Asianet Suvarna News Asianet Suvarna News

Turning Point: ಉಕ್ಕಿನ ಮನುಷ್ಯನಿಗೆ ಪ್ರಧಾನಿ ಪಟ್ಟ ತಪ್ಪಿಸಿದ್ರಾ ಗಾಂಧೀಜಿ..?

ಇದು ದೇಶದ ಈಗಿನ ಪೀಳಿಗೆಗೂ ಗೊತ್ತಿರುವ ಸಂಗತಿ. ದೇಶದ ಮೊಟ್ಟಮೊದಲ ಪ್ರಧಾನಿ ಆಗಬೇಕಿದ್ದ ಸರ್ದಾರ್‌ ವಲ್ಲಭಭಾತಯ್‌ ಪಟೇಲ್‌ ಅವರಿಗೆ ಪ್ರಧಾನಿ ಪಟ್ಟ ತಪ್ಪಿಸಿದ್ದು ಯಾರು? ದೇಶದ ಸಿಂಹಾಸನ ಮೊದಲಿ ಯಾರಿಗೆ ಸಿಗಬೇಕಾಗಿತ್ತು ಅನ್ನೋದರ ಇಂಟ್ರಸ್ಟಿಂಗ್‌ ಟರ್ನಿಂಗ್‌ ಪಾಯಿಂಟ್‌.
 

Turning Point Did mahatma gandhi miss the man of steel sardhar Vallabhbhai Patel as Prime Minister san
Author
First Published Apr 13, 2024, 6:02 PM IST

ದೇಶದ ಮೊದಲ ಪ್ರಧಾನಿ ಆಗಬೇಕಿದ್ದವರು ಸರ್ದಾರ್ ಪಟೇಲ್‌ ಅವರಾ? ನಿಜವಾಗಿಯೂ ವಲ್ಲಭಭಾಯ್‌ಗೆ ಸಲ್ಲಬೇಕಿತ್ತಾ ನೆಹರೂ ಸಿಂಹಾಸನ..? ಆದರೆ,  ಮಹಾತ್ಮಾ ಗಾಂಧೀಜಿ ಹೇಳಿದ್ದ  ಒಂದೇ ಒಂದು ಮಾತಿಗೆ ಮರು ಮಾತಿಲ್ಲದೆ ತಲೆ ಅಲ್ಲಾಡಿಸಿದ್ದರು ಸರ್ದಾರ್ ಪಟೇಲ್. ಗುಜರಾತ್‌ನ ಗಂಡುಗಲಿಗೆ ಪ್ರಧಾನಿ ಪಟ್ಟ ತಪ್ಪಿದ್ದು ಹೇಗೆ? ಪಟ್ಟ ಕೈ ಜಾರಿದರೂ ವಲ್ಲಭಭಾಯ್ ದೇಶಸೇವೆಗೆ ನಿಂತಿದ್ದರು. ಸವಾಲ್ ಹಾಕಿದ ನಿಜಾಮನನ್ನು ಸರ್ದಾರ್‌ ಹೆಡೆಮುರಿ ಕಟ್ಟಿದ್ದರು. ಪಟೇಲರ "ಆಪರೇಷನ್ ಪೋಲೋ" ಅಸ್ತ್ರಕ್ಕೆ ಪತರಗುಟ್ಟಿದ ನಿಜಾಮ ಅಕ್ಷರಶಃ ಪತರಗುಟ್ಟಿ ಹೋಗಿದ್ದ. ನಿಜ ಹೇಳಬೇಕೆಂದರೆ, ಸರ್ದಾರ್‌ ಇಲ್ಲದಿದ್ದರೆ, ಇಂದು ಭಾರತದ ಭೂಪಟ ಹೀಗಿರುತ್ತಿರಲಿಲ್ಲ. ಮಹಾತ್ಮಾ ಗಾಂಧೀಜಿಯವರು ಮನಸ್ಸು ಮಾಡಿದ್ದಿದ್ದರೆ ದೇಶದ ಮೊದಲ ಪ್ರಧಾನಿಯಾಗುತ್ತಿದ್ದರು ಸರ್ದಾರ್ ವಲ್ಲಭಭಾಯ್ ಪಟೇಲ್. ಗಾಂಧೀಜಿ ಅವತ್ತು ಸುಮ್ಮನಿದ್ದರೂ ಸಾಕಿತ್ತು, ಪ್ರಧಾನಿ ಪಟ್ಟಾಭಿಷೇಕವಾಗ್ತಿದ್ದದ್ದು ದೇಶದ ಉಕ್ಕಿನ ಮನುಷ್ಯನಿಗೆ. ಹಾಗಾದ್ರೆ ಸರ್ದಾರ್ ಪಟೇಲರಿಗೆ ಪ್ರಧಾನಿ ಪಟ್ಟ ತಪ್ಪಿ ನೆಹರೂ ಪ್ರಧಾನಿಯಾಗಿದ್ದು ಹೇಗೆ..? ಮಹಾತ್ಮಾ ಗಾಂಧೀಜಿಯವರ ಆ ಮಾತು ಇಡೀ ದೇಶದ ರಾಜಕಾರಣಕ್ಕೆ ದೊಡ್ಡ ಟರ್ನಿಂಗ್‌ ಪಾಯಿಂಟ್‌ ಆಯಿತು.

