ಬೈತೂಲ್(ಜು..11): ಮಧ್ಯಪ್ರದೇಶದ ಬೈತೂಲ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲೊಬ್ಬ ವರ ಇಬ್ಬರು ವಧುಗಳೊಂದಿಗೆ ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ಸದ್ಯ ಈ ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು ಬೈತೂಲ್‌ನ ಘೋಡಾಡೋಂಗರಿ ಸಲೈಯಾ ಗ್ರಾಮದಲ್ಲಿ ಈ ವಿಚಿತ್ರ ಮುವೆ ನಡೆದಿದೆ. ಕಳೆದ ಜೂನ್ 29ರಂದು ಓರ್ವ ಯುಬಕ ಒಂದೇ ಮಂಟಪದಲ್ಲಿ ತನ್ನ ಪ್ರೇಯಸಿ ಹಾಗೂ ತಂದೆ ತಾಯಿಗೆ ಇಷ್ಟವಾದ ಹುಡುಗಿ ಹೀಗೆ ಇಬ್ಬರನ್ನೂ ಮದುವೆಯಾಗಿದ್ದಾನೆ. ಈ ಮದುವೆಯಲ್ಲಿ ವಧು ಹಾಗೂ ವರನ ಕುಟುಂಬ ಸದಸ್ಯರು ಸೇರಿ ಗ್ರಾಮಸ್ಥರೂ ಪಾಲ್ಗೊಂಡಿದ್ದರು. 

ಈ ಗ್ರಾಮದಲ್ಲಿ ಒಂದೇ ಮಂಟಪದಲ್ಲಿ ವರನೊಬ್ಬ ಇಬ್ಬರನ್ನು ವರಿಸಿದ ಘಟನೆ ಮೊದಲ ಬಾರಿ ನಡೆದಿದ್ದು, ಇದನ್ನು ವೀಕ್ಷಿಸಲು ಗ್ರಾಮಸ್ಥರು ನೆರೆದಿದ್ದರೆನ್ನಲಗಿದೆ. ಸಲೈಯಾ ಗ್ರಾಮದ ಆದಿವಾಸಿ ಯುವಕ ಸಂದೀಪ್ ಉಯಿಕೆ ಎಂಬಾತಾ ಹೊಶಂಗಾಬಾದ್‌ನ ಸುನಂದಾ ಹೆಸರಿನ ಯುವತಿ ಹಾಗೂ ಘೋಡಾಡೋಂಗರಿಯ ಕೋಯ್ಲಾರಿ ಗ್ರಾಮದ ಶಶಿಕಲಾ ಹೀಗೆ ಇಬ್ಬರನ್ನೂ ಮದುವೆಯಾಗಿದ್ದಾನೆ. 

ಸಂದೀಪ್ ಭೋಪಾಲ್‌ನಲ್ಲಿ ಐಟಿಐ  ವ್ಯಾಸಂಗ ಮಾಡುತ್ತಿದ್ದ ವೇಳೆ ಸುನಂದಾ ಪರಿಚಯವಾಗಿದೆ. ಆದರೆ ಇತ್ತ ಕುಟುಂಬ ಸದಸ್ಯರು ಶಶಿಕಲಾ ಜೊತೆ ಮದುವೆ ಮಾತುಕತೆ ನಡೆಸಿ ಮಾತು ಕೊಟ್ಟಿದ್ದರು. ಹೀಗಿರುವಾಗ ವಿಚಾರ ಪರಸ್ಪರ ತಿಳಿಯುತ್ತಿದ್ದಂತೆಯೇ ವಿವಾದ ಹುಟ್ಟಿಕೊಂಡಿದೆ.

ಈ ಜಗಳ ಕೊನೆಗೊಳಿಸಲು ಮೂರು ಕುಟುಂಬದ ಸದಸ್ಯರು ಹಾಗೂ ಸಮಾಜದ ಕೆಲ ಹಿರಿಯರು ಸೇರಿ ಸಭೆ ನಡೆಸಿದ್ದಾರೆ. ಈ ವೇಳೆ ಇಬ್ಬರೂ ಯುವತಿಯರು ಸಂದೀಪ್ ಜೊತೆಗಿರಲು ತಯಾರಿದ್ದಾರೆಂಬುವುದು ತಿಳಿದು ಬಂದಿದೆ. ಹೀಗಾಗಿ ಇಬ್ಬರನ್ನೂ ಮದುವೆ ಮಾಡಿಕೊಡಲಾಗಿದೆ. 

ಇಬ್ಬರೂ ಹೆಂಡತಿಯರು ಮದುವೆ ಬಳಿಕ ಖುಷಿಯಾಗಿದ್ದು, ಪರಸ್ಪರ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೀಗ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸ್ಥಳೀಯ ಆಡಳಿತ ಅಧಿಕಾರಿಗಳು ಈ ಸಂಬಂಧ ಸೂರು ದಾಖಲಿಸಿದ್ದಾರೆ.