ಕೊರೋನಾ ಲಸಿಕೆ, ಬಯೋಕಾನ್ ಮುಖ್ಯಸ್ಥೆ ಕಿರಣ್ ಶಾ ಮಹತ್ವದ ಹೇಳಿಕೆ!
ಕೊರೋನಾ ಲಸಿಕೆ ಲಭಿಸಲು ವರ್ಷಗಳೇ ಬೇಕು: ಕಿರಣ್| ಈವರೆಗೂ 4 ವರ್ಷಕ್ಕಿಂತ ಕಮ್ಮಿ ಅವಧಿಯಲ್ಲಿ ಯಾವುದೇ ಲಸಿಕೆ ಸಿದ್ಧವಾಗಿಲ್ಲ| ಅಲ್ಲಿಯವರೆಗೆ ಕೊರೋನಾ ನಿಭಾಯಿಸಬೇಕು| ಆತಂಕದ ವಿಷಯ ತಿಳಿಸಿದ ಕಿರಣ್ ಶಾ| ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಹಣ ಹೂಡಲು ಆಗ್ರಹ
ನವದೆಹಲಿ(ಮೇ.31): ಕೊರೋನಾ ವೈರಸ್ ತಡೆಯುವ ಲಸಿಕೆ ಈ ವರ್ಷಾಂತ್ಯಕ್ಕೆ ದೊರಕಬಹುದು ಎಂದು ಈ ಹಿಂದೆ ಹೇಳಿದ್ದ ಬೆಂಗಳೂರಿನ ಔಷಧ ತಯಾರಿಕಾ ಕಂಪನಿ ‘ಬಯೋಕಾನ್’ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಈಗ ಲಸಿಕೆ ಬೇಗ ಸಿಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೆ. ‘ಕೊರೋನಾ ಲಸಿಕೆ ಸಿದ್ಧವಾಗುವುದಕ್ಕೆ ಸುದೀರ್ಘ ಸಮಯ ಹಿಡಿಯಲಿದೆ. ಹೀಗಾಗಿ ಇನ್ನೂ ಕೆಲವು ವರ್ಷ ನಾವು ಈ ಪಿಡುಗಿನ ವಿರುದ್ಧ ಸೆಣಸಬೇಕು’ ಎಂದಿದ್ದಾರೆ.
ಕೊರೋನಾ ಕುರಿತ ವೆಬ್ ಸಂವಾದದಲ್ಲಿ ಶನಿವಾರ ಮಾತನಾಡಿದ ಅವರು, ‘ಇಡೀ ದೇಶಕ್ಕೆ ಲಭಿಸಬಲ್ಲ ಸುರಕ್ಷಿತ ಲಸಿಕೆ ಲಭಿಸಲು ಬಹಳ ಸಮಯ ಬೇಕಾಗಬಹುದು. ಲಸಿಕೆ ಸಿದ್ಧಪಡಿಸುವಿಕೆಯು ಬಹಳ ಕ್ಲಿಷ್ಟಪ್ರಕ್ರಿಯೆ ಎಂಬುದನ್ನು ನಾವು ಅರಿಯಬೇಕು. ಈವರೆಗೆ 4 ವರ್ಷಕ್ಕೆ ಮುನ್ನ ಯಾವುದೇ ಲಸಿಕೆ ಲಭ್ಯವಾಗಿಲ್ಲ’ ಎಂದು ಹೇಳಿದರು.
ಕೊರೋನಾ ಲಸಿಕೆ ಎಲ್ಲಿಗೆ ಬಂತು?, ಸೆಪ್ಟೆಂಬರ್‌ನೊಳಗೆ ರೆಡಿಯಾಗುತ್ತಾ?
‘ಒಂದು ವರ್ಷದೊಳಗೆ ಲಸಿಕೆ ಲಭಿಸುವಿಕೆ ಒಂದು ಅಸಾಧ್ಯದ ಗುರಿ. ಲಸಿಕೆ ಸಿದ್ಧವಾಗಲು ಹಲವು ಪ್ರಕ್ರಿಯೆ ನಡೆಯಬೇಕು. ಅದರ ಸುರಕ್ಷತೆ, ಕ್ಷಮತೆ ಸಾಬೀತಾಗಬೇಕು’ ಎಂದರು.
‘ಲಸಿಕೆ ಲಭ್ಯತೆಯವರೆಗೆ ಮುಂದಿನ ಕೆಲವು ವರ್ಷ ಕಾಲ ಕೊರೋನಾ ನಿಭಾಯಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಹಣ ತೊಡಗಿಸಬೇಕು. ಭಾರತವಷ್ಟೇ ಅಲ್ಲ ಇಡೀ ವಿಶ್ವದ ಕಹಿ ಸತ್ಯವೊಂದನ್ನು ಕೊರೋನಾ ಬಯಲಿಗೆಳೆದಿದೆ. ಆರೋಗ್ಯ ಕ್ಷೇತ್ರದ ಭಯಾನಕ ಸ್ಥಿತಿಯನ್ನು ಎತ್ತಿ ತೋರಿಸಿದೆ’ ಎಂದು ಅಭಿಪ್ರಾಯಪಟ್ಟರು.
‘ಆರೋಗ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಇದು ಸಕಾಲ. ಇದರಿಂದ ಭಾರತ ಹಾಗೂ ಜಗತ್ತು ಉಳಿಯಲಿದೆ’ ಎಂದರು.
ಅಪೋಲೋ ಆಸ್ಪತ್ರೆ ಮುಖ್ಯಸ್ಥೆ ಸುನೀತಾ ರೆಡ್ಡಿ ಅವರೂ ಶಾ ಅವರ ಮಾತನ್ನು ಅನುಮೋದಿಸಿದರು.