ದೇಶಕ್ಕೆ ಸ್ವಾತಂತ್ರ್ಯ ಸಿಗೋದಕ್ಕೂ ಹಿಂದಿನ ಮಾತು. ಹೈದರಾಬಾದ್ ಪ್ರಾಂತ್ಯದಲ್ಲಿ ಅದೊಂದು ಶಸ್ತ್ರಧಾರಿ ಸೈನಿಕರ ಪಡೆ. ಅವರನ್ನು ಸೈನಿಕರು ಅನ್ನೋದಕ್ಕಿಂತಲೂ ರಾಕ್ಷಸರು ಅಂದರೇನೆ ಸರಿ.  ಕುದುರೆಗಳನ್ನೇರಿ ಅವರು ಬರುತ್ತಿದ್ರೆ, ಆ ಹೆಜ್ಜೆ ಸಪ್ಪಳಕ್ಕೆ ಜನರ ಎದೆ ನಡುಗ್ತಾ ಇತ್ತು. ಜನ ಭಯಭೀತರಾಗಿ ರಹಸ್ಯ ಸ್ಥಳಗಳಲ್ಲಿ ಅಡಗಿಕೊಳ್ತಾ ಇದ್ರು. ಅಪ್ಪಿ ತಪ್ಪಿ ಆ ಕ್ರೂರಿಗಳ ಕೈಗೆ ಸಿಕ್ಕಿದ್ರೋ, ಅಲ್ಲಿ ನಡೀತಾ ಇದ್ದದ್ದು ನರಮೇಧ.

ಆ ರಾಕ್ಷಸರಿಗೊಬ್ಬ ರಾಜ.. ಅವ್ನೇ ನಿಜಾಮ, ಹೈದರಾಬಾದ್ ನಿಜಾಮ. ಅವ್ನ ಒಂದು ಕಣ್ಸನ್ನೆಗೆ ಇಡೀ ಸೈನ್ಯ ರಕ್ತದೋಕುಳಿಗೆ ರೆಡಿಯಾಗಿ ನಿಲ್ತಾ ಇತ್ತು. ಆತನ ಒಂದು ಮಾತಿಗೆ ಇಡೀ ಪ್ರಾಂತ್ಯವೇ ಪ್ರತಿಕ್ರಿಯಿಸ್ತಾ ಇತ್ತು. ಅಲ್ಲಿ ಅವನ ಮಾತೇ ಶಾಸನ, ಆತ ಹೇಳಿದ್ದೇ ವೇದವಾಕ್ಯ. ತನ್ನ ಮಾತಿಗೆ ಬಗ್ಗದವರನ್ನು ಬಗ್ಗು ಬಡಿಯಲು ಕ್ರೂರ ರಜಾಕಾರರನ್ನು ಛೂಬಿಡ್ತಾ ಇದ್ದ ಹೈದರಾಬಾದ್’ನ ನಿಜಾಮ. ಹೈದರಾಬಾದ್ ನಿಜಾಮನ ರಜಾಕಾರ ಸೈನ್ಯದ ಅಟ್ಟಹಾಸಕ್ಕೆ ನಲುಗಿದ ಕುಟುಂಬಗಳಿಗೆ ಲೆಕ್ಕವೇ ಇಲ್ಲ. ಬಲಿಯಾದ ಜೀವಗಳನ್ನಂತೂ ಲೆಕ್ಕ ಇಟ್ಟವರೇ ಇಲ್ಲ. ಆ ರಕ್ಕಸರ ದಾಳಿಗೆ ಬಲಿಯಾದವರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬವೂ ಒಂದು. ಕಳೆದ ವರ್ಷ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆಯೊಂದರಲ್ಲಿ 78 ವರ್ಷಗಳ ಹಿಂದಿನ ಆ ಕರಾಳ ಘಟನೆಯನ್ನು ನೆನಪಿಸಿಕೊಂಡು ಖರ್ಗೆ ಭಾವುಕರಾಗಿ ಬಿಟ್ಟಿದ್ದರು.

