ಮುಂಬವೈ(ಅ.10): ಟಿವಿ ವಾಹಿನಿಗಳ ಟಿಆರ್‌ಪಿ ರೇಟಿಂಗ್‌ನಲ್ಲಿ ಗೋಲ್‌ಮಾಲ್ ಸದ್ಯ ದೇಶಾದ್ಯಂತ ಭಾರೀ ಸದ್ದು ಮಾಡಿದೆ. ಆದರೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮುಂಬೈ ಪೊಲೀಸರು ತಮ್ಮ ವಿರುದ್ಧ ನಕಲಿ ಕೇಸ್ ದಾಖಲಿಸಿದೆ ಎಂದು ಆರೋಪಿಸಿದೆ. 

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರದ ಮೇಲೆ ನಡೆಸಿದ ದಾಳಿಯ ಬಗ್ಗೆ ರಿಪಬ್ಲಿಕ್ ಟಿವಿ ಚಾನಲ್ ಟಿಆರ್‌ಪಿ ದಂಧೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿತ್ತು. ಅಲ್ಲದೇ ಟಿಆರ್‌ಪಿ ದಂಧೆಯನ್ನು ಪತ್ತೆ ಹಚ್ಚಿದ ಮುಂಬೈ ಪೊಲೀಸರ ಕ್ರೈಂ ಬ್ರ್ಯಾಂಚ್  ಎರಡು ಮರಾಠಿ ಚಾನೆಲ್‌ಗಳ ಮಾಲೀಕರನ್ನು ಬಂಧಿಸಿರುವುದಾಗಿಯೂ ತಿಳಿಸಿದ್ದರು. 

ಆದರೆ, ರಿಪಬ್ಲಿಕ್‌ ಟಿವಿ ಈ ಆರೋಪವನ್ನು ನಿರಾಕರಿಸಿತ್ತು. ಸದ್ಯ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಿಪಬ್ಲಿಕ್ ಟಿವಿ, ಪ್ರಾಥಮಿಕ ತನಿಖೆಯನ್ನೂ ನಡೆಸದೆ ಪೊಲೀಸರು ಈ ನಕಲಿ ದೂರು ದಾಖಲಿಸಿದ್ದಾರೆ ಎಂದು ಉಲ್ಲೇಖಿಸಿದೆ. ಅಲ್ಲದೇ ಸುದ್ದಿ ವಾಹಿನಿ ಸಿಎಫ್‌ಒ ಪೊಲೀಸರಿಗೆ ಸದ್ಯ ಈ ವಿಚಾರ ಸಂಬಂಧ ತನಿಖೆ ತಡೆ ಹಿಡಿಯಿರಿ. ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದು, ಒಂದು ವಾರದಲ್ಲಿ ಈ ಬಗ್ಗೆ ತೀರ್ಪು ಬರಬಹುದೆಂದಿದ್ದಾರೆ.

ಟಿಆರ್‌ಪಿ ಅಂದ್ರೇನು?

ಟಿಆರ್‌‌ಪಿ ಯಾವ ಟಿವಿ ಕಾರ್ಯಕ್ರಮಗಳನ್ನು ಜನರು ಹೆಚ್ಚು ವೀಕ್ಷಿಸುತ್ತಾರೆ ಎಂಬುದನ್ನು ನಿರ್ಣಯಿಸುವ ಸಾಧನವಾಗಿದೆ ಮತ್ತು ನಿರ್ದಿಷ್ಟ ಚಾನಲ್‌ನ ವೀಕ್ಷಕರ ಆಯ್ಕೆ ಮತ್ತು ಜನಪ್ರಿಯತೆಯನ್ನು ಇದು ಸೂಚಿಸುತ್ತದೆ.