ನವದೆಹಲಿ[ಫೆ.28]: 1999ರಲ್ಲಿ ನಡೆದ ಕಾರ್ಗಿಲ್‌ ಸಮರದ ಸಂದರ್ಭದಲ್ಲೂ ಭಾರತದ ಯುದ್ಧ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಪಾಕಿಸ್ತಾನದೊಳಗೆ ಬಿದ್ದಿತ್ತು. ಆಗ ನಚಿಕೇತ ಎಂಬ ಪೈಲಟ್‌ ಪಾಕಿಸ್ತಾನಿ ಪಡೆಗಳಿಗೆ ಸಿಕ್ಕಿಬಿದ್ದಿದ್ದರು. ವಿಯೆನ್ನಾ ಒಪ್ಪಂದದಡಿ ಅಂದು ನಚಿಕೇತ ಅವರನ್ನು ಬಿಡುಗಡೆ ಮಾಡಿದ್ದ ಪಾಕಿಸ್ತಾನ, ಅದೇ ಕ್ರಮವನ್ನು ಬುಧವಾರ ಪಾಕಿಸ್ತಾನದಲ್ಲಿ ಸಿಲುಕಿರುವ ಅಭಿನಂದನ್‌ ವಿಚಾರದಲ್ಲೂ ತೋರುತ್ತಾ?

1999ರಲ್ಲಿ ಪಾಕಿಸ್ತಾನದ ನೆಲೆಗಳ ಮೇಲೆ ದಾಳಿ ಮಾಡಲು ತೆರಳಿದ್ದ ಮಿಗ್‌-27ರ ಪೈಲಟ್‌ ಆಗಿದ್ದವರು ನಚಿಕೇತ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ವಿಮಾನದಿಂದ ಎಜೆಕ್ಟ್ ಆಗಿದ್ದರು. ನೆಲಕ್ಕೆ ಕಾಲೂರುತ್ತಿದ್ದಂತೆ ಪಾಕಿಸ್ತಾನ ಯೋಧರು ನಚಿಕೇತ ಅವರನ್ನು ಸುತ್ತುವರಿದಿದ್ದರು. ಅವರನ್ನು ಬಿಡುಗಡೆ ಮಾಡಿಸಲು ಭಾರತ ಎಲ್ಲ ಪ್ರಯತ್ನಗಳನ್ನೂ ನಡೆಸಿತ್ತು. ಕೊನೆಗೆ ವಿಯೆನ್ನಾ ಒಪ್ಪಂದಕ್ಕೆ ಅನುಗುಣವಾಗಿ ಪಾಕಿಸ್ತಾನ ಬಿಡುಗಡೆ ಮಾಡಿತ್ತು. ಈಗ ಮಿಗ್‌-21 ವಿಮಾನದ ಪೈಲಟ್‌ ಅಭಿನಂದನ್‌ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರ ವಿಚಾರದಲ್ಲೂ ಪಾಕ್‌ ಅದೇ ನಡೆ ಅನುಸರಿಸುತ್ತಾ ಎಂಬುದು ಯಕ್ಷಪ್ರಶ್ನೆಯಾಗಿದೆ.