'ನನ್ನ ದುರ್ದೈವ. ನಾನು ನನ್ನ ತಾಯಿಯನ್ನು ನೋಡಿಲ್ಲ, ನನ್ನ ಸಹೋದರಿಯನ್ನು ನೋಡಿಲ್ಲ. ಅಣ್ಣ-ತಮ್ಮಂದಿರನ್ನು ನೋಡಿಲ್ಲ. ಅಜ್ಜನನ್ನೂ ನೋಡಿಲ್ಲ. ಯಾಕಂದ್ರೆ, ಹೈದರಾಬಾದ್ ವಿಮೋಚನೆಯ ದಂಗೆ ನಡೆಯುತ್ತಿದ್ದಾಗ ನನ್ನ ಮನೆ ಬೆಂಕಿಗೆ ಆಹುತಿಯಾಗಿತ್ತು. ನಾನು ಮತ್ತು ನನ್ನ ತಂದೆ ಇಬ್ಬರೇ ಬದುಕುಳಿದಿದ್ದೆವು. ಇದು 1946ರಲ್ಲಿ ನಡೆದ ಘಟನೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಜೀವನದ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದರು.

ಹೈದರಾಬಾದ್ ನಿಜಾಮ ಮತ್ತವನ ರಜಾಕಾರ ಸೈನ್ಯದ ದುಷ್ಕೃತ್ಯ, ದುಷ್ಟತನಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ. ಅವ್ರು ಮಾಡ್ತಿದ್ದ ನರಮೇಧ, ಅತ್ಯಾಚಾರ, ಹಿಂಸಾಚಾರ, ಕಗ್ಗೊಲೆಗಳ ಬಗ್ಗೆ ಕೇಳಿದ್ರೆ ಎಂಥವ್ರ ರಕ್ತವೂ ಕುದಿಯೋದಕ್ಕೆ ಶುರುವಾಗುತ್ತೆ. ಅಂಥಾ ರಕ್ತಸಿಕ್ತ ಅಧ್ಯಾಯಕ್ಕೆ ಫುಲ್ ಸ್ಟಾಪ್ ಇಟ್ಟು, ರಜಾಕಾರರ ಅಟ್ಟಹಾಸವನ್ನು ಮೆಟ್ಟಿ ನಿಂತು, ನಿಜಾಮನ ಗರ್ವಭಂಗ ಮಾಡಿದವರು ಒಬ್ಬ ಗಟ್ಟಿ ಗುಂಡಿಗೆಯ ಮನುಷ್ಯ ಸರ್ದಾರ್ ಪಟೇಲ್.  ಯಾರ ಅಂಕೆಗೂ ಸಿಗದ ನಿಜಾಮನನ್ನು ಹೆಡೆಮುರಿ ಕಟ್ಟಿ ಹೈದರಾಬಾದನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದವರು ಸರ್ದಾರ್ ವಲ್ಲಭಭಾಯ್ ಪಟೇಲ್. 

ಅವರನ್ನು ದೇಶ ಉಕ್ಕಿನ ಮನುಷ್ಯ ಅಂತ ಕರೆಯತ್ತೆ. ಫಿಯರ್’ಲೆಸ್ ಲೀಡರ್ ಅಂತ ಇತಿಹಾಸ ನೆನಪಿಸಿಕೊಳ್ಳತ್ತೆ. ಅವರು ಉಸಿರು ನಿಂತ್ಮೇಲೂ ಹೆಸರು ಉಳಿಯುವಂತೆ ಬದುಕಿದವರು. ಅಪ್ಪಟ ರಾಷ್ಟ್ರೀಯವಾದಿ ನಾಯಕ, ಸ್ವಾತಂತ್ರ್ಯ ಸಂಗ್ರಾಮದ ವೀರಯೋಧ. ಅವರ ಹೆಸರು ಕೇಳಿದ್ರೆ, ದೇಶಪ್ರೇಮಿಗಳ ಮೈ ಇವತ್ತಿಗೂ ಒಂದು ಕ್ಷಣ ರೋಮಾಂಚನಗೊಳ್ಳತ್ತೆ. That is Patel, ಸರ್ದಾರ್ ಪಟೇಲ್.

ಆ ವ್ಯಕ್ತಿ ಇಲ್ಲದೇ ಹೋಗಿದ್ದರೆ ಭಾರತ, ಭಾರತವಾಗಿ ಇರ್ತಾ ಇರ್ಲಿಲ್ಲ. ಅವರೊಬ್ಬರು ಇಲ್ಲದೇ ಇರುತ್ತಿದ್ದರೆ, ಭಾರತದ ಭೂಪಟ ತುಂಡು ತುಂಡಾಗಿರುತ್ತಿತ್ತು. ಅವರು ಆಧುನಿಕ ಭಾರತವನ್ನು ಕಟ್ಟಿದ ಶಿಲ್ಪಿ.. ಹರಿದು ಹಂಚಿ ಹೋಗಿದ್ದ ದೇಶವನ್ನು ಒಂದಾಗಿಸಿದ ಏಕಮೇವಾದ್ವಿತೀಯ ನಾಯಕ. ಇಂಥಾ ಸರ್ದಾರ್ ಪಟೇಲರು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದಿದ್ರೆ ಹೇಗಿರ್ತಾ ಇತ್ತು..? ಪ್ರಧಾನಿಯಾಗೋ ಅವಕಾಶ ಇದ್ರೂ ಯಾಕೆ ಪಟೇಲರು ಪ್ರಧಾನಿಯಾಗ್ಲಿಲ್ಲ..? ಈ ಪ್ರಶ್ನೆಗೆ ಉತ್ತರ ಹುಡುಕ್ತಾ ಹೋದ್ರೆ, ತೆರೆದುಕೊಳ್ಳತ್ತೆ ಇತಿಹಾಸದ ಕಾಲಗರ್ಭದಲ್ಲಿ ಅಡಗಿರೋ ಅದೊಂದು ಅಧ್ಯಾಯದ ಇಂಟ್ರೆಸ್ಟಿಂಗ್ ಪುಟ. 

