Asianet Suvarna News Asianet Suvarna News

17 ವರ್ಷ ಬಳಿಕ ಕಾಶ್ಮೀರದಲ್ಲಿ ಲಿಕ್ವಿಡ್‌ ಬಾಂಬ್‌ಗಳ ಬಳಕೆ: ಇದನ್ನು ಪತ್ತೆ ಮಾಡುವುದೇ ಭಾರಿ ಕಷ್ಟ!

ಕೇಂದ್ರಾಡಳಿತ ಪ್ರದೇಶದಲ್ಲಿ ಪೊಲೀಸರು ಇತ್ತೀಚೆಗೆ ನಡೆಸಿದ ದಾಳಿ ವೇಳೆ ಇಂಥ ‘ಪತ್ತೆಹಚ್ಚಲು ಕಷ್ಟಕರವಾದ (ಡಿ2ಡಿ- ಡಿಫಿಕಲ್ಟ್‌ ಟು ಡಿಟೆಕ್ಟ್‌)’ ಸುಧಾರಿತ ಸ್ಫೋಟಕಗಳು ಪತ್ತೆ ಆಗಿರುವುದು ಭದ್ರತಾ ಪಡೆಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. 

Use of liquid bombs in Kashmir after 17 years gvd
Author
First Published Jun 14, 2024, 7:14 AM IST

ಶ್ರೀನಗರ (ಜೂ.14): ಜಮ್ಮು-ಕಾಶ್ಮೀರಕ್ಕೆ 17 ವರ್ಷಗಳ ನಂತರ ದ್ರವ ಸ್ಫೋಟಕಗಳು (ಲಿಕ್ವಿಡ್ ಐಇಡಿ) ಮರಳಿ ಬಂದಿವೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪೊಲೀಸರು ಇತ್ತೀಚೆಗೆ ನಡೆಸಿದ ದಾಳಿ ವೇಳೆ ಇಂಥ ‘ಪತ್ತೆಹಚ್ಚಲು ಕಷ್ಟಕರವಾದ (ಡಿ2ಡಿ- ಡಿಫಿಕಲ್ಟ್‌ ಟು ಡಿಟೆಕ್ಟ್‌)’ ಸುಧಾರಿತ ಸ್ಫೋಟಕಗಳು ಪತ್ತೆ ಆಗಿರುವುದು ಭದ್ರತಾ ಪಡೆಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ತಿಂಗಳ ಆರಂಭದಲ್ಲಿ ಪುಲ್ವಾಮಾದಲ್ಲಿ ನಡೆದ ಗುಂಡಿನ ಚಕಮಕಿಯ ನಂತರ ಬಂಧಿಸಲಾದ ಬಾಂಬ್‌ ಪೂರೈಕೆದಾರನ ಸಹಾಯದಿಂದ ದ್ರವ ಐಇಡಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ಲಷ್ಕರ್-ಎ-ತೊಯ್ಬಾ ಉಗ್ರರಾದ ರಿಯಾಜ್ ದಾರ್ ಅಲಿಯಾಸ್ ‘ಸತಾರ್’ ಮತ್ತು ಅವನ ಸಹಚರ ರಯೀಸ್ ದಾರ್‌ನನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆ ನಂತರ ಈ ಇಬ್ಬರೂ ಉಗ್ರರಿಗೆ ಬಾಂಬ್‌ನಂಥ ಸ್ಫೋಟಕಗಳನ್ನು ಪೂರೈಸಿ ಸಹಾಯ ಮಾಡುತ್ತಿದ್ದ ಬಿಲಾಲ್‌ ಲೋನ್‌, ಸಜ್ಜಾದ್‌ ಗನಿ ಹಾಗೂ ಶಾಕಿರ್‌ ಬಶೀರ್‌ ಎಂಬ ಪುಲ್ವಾಮಾದ 3 ‘ಓವರ್‌ ಗ್ರೌಂಡ್‌ ವರ್ಕರ್‌’ಗಳನ್ನು (ಬಾಂಬ್‌ ಪೂರೈಕೆದಾರರನ್ನು) ಬಂಧಿಸಲಾಗಿತ್ತು.

ಪೋಕ್ಸೋ ಪ್ರಕರಣ: ಬಿಎಸ್‌ವೈಗಾಗಿ ದೆಹಲಿಯಲ್ಲಿ ಸಿಐಡಿ ಅಧಿಕಾರಿಗಳ ತಂಡದಿಂದ ತಲಾಶ್‌!

ಇವರ ವಿಚಾರಣೆಯ ವೇಳೆ ಓವರ್‌ ಗ್ರೌಂಡರ್‌ ವರ್ಕರ್‌ಗಳಲ್ಲಿ ಒಬ್ಬಾತ ಪೊಲೀಸರಿಗೆ ಮಾಹಿತಿ ನೀಡಿ, ‘ದ್ರವ ಐಇಡಿಯನ್ನು ಇಬ್ಬರು ಲಷ್ಕರ್ ಉಗ್ರರು ಸಿದ್ಧಪಡಿಸಿದ್ದರು. ಬಶೀರ್ ಅವುಗಳನ್ನು ತೋಟಗಳಲ್ಲಿ ಬಚ್ಚಿಟ್ಟಿದ್ದಾನೆ’ ಎಂದು ಮಾಹಿತಿ ನೀಡಿದ. ಆಗ ಸೇನೆಯ ಸ್ಫೋಟಕ ತಜ್ಞರು ತೋಟಗಳಿಗೆ ದೌಡಾಯಿಸಿ ಪ್ಲಾಸ್ಟಿಕ್‌ ಪಾತ್ರೆಯಲ್ಲಿ ಸಂಗ್ರಹಿಸಿದ್ದ 6 ಕೆಜಿ ತೂಕದ ದ್ರವ ಐಇಡಿ ಪತ್ತೆ ಮಾಡಿ ನಾಶಪಡಿಸಿದರು.

2007ರಲ್ಲಿ ಮೊದಲ ಬಳಕೆ: 2007ರಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ಗುಂಪುಗಳು ದ್ರವ ಸ್ಫೋಟಕಗಳನ್ನು ಬಳಸಿದವು. ಆದರೆ ನಂತರದ ದಶಕದಲ್ಲಿ ಇವುಗಳು ಕಂಡುಬಂದಿಲ್ಲ. ಪಾಕಿಸ್ತಾನಿ ಉಗ್ರ ಗುಂಪುಗಳು ಈಗ ದ್ರವರೂಪದ ಸ್ಫೋಟಕಗಳನ್ನು ಬಳಸುತ್ತವೆ ಎಂದು ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್‌ ಮೂಲಕ 2022ರಲ್ಲಿ ಇವನ್ನು ಪಾಕಿಸ್ತಾನಿ ಉಗ್ರರು 3 ಬಾಟಲಲ್ಲಿ ಕಾಶ್ಮೀರಕ್ಕೆ ಕಳಿಸಿದ್ದರು. ಆಗ ಪೊಲೀಸರು ಇವನ್ನು ವಶಪಡಿಸಿಕೊಂಡಿದ್ದರು. ಫೋರೆನ್ಸಿಕ್ ಪರೀಕ್ಷೆ ವೇಳೆ ಇವು ಡೈನಮೈಟ್‌ಗಳಲ್ಲಿ ಬಳಸಲಾಗುವ ಟ್ರಿನಿಟ್ರೋಟೊಲ್ಯೂನ್ (ಟಿಎನ್‌ಟಿ) ಅಥವಾ ನೈಟ್ರೋಗ್ಲಿಸರಿನ್ ಆಗಿರಬಹುದು ಎಂದು ತಿಳಿದುಬಂದಿತ್ತು.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಯಡಿಯೂರಪ್ಪ ಮೊರೆ

ಅಪಾಯಕಾರಿ ಏಕೆ?: ದ್ರವ ಐಇಡಿಗಳ ಗುರುತು ಕಷ್ಟ. ಅದಕ್ಕೇ ಅವನ್ನು ‘ಡಿ2ಡಿ’ (ಪತ್ತೆ ಮಾಡಲು ಕಷ್ಟಕರ- ಡಿಫಿಕಲ್ಟ್‌ ಟು ಡಿಟೆಕ್ಟ್‌) ಎಂದು ಕರೆಯುತ್ತಾರೆ. ಏಕೆಂದರೆ ರಸ್ತೆಗಳಲ್ಲಿ ಸಾಂಪ್ರದಾಯಿಕ ಡಿಟೆಕ್ಟರ್‌ಗಳೊಂದಿಗೆ ಸ್ಫೋಟಕ ಪತ್ತೆ ಮಾಡುವ ಆರ್‌ಒಪಿ ಶೋಧಕಗಳಿಂದಲೂ ಅವುಗಳನ್ನು ಪತ್ತೆ ಮಾಡಲಾಗುವುದಿಲ್ಲ. ಶ್ವಾನಗಳಿಂದಲೂ ಹುಡುಕುವುದು ಕಷ್ಟ.

Latest Videos
Follow Us:
Download App:
  • android
  • ios