ನ್ಯೂಕ್ಯಾಸಲ್ ವಿಶ್ವವಿದ್ಯಾಲಯವು ಅನಂತ್ ಅಂಬಾನಿ ಅವರಿಗೆ ಸುಸ್ಥಿರತೆಯಲ್ಲಿ ಅಭ್ಯಾಸ ಪ್ರಾಧ್ಯಾಪಕ ಗೌರವ ಹುದ್ದೆ ನೀಡಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ವಂತಾರಾ ಮೃಗಾಲಯದ ಪ್ರಾಣಿ ಆಮದು ವಿವಾದಗಳು ಮತ್ತು ತೈಲ ಉದ್ಯಮದ ಹಿನ್ನೆಲೆಯಿಂದಾಗಿ ಪರಿಸರವಾದಿಗಳು ಈ ನೇಮಕಾತಿಯನ್ನು ಖಂಡಿಸಿದ್ದಾರೆ. ಆದರೂ, ಹಸಿರು ಇಂಧನ ಯೋಜನೆಗಳ ನಾಯಕತ್ವವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ವಿವಿ ಸಮರ್ಥಿಸಿಕೊಂಡಿದೆ.

ಲಂಡನ್ : ಭಾರತದ ಪ್ರಮುಖ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರಿಗೆ ಯುನೈಟೆಡ್ ಕಿಂಗ್‌ಡಂನ ಪ್ರತಿಷ್ಠಿತ ನ್ಯೂಕ್ಯಾಸಲ್ ವಿಶ್ವವಿದ್ಯಾಲಯವು (Newcastle University) ಸುಸ್ಥಿರತೆಯಲ್ಲಿ ಅಭ್ಯಾಸ ಪ್ರಾಧ್ಯಾಪಕ (Professor of Practice in Sustainability) ಗೌರವ ಹುದ್ದೆ ನೀಡಿರುವುದಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪ್ರಸಿದ್ಧ ಶಿಕ್ಷಣ ತಜ್ಞರು, ವನ್ಯಜೀವಿ ಸಂರಕ್ಷಣಾವಾದಿಗಳು ಹಾಗೂ ಪರಿಸರ ಪ್ರೇಮಿಗಳು ಈ ನೇಮಕಾತಿಯನ್ನು ಕಟುವಾಗಿ ಟೀಕಿಸಿದ್ದು, ವಿಶ್ವವಿದ್ಯಾಲಯದ ಕ್ರಮವನ್ನು ಅಪಹಾಸ್ಯ ಎಂದು ಕರೆದಿದ್ದಾರೆ.

ವನ್ಯಜೀವಿ ಸಂರಕ್ಷಣೆ, ಜೀವವೈವಿಧ್ಯತೆ ರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅನಂತ್ ಅಂಬಾನಿ ಅವರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ವಿಶ್ವವಿದ್ಯಾಲಯ ಸಮರ್ಥಿಸಿಕೊಂಡಿದೆ. ಆದರೆ, ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾಗಾರದ ಮಾಲೀಕತ್ವ ಹೊಂದಿರುವ ಕುಟುಂಬದ ಕುಡಿಗೆ ಈ ಹುದ್ದೆ ನೀಡಿರುವುದು ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ವಂತಾರಾ ಮೃಗಾಲಯ ಹಾಗೂ ಆಮದು ವಿವಾದಗಳು

ಗುಜರಾತ್‌ನ ಜಾಮ್‌ನಗರದಲ್ಲಿರುವ 3,500 ಎಕರೆ ವಿಸ್ತೀರ್ಣದ ವಂತಾರಾ ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರದ ಸ್ಥಾಪಕರಾಗಿರುವ 31 ವರ್ಷದ ಅನಂತ್ ಅಂಬಾನಿ, 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳನ್ನು ತಮ್ಮ ಉಸ್ತುವಾರಿಯಲ್ಲಿ ಇಟ್ಟುಕೊಂಡಿದ್ದಾರೆ. ಇದರಲ್ಲಿ 200 ಸಿಂಹಗಳು, 250 ಚಿರತೆಗಳು ಹಾಗೂ 900 ಮೊಸಳೆಗಳು ಸೇರಿವೆ. ಆದರೆ, ಈ ಮೃಗಾಲಯಕ್ಕೆ ಪ್ರಾಣಿಗಳನ್ನು ತಂದಿರುವ ರೀತಿಯ ಕುರಿತು ಜಾಗತಿಕ ಮಟ್ಟದಲ್ಲಿ ಗಂಭೀರ ಅನುಮಾನಗಳು ವ್ಯಕ್ತವಾಗಿವೆ.

ಅಳಿವಿನಂಚಿನಲ್ಲಿರುವ ಪ್ರಭೇದಗಳ ವ್ಯಾಪಾರ ನಿಯಂತ್ರಿಸುವ ವಿಶ್ವಸಂಸ್ಥೆಯ ‘ಸೈಟ್ಸ್’ ಸಂಸ್ಥೆಯ ಸತ್ಯಶೋಧನಾ ಸಮಿತಿಯು, ವಂತಾರಾಗೆ ಪ್ರಾಣಿಗಳನ್ನು ತರಲು ಬಳಸಿರುವ ಕೆಲವು ಪರವಾನಗಿಗಳು ನಕಲಿ ಎಂದು ಶಂಕಿಸಿದೆ.