ಇವತ್ತಿಗೆ 78 ವರ್ಷಗಳ ಹಿಂದೆ. ಆ ದಿನ ಮೋಹನದಾಸ್ ಕರಮಚಂದ್ರ ಗಾಂಧಿ, ಅರ್ಥಾತ್ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಆ ದಿನ ಸುಮ್ಮನಿದ್ದರೂ ಸಾಕಿತ್ತು.. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲರು ಈ ದೇಶದ ಮೊದಲ ಪ್ರಧಾನಿಯಾಗ್ತಾ ಇದ್ರು. ಅವತ್ತು ಗಾಂಧೀಜಿಯವರೇನಾದ್ರೂ ಮೌನ ವಹಿಸಿದ್ದಿದ್ದರೆ, ಜವಾಹರ ಲಾಲ್ ನೆಹರೂ ಬದಲು ಪ್ರಧಾನಿ ಪಟ್ಟದಲ್ಲಿ ಕೂರ್ತಾ ಇದ್ದದ್ದು ಸರ್ದಾರ್ ವಲ್ಲಭಾಭಾಯ್ ಪಟೇಲರು. ಆದ್ರೆ ಹಾಗಾಗ್ಲಿಲ್ಲ.. ಕಾರಣ, ಮಹಾತ್ಮ ಗಾಂಧಿಯವರು ಹೇಳಿದ ಅದೊಂದು ಮಾತು. ಅಷ್ಟಕ್ಕೂ ಗಾಂಧೀಜಿ ಅವತ್ತು ಹೇಳಿದ್ದೇನು..? ಈ ಪ್ರಶ್ನೆಗೆ ಉತ್ತರ ಕೊಡೋದಕ್ಕೂ ಮುಂಚೆ, ಪ್ರಧಾನಿ ಪಟ್ಟಕ್ಕೆ ನೆಹರೂ ಅವ್ರೇ natural choice ಆಗಿದ್ದದ್ದು ಯಾಕೆ ಅನ್ನೋದನ್ನು ಮೊದ್ಲು ತಿಳ್ಕೊಳ್ಲೇಬೇಕು.

ಹಾಗಂತ ಪ್ರಧಾನಿ ಪಟ್ಟ ನೆಹರೂ ಅವ್ರಿಗೆ ಕಟ್ಟಿಟ್ಟ ಬುತ್ತಿ ಅಂತ ಏನೂ ಇರ್ಲಿಲ್ಲ. ಅದು 1946ನೇ ಇಸವಿ, ಜುಲೈ ತಿಂಗಳು. ದೇಶಕ್ಕೆ ಸ್ವಾತಂತ್ರ್ಯ ಸಿಗೋದಕ್ಕೆ ಕೇವಲ ಒಂದು ವರ್ಷದ ಹಿಂದಿನ ಕಥೆ. ಅವತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಏರ್ಪಾಡಾಗಿತ್ತು. ಅದೇ ಸಮಯಕ್ಕೆ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವುದೂ ಖಾತ್ರಿಯಾಗಿತ್ತು. ಹಾಗಾಗಿ ಆ ವರ್ಷದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಎಲ್ಲಿಲ್ಲದ ಮಹತ್ವ ಬಂದು ಬಿಟ್ಟಿತ್ತು. ಯಾರು ಆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧ್ಯಕ್ಷರಾಗ್ತಾರೋ, ಅವರೇ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗುತ್ತಿದ್ದರು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ರು ಪಂಡಿತ್ ಜವಾಹರ ಲಾಲ್ ನೆಹರೂ. ನೆಹರೂ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ದಾರ್ ವಲ್ಲಭಭಾಯ್ ಪಟೇಲ್ ಸಜ್ಜಾಗಿದ್ದರು. 16ರಲ್ಲಿ 13 ರಾಜ್ಯಗಳ ಬೆಂಬಲವೂ ಪಟೇಲರ ಬೆನ್ನಿಗಿತ್ತು. ಅವತ್ತು ಚುನಾವಣೆಯೇನಾದ್ರೂ ನಡೆದಿದ್ದರೆ,  ನೆಹರೂ ಸೋತು ಪಟೇಲರು ಗೆಲ್ಲುತ್ತಿದ್ದರು, ಕಾಂಗ್ರೆಸ್ ಅಧ್ಯಕ್ಷರಾಗ್ತಾ ಇದ್ರು. ನಂತ್ರ ಒಂದು ಮೆಟ್ಟಿಲನ್ನು ಹತ್ತಿ ಬಿಟ್ರೆ, ಪ್ರಧಾನಿ ಪಟ್ಟ. ಆದ್ರೆ ಹಾಗಾಗ್ಲಿಲ್ಲ.. ಕಾರಣ, ಮಹಾತ್ಮಾ ಗಾಂಧೀಜಿಯವರ ಅದೊಂದು ನಿರ್ಧಾರ. 

