ಪಟನಾ(ಅ.28): ಜೆಡಿಯು-ಬಿಜೆಪಿ ಕೂಟ ಹಾಗೂ ಆರ್‌ಜೆಡಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆದಿರುವ ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ ನಡೆಯಲಿದೆ. 243 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 71 ವಿಧಾನಸಭೆ ಕ್ಷೇತ್ರಗಳಲ್ಲಿ ಹಣಾಹಣಿ ಏರ್ಪಡಲಿದೆ.

2.14 ಕೋಟಿ ಮತದಾರರು 1066 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ. 71ರಲ್ಲಿ ಜೆಡಿಯು 35, ಬಿಜೆಪಿ 29, ಆರ್‌ಜೆಡಿ 42, ಕಾಂಗ್ರೆಸ್‌ 20 ಹಾಗೂ ಚಿರಾಗ್‌ ಪಾಸ್ವಾನ್‌ರ ಎಲ್‌ಜೆಪಿ 41 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ.

ಸಕಲ ಸುರಕ್ಷತಾ ಕ್ರಮ:

ಕೊರೋನಾ ದೇಶದಲ್ಲಿ ವ್ಯಾಪಿಸಿರುವ ನಡುವೆಯೇ ಹಲವು ಸುರಕ್ಷತಾ ಕ್ರಮಗಳೊಂದಿಗೆ ಚುನಾವಣಾ ಆಯೋಗವು ಮತದಾನ ಹಮ್ಮಿಕೊಂಡಿದೆ. ಜನಸಂದಣಿ ತಪ್ಪಿಸಲು ಪ್ರತಿ ಬೂತ್‌ನ ಮತದಾರರ ಸಂಖ್ಯೆಯನ್ನು 1600ರಿಂದ 1000ಕ್ಕೆ ಸೀಮಿತಗೊಳಿಸಿ ಮತಗಟ್ಟೆ ಸಂಖ್ಯೆ ಹೆಚ್ಚಿಸಲಾಗಿದೆ.

ಮತದಾನದ ಅವಧಿ ಹೆಚ್ಚಿಸಲಾಗಿದೆ ಹಾಗೂ 80 ವರ್ಷ ಮೇಲ್ಪಟ್ಟವರಿಗೆ/ಸೋಂಕಿತರಿಗೆ ಅಂಚೆ ಮತಕ್ಕೆ ಅವಕಾಶ ನೀಡಲಾಗಿದೆ. ಮತಯಂತ್ರವನ್ನು ಸ್ಯಾನಿಟೈಸ್‌ ಮಾಡಲಾಗುತ್ತದೆ. ಮತಗಟ್ಟೆಗಳಲ್ಲಿ ಸೋಪು, ಕೈತೊಳೆವ ನೀರು, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದ್ದು, ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ.