Fact Check: ಮುಸ್ಲಿಂ ಮಹಿಳೆಯರು ಮಸೀದಿಯಲ್ಲಿ ರಾಮ ಭಜನೆ ಹಾಡಿದ್ರಾ? ಮತ್ತೆ ವೈರಲ್ ಆಯ್ತು ಹಳೆ ವಿಡಿಯೋ!
*ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹರಿದಾಡುತ್ತಿದೆ 2018ರ ವೈರಲ್ ವಿಡಿಯೋ
*135 ಕೋಟಿ ಭಾರತೀಯರೊಂದಿಗೆ ಹಂಚಿಕೊಳ್ಳಿ ಅನ್ನುತ್ತೆ ವಾಟ್ಸಪ್ ಮೇಸೆಜ್
*ಮುಸ್ಲಿಂ ಮಹಿಳೆಯರು ನಿಜವಾಗಿಯೂ ಮಸೀದಿಯಲ್ಲಿ ರಾಮ ಭಜನೆ ಮಾಡಿದ್ದಾರಾ?
ದುಬೈನಲ್ಲಿ ಮುಸ್ಲಿಂ ಮಹಿಳೆಯರು ಮಸೀದಿಯಲ್ಲಿ ರಾಮ ಭಜನೆಗಳನ್ನು ಹಾಡುತ್ತಿದ್ದಾರೆ ( Muslim Women Sang Ram Bhajans) ಎಂದು 2018ರಲ್ಲಿ ವೈರಲ್ (Viral) ಆಗಿದ್ದ ವಿಡಿಯೋ ಈಗ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ (Social Media) ಹರಿದಾಡುತ್ತಿದೆ. ಈ ಬಗ್ಗೆ ಫೇಸ್‌ಬುಕ್ ಹಾಗೂ ವಾಟ್ಸಪ್‌ಗಳಲ್ಲಿ ಹಲವು ಸಂದೇಶಗಳು ಹರಿದಾಡುತ್ತಿದ್ದು "ಮುಸ್ಲಿಂ ಮಹಿಳೆಯರು ರಾಮ ಭಜನೆಯನ್ನು ಮಸೀದಿಯಲ್ಲಿ ಪ್ರಸ್ತುತ ಪಡಿಸಿದರು. ಅವರ ಗಂಡಂದಿರು ಶೇಖ್ ಗಳು ಚಪ್ಪಾಳೆ ತಟ್ಟಿ ಬೆಂಬಲಿಸಿದರು" ಎಂದು ಮೇಸೆಜ್‌ನಲ್ಲಿ ಬರೆಯಲಾಗಿದೆ.
ಮೇಸೆಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್‌ನಲ್ಲಿ (WhatsApp) ಹರಿದಾಡುತ್ತಿರುವ ಮೇಸೆಜ್ ಈ ರೀತಿ ಇದೆ: " || ದುಬೈನಲ್ಲಿ ಹೊಸ ಯುಗ ಆರಂಭ || ಮುಸ್ಲಿಂ ಮಹಿಳೆಯರು ರಾಮ ಭಜನೆಯನ್ನು ಮಸೀದಿಯಲ್ಲಿ ಪ್ರಸ್ತುತ ಪಡಿಸಿದರು. ಅವರ ಗಂಡಂದಿರು ಶೇಖ್ ಗಳು ಚಪ್ಪಾಳೆ ತಟ್ಟಿ ಬೆಂಬಲಿಸಿದರು. ಇದನ್ನು ಭಾರತದಲ್ಲಿ ಮಾಡಿದ್ದರೆ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂದು ಕಿರುಚಾಡುತ್ತಿದ್ದರು. ಈ ಸಂತಸದ ಸಂಗತಿಯನ್ನು ನಮ್ಮ 135 ಕೋಟಿ ಭಾರತೀಯರೊಂದಿಗೆ ಹಂಚಿಕೊಳ್ಳಿ...". ಈ ಹಿಂದೆ ಈ ವೀಡಿಯೊವನ್ನು ಯುಟ್ಯೂಬ್ ಮತ್ತು ಇತರ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಈ ವಿಡಿಯೋ ಈಗ ವಾಟ್ಸಪ್ ನಲ್ಲಿ ಮತ್ತೆ ಸದ್ದು ಮಾಡುತ್ತಿದೆ.
ದುಬೈಯ ಮಸೀದಿಯಲ್ಲಿ ಮಹಿಳೆಯರು ರಾಮ ಭಜನೆಗಳನ್ನು ಹಾಡಿದ್ದಾರಾ?