ಮಹಾತ್ಮಾ ಗಾಂಧೀಜಿಯವರ ತಲೆಯಲ್ಲಿ ಓಡ್ತಾ ಇದ್ದ ಯೋಚನೆಯೇ ಬೇರೆ. ಅವ್ರ ಮನಸ್ಸಲ್ಲಿ ತಮ್ಮ ನೆಚ್ಚಿನ ನೆಹರೂ ಕಾಂಗ್ರೆಸ್ ಅಧ್ಯಕ್ಷರಾಗ್ಲಿ ಅಂತ ಇತ್ತು. ಆದ್ರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೆಹರೂ ವಿರುದ್ಧ ಪಟೇಲರು ಸ್ಪರ್ಧಿಸಲು ಮುಂದಾಗ್ತಾ ಇದ್ದಂತೆ, ಮಹಾತ್ಮಾ ಗಾಂಧಿ ವಿಚಲಿತರಾಗಿ ಬಿಡ್ತಾರೆ. ಕೂಡ್ಲೇ ತಮ್ಮನ್ನು ಬಂದು ಭೇಟಿಯಾಗುವಂತೆ ಸರ್ದಾರ್'ಗೆ ಹೇಳಿ ಕಳಿಸ್ತಾರೆ. ಕೆಲವೇ ಗಂಟೆಗಳಲ್ಲಿ ಗಾಂಧೀಜಿಯವ್ರ ಮುಂದೆ ಬಂದು ನಿಲ್ತಾರೆ ವಲ್ಲಭಭಾಯ್ ಪಟೇಲ್. ಆಗ ಗಾಂಧೀಜಿ ಹೇಳಿದ್ದು ಒಂದೇ ಮಾತು. "ನೀನು ಚುನಾವಣೆಗೆ ನಿಲ್ಬೇಡ, ಜವಾಹರಲಾಲ್ ನೆಹರು ಉಮೇದುವಾರಿಕೆಗೆ ಬೆಂಬಲ ನೀಡು” ಅಂತ. 

ಹಾಗೆ ನೋಡಿದ್ರೆ, ಸರ್ದಾರ್ ಪಟೇಲರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿದ್ವು. ಗಟ್ಟಿ ನಾಯಕತ್ವವಿತ್ತು, ನೆಹರೂ ಅವ್ರಿಗಿಂತ ಹಿರಿತನವೂ ಇತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಹಿನ್ನೆಲೆಯೂ ಇತ್ತು. ಇವೆಲ್ಲದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ನೆಹರೂಗಿಂತ ಹೆಚ್ಚು ಬೆಂಬಲ ಪಟೇಲರಿಗಿತ್ತು. ಆದ್ರೂ ಪ್ರಧಾನಿಯಾಗಲು ಸಾಧ್ಯವಾಗ್ಲಿಲ್ಲ. ದೇಶದ ಮೊದಲ ಪ್ರಧಾನಮಂತ್ರಿ ಅನ್ನೋ ಗೌರವ ಇನ್ನೇನು ಸಿಕ್ಕೇ ಬಿಟ್ಟಿತು ಅನ್ನುವಷ್ಟರಲ್ಲಿ sorry ಸರ್ದಾರ್ ಅಂದು ಬಿಟ್ರು ಮಹಾತ್ಮಾ ಗಾಂಧೀಜಿ. 

