ವಾರಾಣಸಿ[ಡಿ.02]: ಈರುಳ್ಳಿ ದರ ದೇಶಾದ್ಯಂತ ಗ್ರಾಹಕರ ‘ಕಣ್ಣೀರು’ ತರಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ‘ಈರುಳ್ಳಿ ಸಾಲ’ ನೀಡಿಕೆ ಆರಂಭವಾಗಿದೆ! ಗ್ರಾಹಕರಲ್ಲಿ ಈರುಳ್ಳಿ ಖರೀದಿಗೆ ದುಡ್ಡಿಲ್ಲ ಎಂದಾದಲ್ಲಿ ಆಧಾರ್‌ ಕಾರ್ಡನ್ನು ಅಥವಾ ಚಿನ್ನಾಭರಣಗಳನ್ನು ಅಡವಿಟ್ಟುಕೊಂಡು ಇಲ್ಲಿ ಸಾಲ ರೂಪದಲ್ಲಿ ಈರುಳ್ಳಿ ನೀಡಲಾಗುತ್ತದೆ!!

ಅಚ್ಚರಿ ಎನ್ನಿಸಿದರೂ ನಿಜ. ಈರುಳ್ಳಿ ದರ ಏರಿಕೆ ವಿರುದ್ಧ ಸಮಾಜವಾದಿ ಪಕ್ಷದ ಯುವ ಘಟಕ ಈ ರೀತಿಯ ವಿಶಿಷ್ಟ‘ಪ್ರತಿಭಟನಾರ್ಥ ಯೋಜನೆ’ಯೊಂದನ್ನು ಆರಂಭಿಸಿದೆ. ಸಮಾಜವಾದಿ ಪಕ್ಷವೇ ಕೆಲವು ಈರುಳ್ಳಿ ಮಾರಾಟ ಕೌಂಟರ್‌ಗಳನ್ನು ತೆಗೆದಿದೆ. ಅಲ್ಲಿ ಆಧಾರ್‌ ಕಾರ್ಡು ಅಥವಾ ಚಿನ್ನಾಭರಣಗಳನ್ನು ಅಡವಿಟ್ಟುಕೊಳ್ಳಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಸಾಲ ರೂಪದಲ್ಲಿ ಈರುಳ್ಳಿ ನೀಡಲಾಗುತ್ತದೆ.

‘ಇನ್ನು ಕೆಲವು ಅಂಗಡಿಗಳಲ್ಲಿ ಈರುಳ್ಳಿಯ ‘ಅಮೂಲ್ಯತೆ’ಯನ್ನು ಅರಿತು ಅವುಗಳನ್ನು ಲಾಕರ್‌ನಲ್ಲಿ ಇಡುವ ವ್ಯವಸ್ಥೆಯನ್ನೂ ಆರಂಭಿಸಲಾಗಿದೆ’ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.

ಈರುಳ್ಳಿ ಬೆಲೆ 72 ವರ್ಷದ ಗರಿಷ್ಠ

ಹವಾಮಾನ ವೈಪರೀತ್ಯದ ಕಾರಣ ಈರುಳ್ಳಿ ಬೆಳೆ ಭಾರತದಲ್ಲಿ ಹಾಳಾಗಿರುವ ಪರಿಣಾಮ ದರ ಏರುತ್ತಲೇ ಇದೆ. ಭಾರತದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆಎನ್ನಿಸಿಕೊಂಡಿರುವ ಮಹಾರಾಷ್ಟ್ರದ ಲಾಸಲಗಾಂವ್‌ನಲ್ಲಿ ಕ್ವಿಂಟಲ್‌ ಈರುಳ್ಳಿ ಬೆಲೆ 7,990 ರು.ಗೆ ಹೆಚ್ಚಳವಾಗಿದೆ. ಅಂದರೆ ಸಗಟು ಮಾರುಕಟ್ಟೆಯಲ್ಲೇ ಈರುಳ್ಳಿ ಕೇಜಿಗೆ 80 ರುಪಾಯಿಗೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ದುಪ್ಪಟ್ಟು ದರಕ್ಕೆ ಮಾರಾಟವಾಗುವ ಸಾಧ್ಯತೆ ಇದೆ.

ಇಷ್ಟೊಂದು ಪ್ರಮಾಣದಲ್ಲಿ ಲಾಸಲಗಾಂವ್‌ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯಲ್ಲಿ (ಎಪಿಎಂಸಿ) ದರ ಏರಿಕೆ ಆಗಿರುವುದು 72 ವರ್ಷದ ದಾಖಲೆಯಾಗಿದೆ.

‘ನವೆಂಬರ್‌ 29ರಂದು ಈರುಳ್ಳಿ ಬೆಲೆ ಇಲ್ಲಿ 7,990 ರು. ತಲುಪಿತು. 72 ವರ್ಷದ ಈ ಎಪಿಎಂಸಿ ಇತಿಹಾಸದಲ್ಲೇ ಈರುಳ್ಳಿ ಇಷ್ಟೊಂದು ದರಕ್ಕೆ ಖರೀದಿ/ಮಾರಾಟ ಆಗಿರಲಿಲ್ಲ’ ಎಂದು ಎಪಿಎಂಸಿ ಹೇಳಿದೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಲಾಸಲಗಾಂವ್‌ ಎಪಿಎಂಸಿ ಅಧ್ಯಕ್ಷೆ ಸುವರ್ಣಾ ಜಗತಾಪ್‌, ‘ಜನವರಿ ಅಂತ್ಯದವರೆಗೆ ಈರುಳ್ಳಿ ಬೆಲೆ ಇಳಿಕೆ ಸಾಧ್ಯತೆ ಇಲ್ಲ. ಹೀಗಾಗಿ ಅಲ್ಲಿಯವರೆಗೆ ಗ್ರಾಹಕರು ಕಣ್ಣೀರು ಸುರಿಸಬೇಕಾಗುತ್ತದೆ. ಅಕಾಲಿಕ ಮಳೆಯಿಂದ ಮುಂಗಾರು ಹಂಗಾಮಿನ ಈರುಳ್ಳಿ ಬೆಳೆಗೆ ಹಾನಿಯಾಗಿದ್ದೇ ಇದಕ್ಕೆ ಕಾರಣ. ಜನವರಿ ಅಂತ್ಯಕ್ಕೆ ದರ ಇಳಿಯಬಹುದು’ ಎಂದರು.