ಜರ್ಮನಿಯ ‘ಸುಡ್ಯೂಷ್ ಜೈಟುಂಗ್’ ಪತ್ರಿಕೆಯ ತನಿಖೆಯ ಪ್ರಕಾರ, ಕಾಂಗೋ ಗಣರಾಜ್ಯ ಹಾಗೂ ಯುಎಇ ದೇಶಗಳ ಕಳ್ಳ ಜಾಲಗಳ ಮೂಲಕ ಒರಾಂಗುಟನ್‌ಗಳು, ಗ್ಯಾಲಪಗೋಸ್ ಇಗುವಾನಾಗಳಂತಹ ಆಫ್ರಿಕನ್ ಹಾಗೂ ಅಮೆರಿಕನ್ ಪ್ರಭೇದಗಳನ್ನು ಅಕ್ರಮವಾಗಿ ತರಲಾಗಿದೆ ಎಂದು ಆರೋಪಿಸಲಾಗಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ನಡೆಸಿದ ತನಿಖೆಯಲ್ಲಿ ಮೃಗಾಲಯಕ್ಕೆ ಕ್ಲೀನ್ ಚಿಟ್ ನೀಡಿದ್ದರೂ, ವಿದೇಶಿ ಸಂರಕ್ಷಣಾ ಸಂಸ್ಥೆಗಳ ಕಳವಳ ಶಮನಗೊಂಡಿಲ್ಲ.

ಸೆರೆಯಲ್ಲಿಡುವುದು ಸಂರಕ್ಷಣೆಯಾಗುವುದಿಲ್ಲ, ಪರಿಸರವಾದಿಗಳ ಕಿಡಿ

ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಈ ನಿರ್ಧಾರವನ್ನು ಪ್ರಶ್ನಿಸಿ, ನ್ಯೂಕ್ಯಾಸಲ್ ವಿಶ್ವವಿದ್ಯಾಲಯವು ತಕ್ಕಮಟ್ಟದ ಪರಿಶೀಲನೆ ನಡೆಸದೆ ಇಂತಹ ನಿರ್ಧಾರ ತಗೆದುಕೊಂಡಿರುವುದು ನಿಗೂಢವಾಗಿದೆ ಎಂದು ದಿ ಗಾರ್ಡಿಯನ್‌ಗೆ ತಿಳಿಸಿದ್ದಾರೆ.

ಅಂತೆಯೇ, ವನ್ಯಜೀವಿ ಸಂರಕ್ಷಣಾವಾದಿ ಪ್ರೇರಣಾ ಸಿಂಗ್ ಬಿಂದ್ರಾ ಮಾತನಾಡಿ, ಕಾಡು ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ರಕ್ಷಿಸುವುದು ನಿಜವಾದ ಸಂರಕ್ಷಣೆ. ಬೃಹತ್ ಮೃಗಾಲಯಗಳಲ್ಲಿ ಸಾವಿರಾರು ಪ್ರಾಣಿಗಳನ್ನು ಬಂಧಿಸಿಡುವುದನ್ನು ಸಂರಕ್ಷಣೆ ಎನ್ನಲಾಗುವುದಿಲ್ಲ. ವಿಶ್ವವಿದ್ಯಾಲಯಗಳು ಇಂತಹ ಮಾದರಿಯನ್ನು ಎತ್ತಿಹಿಡಿಯುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧಕಿ ಲೈಲಾ ಮೆಹ್ರಾ, ಕಾರ್ಪೊರೇಟ್ ಸಂಸ್ಥೆಗಳಿಗೆ ಶೈಕ್ಷಣಿಕ ಮಾನ್ಯತೆ ನೀಡುವ ವಿಶ್ವವಿದ್ಯಾಲಯದ ನಿಲುವನ್ನು ಖಂಡಿಸಿದ್ದಾರೆ.

ವಿಶ್ವವಿದ್ಯಾಲಯ ನೀಡಿದ ಸ್ಪಷ್ಟನೆ

ಈ ಎಲ್ಲಾ ವಿಮರ್ಶೆಗಳ ನಡುವೆಯೂ ನ್ಯೂಕ್ಯಾಸಲ್ ವಿಶ್ವವಿದ್ಯಾಲಯ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ರಿಲಯನ್ಸ್ ಸಂಸ್ಥೆಯ ಹಸಿರು ಹೈಡ್ರೋಜನ್, ಸೌರ ವಿದ್ಯುತ್ ಹಾಗೂ ಇಂಗಾಲ ಸೆರೆಹಿಡಿಯುವಿಕೆ ಯೋಜನೆಗಳಲ್ಲಿ ಅನಂತ್ ಅಂಬಾನಿ ಅವರ ಕಾರ್ಯನಿರ್ವಾಹಕ ನಾಯಕತ್ವವನ್ನು ವಿಶ್ವವಿದ್ಯಾಲಯ ಶ್ಲಾಘಿಸಿದೆ. ಈ ಗೌರವವು ಸಾಂಪ್ರದಾಯಿಕ ಶೈಕ್ಷಣಿಕ ಪದವಿಯಾಗಿರದೆ, ಪ್ರಾಯೋಗಿಕ ವೃತ್ತಿಪರ ಅನುಭವಕ್ಕೆ ನೀಡಲಾದ ಮಾನ್ಯತೆಯಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.