ಅಷ್ಟಕ್ಕೂ ಅವತ್ತು ಮಹಾತ್ಮಾ ಗಾಂಧೀಜಿಯವ್ರು ಸರ್ದಾರ್ ಪಟೇಲರ ದಾರಿಗೆ ಅಡ್ಡ ನಿಂತದ್ದು ಯಾಕೆ..? ಪ್ರಧಾನಿ ಪಟ್ಟಕ್ಕೆ ಪಟೇಲರ ಬದಲು ನೆಹರೂ ಅವ್ರೇ ಸೂಕ್ತ ಅಂತ ಗಾಂಧೀಜಿ ನಿರ್ಧರಿಸಿದ್ದು ಯಾವ ಮಾನದಂಡದ ಮೇಲೆ..? ಪ್ರಧಾನಿ ಪಟ್ಟ  ಕೈ ತಪ್ಪಿದ್ರೂ ದೇಶಸೇವೆಗೆ ನಿಂತ ಸರ್ದಾರ್, ಎರಡನೇ ವರ್ಷಗಳಲ್ಲಿ ಮಾಡಿ ಮಹಾಕ್ರಾಂತಿ ಎಂಥದ್ದು..? ಸರ್ದಾರ್ ವಲ್ಲಭಭಾಯ್ ಪಟೇಲರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿರ್ಲಿಲ್ಲ. ಇನ್ನೇನು ಪ್ರಧಾನಿ ಪಟ್ಟಕ್ಕೆ ಎರಡೇ ಹೆಜ್ಜೆ ಅನ್ನುವಷ್ಟರಲ್ಲಿ sorry ಸರ್ದಾರ್ ಅಂದು ಬಿಟ್ರು ಮಹಾತ್ಮಾ ಗಾಂಧೀಜಿ. ಅಷ್ಟಕ್ಕೂ ಅವತ್ತು ಗಾಂಧೀಜಿ  sorry ಸರ್ದಾರ್ ಅಂತ ಹೇಳಿದ್ದೇಕೆ..? ವಲ್ಲಭಭಾಯ್ ಪಟೇಲರು ಪ್ರಧಾನಿಯಾಗೋ ಅವಕಾಶ ಇದ್ದಾಗ, ಗಾಂಧೀಜಿ ನೆಹರೂ ಪರ ನಿಂತಿದ್ದೇಕೆ..? ಗಾಂಧೀಜಿಯವರ sorry ಸರ್ದಾರ್ ಮಾತಿನ ಹಿಂದಿದ್ದ ಅಸಲಿಯತ್ತೇನು ಅಂತಾ ನೋಡೋದ್ರಾದೆ..

ಮರು ಮಾತಿಲ್ಲದೆ  ತಲೆ ಅಲ್ಲಾಡಿಸಿದ್ದರು  ಸರ್ದಾರ್ ಪಟೇಲ್..!: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್.. ಇಬ್ಬರ ಬಗ್ಗೆಯೂ ಮಹಾತ್ಮಾ ಗಾಂಧೀಜಿಯವ್ರಿಗೆ ವಿಶೇಷ ಒಲವಿತ್ತು. ಕಾರಣ, ಇಬ್ಬರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವ್ರ ಜೊತೆ ಹೆಜ್ಜೆ ಹಾಕಿದವ್ರು. ಆದ್ರೆ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಯಾರಾಗ್ಬೇಕು ಅನ್ನೋ ಪ್ರಶ್ನೆ ಎದುರಾದಾಗ ಗಾಂಧೀಜಿ, ನೆಹರೂ ಪರ ನಿಲ್ತಾರೆ.  ಹಾಗಂತ ಪಟೇಲರೇನೂ ಬೇಸರ ಮಾಡಿಕೊಳ್ಲಿಲ್ಲ. ಮಹಾತ್ಮಾ ಗಾಂಧೀಜಿಯವರ ಮಾತಿಗೆ ಬೆಲೆ ಕೊಟ್ಟು ನೆಹರೂ ಅವ್ರಿಗೆ ದಾರಿ ಮಾಡಿ ಕೊಟ್ರು.

ಪ್ರಧಾನಿ ಪಟ್ಟ ಸಿಗ್ಲಿಲ್ಲ ಅಂತ ಪಟೇಲರೇನೂ ಮುನಿಸಿಕೊಂಡು ಮನೆಯಲ್ಲಿ ಕೂರ್ಲಿಲ್ಲ. ಅವ್ರ ಮುಂದೆ ದೊಡ್ಡ ಕನಸಿತ್ತು. ಹರಿದು ಹಂಚಿ ಹೋಗಿದ್ದ ದೇಶವನ್ನು ಒಂದುಗೂಡಿಸುವ ಸ್ಪಷ್ಟ ಗುರಿಯಿತ್ತು, ಅವತ್ತು ಪಟೇಲರು ಒಬ್ಬ ಅಪ್ಪಟ ರಾಷ್ಟ್ರೀಯವಾದಿಯಾಗಿ ಯೋಚಿಸ್ತಾರೆ. ತಮಗಿಂತ 14 ವರ್ಷ ಕಿರಿಯರಾದ ನೆಹರೂ ಸಂಪುಟದಲ್ಲಿ ಉಪಪ್ರಧಾನಿಯಾಗ್ತಾರೆ. ತುಂಬಾ ವಜನ್ ಇರೋ ಗೃಹ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಳ್ತಾರೆ. 

