ಭ​ದಲ್ಲಿ ಘಟ​ನೆಯ ಹೊಣೆ​ಯನ್ನು ಯಾರೂ ಹೊರು​ವು​ದಿ​ಲ್ಲ’ ಎಂಬ ಎಚ್ಚ​ರಿ​ಕೆಯ ಮಾತನ್ನು ರೈತ​ರಿಗೆ ಹೇಳಿ​ದೆ.

‘ರೈತರಿಗೆ ಮರಣ ಶಾಸನದಂತಿರುವ 3 ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ(Jantar Mantar) ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು’ ಎಂದು ರೈತ ಸಂಘಟನೆ ಕೋರಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌(Supreme Court) ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ, ‘ಮಾತು​ಕ​ತೆಗೆ ಕರೆ​ದರೂ ರೈತರು ಬರು​ತ್ತಿ​ಲ್ಲ’ ಎಂದು ಹರ್ಯಾಣದ ಸರ್ಕಾರ(Haryana Govt) ವಾದಿ​ಸಿ​ತು.

ಇದೇ ವೇಳೆ, ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ.ಕೆ ವೇಣುಗೋಪಾಲ್‌ ಅವರು, ‘ಕೃಷಿ ಕಾಯ್ದೆ ವಿಚಾರವು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿದೆ. ಇಂಥ ಸಂದರ್ಭದಲ್ಲಿ ಯಾರೂ ರಸ್ತೆಗಿಳಿದು ಪ್ರತಿಭಟನೆ ನಡೆಸಬಾರದು. ಈಗ ಲಖೀಂಪು​ರ​ದಲ್ಲಿ(Lakhimpur) ನಡೆದ ದುರ​ದೃ​ಷ್ಟ​ಕರ ಘಟನೆ ನೋಡಿ​ದ್ದೀ​ರಿ’ ಎಂದ​ರು.

ಆಗ ಪ್ರತಿ​ಕ್ರಿ​ಯಿ​ಸಿದ ದ್ವಿಸ​ದಸ್ಯ ಪೀಠ, ‘ಇಂಥ ಘಟನೆ ನಡೆ​ದಾಗ ಯಾರೂ ಹೊಣೆ ಹೊರು​ವುದಿಲ್ಲ’ ಎಂದಿ​ತ​ಲ್ಲದೆ, ‘ಕಾ​ಯ್ದೆಗೆ ಈಗಾ​ಗಲೇ ತಡೆ ನೀಡಿ​ದ್ದೇ​ವೆ. ಈ ಬಗ್ಗೆ ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸುವ ಅಗತ್ಯವಾದರೂ ಏನಿದೆ?’ ಎಂದು ಪ್ರಶ್ನಿ​ಸಿ​ತು.

ಇನ್ನು ಹರ್ಯಾಣ ಸರ್ಕಾರ ಆಹ್ವಾನಿಸಿದ ಮಾತುಕತೆಗೆ ಏಕೆ ಹೋಗಲಿಲ್ಲ ಎಂಬುದರ ವಿವರಣೆ ನೀಡುವಂತೆ ರಾಕೇಶ್‌ ಟಿಕಾಯತ್‌ ಸೇರಿದಂತೆ 43 ರೈತ ಸಂಘಟನೆಗಳ ಮುಖಂಡರಿಗೆ ಸೂಚಿ​ಸಿತು ಹಾಗೂ ಶುಕ್ರ​ವಾ​ರಕ್ಕೆ ವಿಚಾ​ರಣೆ ಮುಂದೂ​ಡಿ​ತು.