ನಿಜಾಮರ ಕಾಲದಿಂದ ಹೈದರಾಬಾದ್‌ನಲ್ಲಿ ನಡೆದು ಬಂದಿರುವ ಪ್ರಸಿದ್ಧ ಮೊಹರಂ ಮೆರವಣಿಗೆಯ ಆಲಂ ಹೊರಲು ಈ ಬಾರಿ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ ಹೆಸರಿನ ಆನೆಯನ್ನು ಬಳಸಲಾಗಿದೆ.
ಹೈದರಾಬಾದ್: ನಿಜಾಮರ ಕಾಲದಿಂದ ಹೈದರಾಬಾದ್‌ನಲ್ಲಿ ನಡೆದು ಬಂದಿರುವ ಪ್ರಸಿದ್ಧ ಮೊಹರಂ ಮೆರವಣಿಗೆಯ ಆಲಂ ಹೊರಲು ಈ ಬಾರಿ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ ಹೆಸರಿನ ಆನೆಯನ್ನು ಬಳಸಲಾಗಿದೆ.
ಲಕ್ಷ್ಮೀ, ತುಮಕೂರಿನ ಹೊರಕೋಟೆಯ ಶ್ರೀ ಕರಿಬಸವೇಶ್ವರ ಮಠದ ಆನೆಯಾಗಿದ್ದು, ಮೊಹರಂನ 10ನೇ ದಿನ ಚಿನ್ನ ಮತ್ತು ವಜ್ರಲೇಪಿತ ಆಲಂ ಹೊತ್ತು ಹೈದರಾಬಾದ್‌ನ ದಬ್ಬೀರ್‌ಪುರದ ಬಿಬಿ ಕಾ ಅಲಾವಾದಿಂದ ಇಲಾಹಿ ಮಸೀದಿವರೆಗೆ ಮೆರವಣಿಗೆಯಲ್ಲಿ ಸಾಗಲಿದೆ.
ಆನೆಯನ್ನು ತೆಲಂಗಾಣ ಸರ್ಕಾರ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷ ಜಂಟಿಯಾಗಿ ತುಮಕೂರಿನಿಂದ ಹೈದರಾಬಾದ್‌ಗೆ ಕರೆಸಿಕೊಂಡಿವೆ. ಈ ಆನೆ 5 ದಿನಗಳ ಕಾಲ ಹೈದರಾಬಾದ್‌ನಲ್ಲಿಯೇ ತಂಗಲಿದೆ. ಈ ವೇಳೆ ಪ್ರತಿ ದಿನ ಹಣ್ಣುಗಳು, ಕಬ್ಬು, ಕಾಳುಗಳು, ಅನ್ನ ಸೇರಿ 250 ಕೇಜಿ ಆಹಾರವನ್ನು ಕೊಡಲಾಗುತ್ತದೆ. ಈ ಹಿಂದೆ 2023ರಲ್ಲಿ ಮಾಧುರಿ 2024ರಲ್ಲಿ ರೂಪವತಿ ಎಂಬ ಆನೆಗಳು ಮೆರವಣಿಗೆಯಲ್ಲಿ ಸಾಗಿದ್ದವು.
ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷದ (human wildlife conflict) ಪ್ರಕರಣಗಳಲ್ಲಿ ಶೇ. 183ರಷ್ಟು ಭಾರೀ ಏರಿಕೆ
ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷದ (human wildlife conflict) ಪ್ರಕರಣಗಳಲ್ಲಿ ಶೇ. 183ರಷ್ಟು ಭಾರೀ ಏರಿಕೆ ಕಂಡಿರುವುದು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಆತಂಕದ ವಿಷಯವಾಗಿದೆ. 2019ರಲ್ಲಿ ನೂರಕ್ಕೂ ಕಡಿಮೆ ಘಟನೆಯಿಂದ ಆರಂಭವಾದ ಈ ಉಲ್ಬಣ 2024ರ ಅಂತ್ಯದ ವೇಳೆಗೆ ಸಾವಿರಾರು ಪ್ರಕರಣಗಳವರೆಗೆ ಏರಿಕೆ ಕಂಡಿದ್ದು, ವಿಶೇಷವಾಗಿ ದಕ್ಷಿಣ ಪಶ್ಚಿಮ ಘಟ್ಟಗಳ (southern Western Ghats) ಪ್ರದೇಶಗಳಲ್ಲಿ ಈ ಸಂಘರ್ಷ ಹೆಚ್ಚು ಸಂಭವಿಸುತ್ತಿದೆ.