ಸ್ವತಂತ್ರ ಭಾರತದ ಮೊದಲ ಹೋಮ್ ಮಿನಿಸ್ಟರ್.. ಒಬ್ಬ ಹೋಮ್ ಮಿನಿಸ್ಟರ್ ಹೇಗಿರ್ಬೇಕು ಅನ್ನೋದಕ್ಕೆ ಅನ್ವರ್ಥ ಸರ್ದಾರ್ ವಲ್ಲಭಭಾಯ್ ಪಟೇಲ್. ಭಾರತಕ್ಕೆ ಸ್ವಾತಂತ್ರ್ಯ ಸಿಗೋ ಹೊತ್ತಿಗೆ ದೇಶ 625 ಸಣ್ಣ ಮತ್ತು ದೊಡ್ಡ ರಾಜ್ಯಗಳಾಗಿ ಒಡೆದು ಹೋಗಿತ್ತು. ಆ ಪೈಕಿ 563 ಪ್ರಾಂತ್ಯಗಳು ಪಾಕಿಸ್ತಾನದಿಂದ ಪ್ರತ್ಯೇಕಗೊಂಡ ಭಾರತದಲ್ಲಿದ್ದವು. ಇವುಗಳನ್ನೆಲ್ಲ ಭಾರತದ ಒಕ್ಕೂಟದೊಳಗೆ ಸೇರ್ಪಡೆ ಮಾಡೋದು, ಒಬ್ಬೊಬ್ಬ ರಾಜನನ್ನೇ ಮನವೊಲಿಸುವುದು ಸಾಮಾನ್ಯ ಕೆಲಸನಾ? ಚಾನ್ಸೇ ಇಲ್ಲ ಬಿಡಿ. ಅಂಥಾ ಅಸಾಮಾನ್ಯ ಕೆಲಸಕ್ಕೆ ಕೈ ಹಾಕ್ತಾರೆ ಸರ್ದಾರ್ ಪಟೇಲ್.

ಆದ್ರೆ ಒಬ್ಬ ಮಾತ್ರ ತಂಟೆ-ತಕರಾರು ಮಾಡ್ತಾ ಇದ್ದ. ಅವ್ನೇ ಹೈದರಾಬಾದ್ ನಿಜಾಮ. ಆತ ಭಾರತದ ಒಕ್ಕೂಟದ ಒಳಗೇ ತನ್ನದೇ ಪ್ರತ್ಯೇಕ ರಾಷ್ಟ್ರವಾಗಿರುವ ಯೋಚನೆಯಲ್ಲಿದ್ದ. ಭಾರತದ ಒಕ್ಕೂಟ ಸೇರಿ ಅನ್ನೋ ಮನವಿಗೂ ಬಗ್ಗಲಿಲ್ಲ, ಒತ್ತಡಕ್ಕೂ ಜಗ್ಗಲಿಲ್ಲ. “ಅದೇನ್ ಮಾಡ್ತೀರೋ ಮಾಡಿ” ಅಂದು ಬಿಟ್ಟ ಹೈದರಾಬಾದ್ ನಿಜಾಮ. ಇವ್ನು ಬಾಯಿ ಮಾತಿಗೆಲ್ಲಾ ದಾರಿಗೆ ಬರಲ್ಲ ಅಂದುಕೊಂಡ ಸರ್ದಾರ್ ಪಟೇಲರು, ನಿಜಾಮನನ್ನು ಬಗ್ಗು ಬಡಿಯಲು ಮುಂದಾಗ್ತಾರೆ. ಆಗ ಶುರುವಾಗಿದ್ದೇ “ಆಪರೇಷನ್ ಪೋಲೋ”!

ಮೂರು ವರ್ಷ ಉಪಪ್ರಧಾನಿಯಾಗಿದ್ದ ಒಬ್ಬ ವ್ಯಕ್ತಿ 563 ರಾಜ್ಯ, ರಾಜರುಗಳನ್ನು ಹೇಗೆಲ್ಲಾ ಮನವೊಲಿಸಿರ್ಬೇಕು..? ಬೆದರಿಸಿ ಬಗ್ಗಿಸಿರಬೇಕು..? ಇಲ್ಲಾ.., ಬಗ್ಗುಬಡಿದು ದಾರಿಗೆ ತಂದಿರಬೇಕು ಯೋಚಿಸಿ? ಇಂಥಾ ಪಟೇಲರು ಸಾಯೋದಕ್ಕೆ ಮುಂಚೆ ಪ್ರಧಾನಿ ನೆಹರೂ ಅವ್ರಿಗೆ ಪತ್ರವೊಂದನ್ನು ಬರೀತಾರೆ. ಆ ಪತ್ರದಲ್ಲಿ ಏನಿತ್ತು ಗೊತ್ತಾ..?  ಸರ್ದಾರ್ ವಲ್ಲಭಾಯ್ ಪಟೇಲರು ಸ್ವತಂತ್ರ ಭಾರತದ ಮೊದಲ ಉಪಪ್ರಧಾನಿ, ಮೊದಲ ಗೃಹಮಂತ್ರಿ.  ಭಾರತದ ಒಕ್ಕೂಟಕ್ಕೆ ಸೇರದೆ ತೊಡೆ ತಟ್ಟಿದ್ದ ಹೈದರಾಬಾದ್ ನಿಜಾಮನ ತೊಡೆ ಮುರಿದದ್ದೂ ಪಟೇಲರೇ.  ಕಾಶ್ಮೀರ ಪಾಕಿಸ್ತಾನದ ಪಾಲಾಗದಂತೆ ತಡೆದವರೂ ಪಟೇಲರೇ. 1947ರ ಸೆಪ್ಟೆಂಬರ್ 25ರಂದು ಕಾಶ್ಮೀರದ ರಾಜ ಹರಿಸಿಂಗ್'ನನ್ನು ಒಪ್ಪಿಸಿ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವಲ್ಲಿ ಪಟೇಲರು ಯಶಸ್ವಿಯಾಗಿದ್ರು. 