ವೀಡಿಯೊದಲ್ಲಿ ಇರುವ ಮಹಿಳೆಯರು ನಿಸ್ಸಂಶಯವಾಗಿ ಮುಸ್ಲಿಮರಾಗಿದ್ದಾರೆ ಮತ್ತು ಖಂಡಿತವಾಗಿಯೂ ರಾಮ ಭಜನೆಗಳನ್ನು ಹಾಡುತ್ತಿದ್ದಾರೆ. ಆದರೆ ವಾಟ್ಸಪ್‌ನಲ್ಲಿ ಹರಿದಾಡುತ್ತಿರುವಂತೆ ಅದು ಮಸೀದಿಯೊಳಗೆ ಅಲ್ಲ.ಈ ವೀಡಿಯೋ ವಾಸ್ತವವಾಗಿ ಪುಟ್ಟಪರ್ತಿಯಲ್ಲಿರುವ ಸತ್ಯಸಾಯಿ ಬಾಬಾ ಅವರ ಆಶ್ರಮ ಪ್ರಶಾಂತಿ ನಿಲಯದಲ್ಲಿ (Prashanthi Nilaya) ಚಿತ್ರೀಕರಿಸಲಾಗಿದೆ.
ಹಾಗಾದರೆ ವೀಡಿಯೊದಲ್ಲಿರುವ ಮಹಿಳೆಯರು ಯಾರು?
ಈ ವೀಡಿಯೊ 10 ಜುಲೈ 2012 ರಂದು ಶ್ರೀ ಸತ್ಯ ಸಾಯಿ ಆಫೀಶೀಯಲ್ (Sri Sathya Sai Official) ಯೂಟ್ಯೂಬ್ ಚಾನೆಲ್‌ನಿಂದ ಹಂಚಿಕೊಳ್ಳಕಲಾಗಿದೆ. ವಿಡಿಯೋದಲ್ಲಿರುವವವರು ಶ್ರೀ ಸತ್ಯ ಸಾಯಿ ಅಂತರಾಷ್ಟ್ರೀಯ ಸಂಸ್ಥೆಯ ಬಹ್ರೇನ್, ಇರಾನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಟರ್ಕಿ ಮತ್ತು ಯುನೈಟೆಡ್ ಅರಬ್‌ಗೆ ಸೇರಿದ ಶಾಖೆಗಳ ಗಾಯಕರಾಗಿದ್ದಾರೆ. ವೈರಲ್ ವೀಡಿಯೊವನ್ನು ಮೂಲ ವೀಡಿಯೊದಿಂದ ಎಡಿಟ್ ಮಾಡಲಾಗಿದೆ. ಮೂಲ ವಿಡಿಯೋ ಸುಮಾರು 65 ನಿಮಿಷಗಳದಾಗಿದ್ದು " SARVA DHARMA SWAROOPA SAI " - ARABIAN CHOIR - 10 JULY 2012 ಎಂವ ಶೀರ್ಷಿಕೆ ನೀಡಿ ಅಪ್‌ಲೋಡ್ ಮಾಡಲಾಗಿದೆ.
ವೀಡಿಯೊ ಬಗ್ಗೆ ಸ್ಪಷ್ಟಪಡಿಸಿದ ಸತ್ಯ ಸಾಯಿ ಬಾಬಾ ಇಂಟರ್ನ್ಯಾಷನಲ್ ಆರ್ಗನೈಸೇಶನ್ (sathya sai baba international organisation) , ವೀಡಿಯೊದಲ್ಲಿ ಕಂಡುಬರುವ ಎಲ್ಲರು ಮುಸ್ಲಿಮರು ಅಥವಾ ಅರಬ್ಬರು ಅಲ್ಲ, ಆದರೆ ಅವರಲ್ಲಿ ಕೆಲವರು ಖಂಡಿತವಾಗಿಯೂ ಮುಸ್ಲಿಂ ಪಂಥದವರಿದ್ದಾರೆ. ಧರ್ಮಗಳ ಮಧ್ಯೆ ಏಕತೆಯನ್ನು (Unity) ಸಾಧಿಸಲು ಪ್ರಶಾಂತಿ ನಿಲಯಮ್‌ನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಲಾಗುತ್ತಿದೆ. ಇದು ಸತ್ಯಸಾಯಿ ಬಾಬಾ ಅವರ ಭಕ್ತರಿಗೆ ನೀಡಿದ ಪ್ರಾಥಮಿಕ ಸಂದೇಶಗಳಲ್ಲಿ ಒಂದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋಗಳ ತುಣುಕುಗಳನ್ನು ಹರಿಬಿಟ್ಟು ದುಬೈಯಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆಗಳನ್ನು ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ವಿಡಿಯೋದಲ್ಲಿರುವ ಜನರಲ್ಲಿ ಕೆಲವರು ಮುಸ್ಲಿಂರಾಗಿದ್ದರೂ ಭಜನೆ ಹಾಡಿದ್ದು ಮಸೀದಿಯಲ್ಲಲ್ಲ ಎಂದು ಖಚಿತವಾಗಿದೆ. ಈ ವಿಡಿಯೋ ಸತ್ಯ ಸಾಯಿ ಬಾಬಾ ಇಂಟರ್ನ್ಯಾಷನಲ್ ಆರ್ಗನೈಸೇಶನ್ ವಿಡಿಯೋ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದುಬಂದಿದೆ.