ಲಖನೌ[ಡಿ.09]: ಅಭಯಾರಣ್ಯಗಳಲ್ಲಿ ಹುಲಿ, ಆನೆ ಸಫಾರಿ ಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ಸರ್ಕಾರ, ಗೋ ಸಫಾರಿ ಎಂಬ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಿರುಗುವ ಬೀಡಾಡಿ ದನಗಳನ್ನು ಒಂದೆಡೆ ಸೇರಿಸಿ, ಆ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

ಉತ್ತರಪ್ರದೇಶದ ಪಶುಸಂಗೋಪನಾ ಖಾತೆ ಸಚಿವ ಲಕ್ಷ್ಮೇ ನಾರಾಯಣ್‌ ಚೌಧರಿ ಇಂಥದ್ದೊಂದು ವಿನೂತನ ಯೋಜನೆಯ ರೂಪರೇಷೆ ತಯಾರಿಸಿದ್ದಾರೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಇದೆಯೋ ಅಲ್ಲಿ ಕನಿಷ್ಠ 15000-20000 ಬೀಡಾಡಿ ದನಗಳನ್ನು ಇಡಲಾಗುವುದು. ಇದರಿಂದ ಬೀಡಾಡಿ ದನಗಳಿಂದ ರಸ್ತೆಗಳಲ್ಲಿ ಆಗುವ ತೊಂದರೆ ತಪ್ಪುತ್ತದೆ. ದನಗಳ ನಿರ್ವಹಣೆಯೂ ಸುಲಭವಾಗುತ್ತದೆ. ಜೊತೆಗೆ ಈ ಪ್ರದೇಶದಲ್ಲಿ ಗೋವಿನ ತ್ಯಾಜ್ಯದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಘಟಕ ತಯಾರಿಸಲಾಗುವುದು. ಬಯೋಗ್ಯಾಸ್‌ ಘಟಕ ಆರಂಭಿಸಲಾಗುವುದು.

ಇಷ್ಟೆಲ್ಲಾ ಸೌಲಭ್ಯಗಳು ಇರುವ ಪ್ರದೇಶ ಸಹಜವಾಗಿಯೇ ಜನರ ಆಸಕ್ತಿ, ಕುತೂಹಲಕ್ಕೆ ಕಾರಣವಾಗುತ್ತದೆ. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಇಂಥ ಪ್ರದೇಶಗಳಲ್ಲಿ ಗೋ ಸಫಾರಿ ಯೋಜನೆ ಜಾರಿಗೊಳಿಸಲಾಗುವುದು. ಮೊದಲು ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಿ ಅದಕ್ಕೆ ಸಿಗುವ ಪ್ರತಿಕ್ರಿಯೆ ಆಧರಿಸಿ, ಅದನ್ನು ಇತರೆಡೆಗೆ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಯೋಜನೆ ಜಾರಿ ಹೇಗೆ?

20000 ಬೀಡಾಡಿ ದನಗಳನ್ನು ದೊಡ್ಡ ಅರಣ್ಯ ಒಂದು ಪ್ರದೇಶದಲ್ಲಿ ಸೇರಿಸಲಾಗುವುದು

ಗೋವುಗಳ ತ್ಯಾಜ್ಯದಿಂದ ವಿವಿಧ ಉತ್ಪನ್ನ ತಯಾರಿಸುವ ಘಟಕಗಳನ್ನು ಆರಂಭಿಸಲಾಗುವುದು

ಗೋ ತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದಿಸುವ ಘಟಕ ತೆರೆಯಲಾಗುವುದು

ಲಾಭ ಏನು?

ಬೀಡಾಡಿ ದನಗಳಿಂದ ಆಗುವ ತೊಂದರೆ ನಿರ್ವಹಣೆ

ಒಂದೆಡೆ ಬೀಡಾಡಿ ದನಗಳ ನಿರ್ವಹಣೆ ಸುಲಭ

ತ್ಯಾಜ್ಯದಿಂದ ಉತ್ಪಾದಿಸುವ ವಸ್ತುಗಳಿಂದ ಆದಾಯ

ಸಫಾರಿ ಮೂಲಕವೂ ಆದಾಯ ಸಂಗ್ರಹ, ನಿರ್ವಹಣೆಗೆ ಬಳಕೆ