Turning Point: Sorry ಸರ್ದಾರ್! ಉಕ್ಕಿನ ಮನುಷ್ಯನಿಗೆ ಪಟ್ಟ ತಪ್ಪಿಸಿದ್ದರಾ ಗಾಂಧೀಜಿ..?

ಸರ್ದಾರ್ ಪಟೇಲರು ಸತ್ತದ್ದು 1950ರಲ್ಲಿ, ತಮ್ಮ 75ನೇ ವಯಸ್ಸಲ್ಲಿ. ಸಾಯೋದಕ್ಕೆ ಒಂದು ತಿಂಗಳ ಮುನ್ನ, ಅಂದ್ರೆ 1950ರ  ನವೆಂಬರ್ 7ರಂದು ಪ್ರಧಾನಿ ನೆಹರು ಅವ್ರಿಗೆ ಸರ್ದಾರ್ ಪಟೇಲ್ ಪತ್ರವೊಂದನ್ನು ಬರೀತಾರೆ. ಆ ಪತ್ರದಲ್ಲಿ ಚೀನಾದಿಂದ ಎದುರಾಗಲಿರುವ ಅಪಾಯದ ಬಗ್ಗೆ ಎಚ್ಚರಿಸಿರ್ತಾರೆ. ಎಂಥದ್ದೇ ಪರಿಸ್ಥಿತಿಯನ್ನು ಎದುರಿಸಲು ಭಾರತ ಸಿದ್ಧವಾಗಿರ್ಬೇಕು ಅಂತ ಸಲಹೆ ಕೊಟ್ಟಿರ್ತಾರೆ. ಅದನ್ನು ನೆಹರೂ ಗಂಭೀರವಾಗಿ ತೆಗೆದುಕೊಂಡಿದ್ದರೆ, ಪರಿಸ್ಥಿತಿ ಬೇರೆಯದ್ದೇ ಆಗಿರ್ತಿತ್ತೇನೋ..? ಸರ್ದಾರ್ ಪಟೇಲರು ಮಾತ್ರ ತಮ್ಮ ಕೊನೇ ದಿನಗಳಲ್ಲೂ ದೇಶದ ಬಗ್ಗೆಯೇ ಚಿಂತಿಸಿದ್ರು. ಅವ್ರು ಸ್ವಾರ್ಥಿಯಾಗಿರ್ಲಿಲ್ಲ, ಅಧಿಕಾರ ಲಾಲಸಿಯಾಗಿರ್ಲಿಲ್ಲ. ನಾನು ಹೇಳಿದ್ದೇ ನಡೀಬೇಕು ಅನ್ನೋ ಹಠವಾದಿಯೂ ಆಗಿರ್ಲಿಲ್ಲ. ಅವರಿಗೆ ಮುಖ್ಯವಾಗಿದ್ದಿದ್ದು ದೇಶದ ಹಿತ ಮಾತ್ರ. 

Turning Point: ಶಾಸ್ತ್ರೀಜಿ ಮರಣದ ಬಳಿಕ ಪಟ್ಟಕ್ಕಾಗಿ ಅಂತರ್ಯುದ್ಧ! ಇಂದಿರಾ ಪಟ್ಟಾಭಿಷೇಕದ ಹಿಂದಿನ ರೋಚಕ ರಹಸ್ಯ!

ಭಾರತದ ಏಕೀಕರಣದ ರೂವಾರಿ, ಭಾರತ ರತ್ನ ಸರ್ದಾರ್ ಪಟೇಲರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗತ್ತೆ. ಅದು ದೇಶದ ಉಕ್ಕಿನ ಮನುಷ್ಯನಿಗೆ ಸಿಕ್ಕಿರೋ ಗೌರವ. ಇದಾಗಿತ್ತು ಇವತ್ತಿನ ಟರ್ನಿಂಗ್ ಪಾಯಿಂಟ್. 

Follow Us:
Download App:
  • android
  • ios