ಡೆಹ್ರಾಡೂನ್‌(ಜ.01): ಗಡಿಯಲ್ಲಿ ಚೀನಾ ತಗಾದೆ ಹೆಚ್ಚಿರುವ ನಡುವೆಯೇ, ಭಾರತ-ಚೀನಾ ಗಡಿಯ 100 ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತರಾಖಂಡ ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದೆ. ಈ ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಸಿ ವಲಸೆ ತಪ್ಪಿಸಲು ಈ ಕ್ರಮ ಜರುಗಿಸಲಾಗುತ್ತಿದೆ. ಈ ಕುರಿತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಕಳಿಸಲಿದೆ.

‘ಈ ಗ್ರಾಮಗಳನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ‘ಮಾದರಿ ಕೃಷಿ ಗ್ರಾಮ’ಗಳನ್ನಾಗಿ ಇವನ್ನು ಪರಿವರ್ತಿಸಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರಾಖಂಡ ಕೃಷಿ ಸಚಿವ ಸುಬೋಧ್‌ ಉನ್ಯಾಲ್‌ ಹೇಳಿದ್ದಾರೆ. ಗ್ರಾಮಗಳ ಸುತ್ತಲಿನ 1ರಿಂದ 10 ಕಿ.ಮೀ.ವರೆಗಿನ ವ್ಯಾಪ್ತಿಯನ್ನು ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ.

ಹಿಂದೂ ಮಹಾಸಾಗರದಲ್ಲಿ ಡ್ರೋಣ್ ಮೂಲಕ ಚೀನಾ ಬೇಹುಗಾರಿಕೆ

‘ಗ್ರಾಮಗಳಲ್ಲಿ ಕೃಷಿ ಹಾಗೂ ತೋಟಗಾರಿಕೆಗೆ ಉತ್ತೇಜಿಸಲಾಗುತ್ತದೆ. ಮೀನುಗಾರಿಕೆ, ಹೈನುಗಾರಿಕೆ, ಜೇನು ಸಾಕಣೆಗೂ ಆದ್ಯತೆ ನೀಡಿ ಗ್ರಾಮಸ್ಥರನ್ನು ಹುರಿದುಂಬಿಸಲಾಗುತ್ತದೆ. ಇದರಿಂದಾಗಿ ಗ್ರಾಮದಲ್ಲೇ ಜನರಿಗೆ ಉದ್ಯೋಗ ದೊರಕಿ ಅವರ ವಲಸೆ ತಪ್ಪುತ್ತದೆ. ಗಡಿ ಭಾಗದಲ್ಲಿ ಸಮೃದ್ಧಿ ಸೃಷ್ಟಿಯಾಗುತ್ತದೆ. ವಲಸೆ ತಪ್ಪಿಸುವುದು ವ್ಯೂಹಾತ್ಮಕವಾಗಿ ಕೂಡ ಮುಖ್ಯವಾದುದು’ ಎಂದಿದ್ದಾರೆ.