ಇತ್ತೀಚೆಗೆ ‘ಇಂಡಿಯನ್ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್’ (Indian Society of Remote Sensing) ಜರ್ನಲ್‌ನಲ್ಲಿ ಪ್ರಕಟವಾದ "ದಕ್ಷಿಣ ಪಶ್ಚಿಮ ಘಟ್ಟಗಳಲ್ಲಿನ ಮಾನವ-ವನ್ಯಜೀವಿ ಸಂಘರ್ಷದ ತಾಣಗಳ ಭೌಗೋಳಿಕ ಗುರುತಿಸುವಿಕೆ" (‘Geospatial Identification of Human-Wildlife Conflict Hotspots in the Southern Western Ghats) ಎಂಬ ಅಧ್ಯಯನವು 2019 ರಿಂದ 2023ರ ಅವಧಿಯಲ್ಲಿ 34,000ಕ್ಕೂ ಹೆಚ್ಚು ಸಂಘರ್ಷ ಘಟನೆಗಳನ್ನು ಕರ್ನಾಟಕದಲ್ಲಿ ದಾಖಲಿಸಿದೆ. ಕರ್ನಾಟಕ ಹಾಗೂ ತೆಲಂಗಾಣದ ಹಲವು ಪ್ರಮುಖ ಸಂಸ್ಥೆಗಳ ತಜ್ಞರು ಈ ಸಂಶೋಧನೆ ನಡೆಸಿದ್ದು, ಭವಿಷ್ಯದ ನಿರ್ವಹಣಾ ತಂತ್ರಗಳಿಗೆ ಅಗತ್ಯವಾದ ದಿಕ್ಕು ಮತ್ತು ಆಳವಾದ ಒಳನೋಟಗಳನ್ನು ನೀಡಿದೆ.
ಆರ್ಥಿಕ ಪರಿಣಾಮ ಹಾಗೂ ಭಾಗಿಯಾದ ಪ್ರಭೇದಗಳು
ಈ ಅವಧಿಯಲ್ಲಿ ಸರ್ಕಾರವು ಬಲಿಪಶುಗಳಿಗೆ ಒಟ್ಟು ₹27 ಕೋಟಿ ಪರಿಹಾರ ಹಣ ವಿತರಿಸಿದೆ. ಅಧ್ಯಯನದ ಪ್ರಕಾರ, ಸಂಘರ್ಷಗಳಲ್ಲಿ 17 ಪ್ರಭೇದಗಳ ಪ್ರಾಣಿಗಳು ಭಾಗಿಯಾಗಿದ್ದು, ಶೇ. 98 ರಷ್ಟು ಪ್ರಕರಣಗಳು ಆನೆ, ಹುಲಿ ಹಾಗೂ ಚಿರತೆಗಳಿಂದ ಸಂಭವಿಸಿದ್ದವು. ಇತರ ಘಟನೆಗಳಲ್ಲಿ ಕಾಡುಹಂದಿ, ಗೌರ್, ಚುಕ್ಕೆ ಜಿಂಕೆ, ನವಿಲು ಮತ್ತು ಕರಡಿ ಮೊದಲಾದ ಪ್ರಾಣಿಗಳು ಭಾಗವಹಿಸಿದ್ದವು.
