ಮುರ್ಷಿದಾಬಾದ್ ಗಲಭೆಗೆ ಬಿಜೆಪಿ, ಬಿಎಸ್‌ಎಫ್ ಕಾರಣ ಎಂದು ಮಮತಾ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿದೆ, ಗಲಭೆ ಪೂರ್ವನಿಯೋಜಿತ ಎಂದಿದ್ದಾರೆ. ಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿವೆ, NHRC ಪಕ್ಷಪಾತ ತೋರುತ್ತಿದೆ ಎಂದು ದೂರಿದ್ದಾರೆ. ಧಾರ್ಮಿಕ ಸಾಮರಸ್ಯ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುರ್ಷಿದಾಬಾದ್‌ನಲ್ಲಿ ನಡೆದವಕ್ಫ್‌ ತಿದ್ದುಪಡಿ ವಿಧೇಯಕ ವಿರೋಧಿ ಗಲಭೆ ಪ್ರಕರಣದ ನಂತರ ಜಿಲ್ಲೆಗೆ ಭೇಟಿ ನೀಡಿ, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿದೆ ಎಂದು ಹೇಳಿ, ಘಟನೆಯ ಹಿಂದೆ ರಾಜಕೀಯ ಪಿತೂರಿ ಇರುವ ಶಂಕೆ ವ್ಯಕ್ತಪಡಿಸಿದರು.

ಮಮತಾ ಅವರು ತಮ್ಮ ಹೇಳಿಕೆಯಲ್ಲಿ ಬಿಎಸ್‌ಎಫ್ (BSF)ಗೆ ಅಧಿಕಾರ ನೀಡಿರುವುದು ಗಲಭೆ ಉಲ್ಬಣಕ್ಕೆ ಕಾರಣವಾಗಿದೆ. ಬಿಎಸ್‌ಎಫ್ ಗುಂಡು ಹಾರಿಸದಿದ್ದರೆ ಮುರುಷಿದಾಬಾದ್‌ನಲ್ಲಿ ಹಿಂಸಾಚಾರ ಸಂಭವಿಸುತ್ತಿರಲಿಲ್ಲ ಎಂದು ಆರೋಪಿಸಿದರು. ನಿಮ್ಮ ಅಧಿಕಾರ ಇರುವಾಗ ನೀವು ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸಲು ಸಾಧ್ಯವಿಲ್ಲ "ಬಿಎಸ್‌ಎಫ್ ಗಡಿ ರಕ್ಷಣೆಗೆ ಮಾತ್ರ ಹೊಣೆಗಾರಿಕೆ ಹೊಂದಬೇಕು, ಕೋಮು ಗಲಭೆಗೆ ಪ್ರೋತ್ಸಾಹ ನೀಡಬಾರದು" ಎಂದೂ ಹೇಳಿದರು.

ಮಮತಾ ಬ್ಯಾನರ್ಜಿ ಅವರು ತಮ್ಮ ಭಾಷಣದಲ್ಲಿ ಎಲ್ಲ ಧರ್ಮಗಳ ಜನರಿಗೆ ಸಮಾನವಾಗಿ ನಡೆದುಕೊಳ್ಳುವ ನಿಲುವು ವ್ಯಕ್ತಪಡಿಸಿದರು. "ನಾನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಸಿಖ್ ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ. ನಾನು ಯಾವುದೇ ಧರ್ಮದ ವಿರುದ್ಧವಲ್ಲ, ಆದರೆ ಗಲಭೆಗಳ ವಿರುದ್ಧ" ಎಂದು ಸ್ಪಷ್ಟಪಡಿಸಿದರು. ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗಲಭೆ ಸಂತ್ರಸ್ತರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. "ಅವರು ನನ್ನನ್ನು ಸಂತ್ರಸ್ತರೊಂದಿಗೆ ಭೇಟಿಯಾಗದಂತೆ ಮಾಡಿದ್ದಾರೆ. ಇದು ಅಪಹರಣಕ್ಕೆ ಸಮಾನವಾಗಿದೆ" ಎಂದು ಹೇಳಿದರು.

ಅಲ್ಲದೇ, ಮಮತಾ NHRC (ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ) ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಅವರು NHRC ಯಾವಾಗಲೂ ಬಂಗಾಳಕ್ಕೆ ತ್ವರಿತವಾಗಿ ಬರುತ್ತದೆ, ಆದರೆ ಉತ್ತರ ಪ್ರದೇಶ ಅಥವಾ ಮಣಿಪುರದಲ್ಲಿ ನಡೆದ ಗಂಭೀರ ಹಿಂಸಾಚಾರ ಸಂದರ್ಭಗಳಲ್ಲಿ ಎಷ್ಟರ ಮಟ್ಟಿಗೆ ಕ್ರಮ ತೆಗೆದುಕೊಂಡಿದೆ ಎಂಬುದು ಪ್ರಶ್ನೆಯಾಗಿದೆ. "ಮಣಿಪುರ ಈಗ ರಾಷ್ಟ್ರಪತಿ ಆಳ್ವಿಕೆಯಲ್ಲಿ ಇದೆ. ಆದರೆ NHRC ಅಲ್ಲಿ ಭೇಟಿಗೆ ಹೋಗಿದೆಯೇ?" ಎಂಬುದನ್ನು ಅವರು ಕೇಳಿದರು.

ಮಮತಾ ಅವರ ಪ್ರಕಾರ, ಮುರ್ಷಿದಾಬಾದ್ ಘಟನೆಯು ಪೂರ್ವ ನಿರ್ಧರಿತವಾಗಿದ್ದು, ಕೆಲ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು BJP ಪರವಾಗಿ ಹರಡುತ್ತಿದ್ದಾರಂತೆ. "ಮಾಧ್ಯಮಗಳು ನಿಜವನ್ನು ಹೇಳಬೇಕು, ರಾಜಕೀಯ ಪ್ರಭಾವದಿಂದ ದೂರವಿರಬೇಕು" ಎಂದು ತೀವ್ರವಾಗಿ ಹೇಳಿದ್ದಾರೆ.

ಅವರ ಮಾತುಗಳ ಪ್ರಕಾರ, ಮುರ್ಷಿದಾಬಾದ್ ಗಲಭೆ ಹಿಂದೆ ರಾಜಕೀಯ ಪಿತೂರಿ ಇದೆ, ಹಾಗೂ ಬಿಎಸ್‌ಎಫ್ ಮತ್ತು ಬಿಜೆಪಿ ಇದರ ಭಾಗ, "ನೀವು ಅಧಿಕಾರದಲ್ಲಿದ್ದರೆ ಜನರ ನಡುವೆ ಏಕತೆ ರೂಪಿಸಬೇಕು, ವಿಭಜನೆ ಅಲ್ಲ." ಎಂದು ಅವರು ಹೇಳಿದರು