ಮುಂಬೈ(ಫೆ.14): ಅದೊಂದು ಕಾಲವಿತ್ತು. ಮಹಿಳೆಯರತು, ವೃದ್ಧರು, ಗರ್ಭಿಣಿ, ವಿಶೇಷ ಚೇತನರನ್ನು ಕಂಡರೆ, ಬಸ್ಸು ಹಾಗೂ ರೈಲುಗಳಲ್ಲಿ ತಾವಾಗಿಯೇ ಎದ್ದು ಸೀಟು ಬಿಟ್ಟುಕೊಡುವ ಸಂವೇದನೆ ನಮ್ಮ ಸಮಾಜಕ್ಕಿತ್ತು.

ಆದರೆ ಕಾಲ ಬದಲಾಗಿದೆ. ಆಧುನಿಕ ಜೀವನ ಶೈಲಿಯನ್ನೇನೋ ಅಳವಡಿಸಿಕೊಂಡಿರುವ ನಾವು, ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದ ಸಂವೇದನೆಯನ್ನೇ ಕಳೆದುಕೊಳ್ಳುತ್ತಿದ್ದೇವೆ.

ಇದಕ್ಕೆ ಪುಷ್ಠಿ ಎಂಬಂತೆ ರೈಲಿನಲ್ಲಿ ತನ್ನ ಹೆಂಡತಿ ಹಾಗೂ ಎರಡು ವರ್ಷದ ಮಗುವಿಗಾಗಿ ಸೀಟು ಕೇಳಿದ ವ್ಯಕ್ತಿಯೋರ್ವನನ್ನು ಸಹ ಪ್ರಯಾಣಿಕರು ಬಡಿದು ಕೊಂದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಮುಂಬೈ-ಲಾತೂರ್-ಬೀದರ್ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಸಾಗರ್ ಮಾರ್ಕಂಡ್ ಎಂಬ ವ್ಯಕ್ತಿ ತಮ್ಮ ಪತ್ನಿ ಜ್ಯೋತಿ ಹಾಗೂ ಎರಡು ವರ್ಷದ ಪುಟ್ಟ ಮಗಳೊಂದಿಗೆ ಸಂಚರಿಸುತ್ತಿದ್ದರು.

ಕಲ್ಯಾಣ್’ದಲ್ಲಿ ರೈಲು ಏರಿದ್ದ ಸಾಗರ್ ಮಾರ್ಕಂಡ್ ದಂಪತಿ, ಮೂರನೇ ದರ್ಜೆ ಬೋಗಿಯಲ್ಲಿ ಹೆಚ್ಚಿನ ಜನಸಂದಣಿ ಇದ್ದ ಪರಿಣಾಮ ಹೆಂಡತಿಗಾಗಿ ಸೀಟು ಬಿಟ್ಟು ಕೊಡುವಂತೆ ಕೆಲವು ಮಹಿಳೆಯರಲ್ಲಿ ಮನವಿ ಮಾಡಿದ್ದರು.

ರೈಲಿಗೆ ಸಿಲುಕಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು

ಆದರೆ ಇದರಿಂದ ಸಿಟ್ಟಿಗೆದ್ದಮಹಿಳೆಯರು ಸಾಗರ್ ಮಾರ್ಕಂಡ್’ನನ್ನು ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ಸಾಗರ್ ಕೂಡ ಮಾತಿಗೆ ಮಾತು ಬೆಳೆಸಿದಾಗ 12ಕ್ಕೂ ಹೆಚ್ಚು ಜನರು ಸೇರಿಕೊಂಡು ಸಾಗರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ರೈಲು ಕಲ್ಯಾಣ್’ದಿಂದ ದೌಂಡ್’ವರೆಗೆ ಬರುವವರೆಗೂ ಸಾಗರ್ ಮೇಲೆ ಹಲ್ಲೆ ನಡೆಸಲಾಗಿದ್ದು, ಪತ್ನಿ ಜ್ಯೋತಿ ಅವರ ಮನವಿಗೂ ಸ್ಪಂದಿಸದೇ ಸಾಗರ್’ನನ್ನು ಬಡಿದು ಕೊಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರೈಲ್ವೇ ಪೊಲೀಸ್ ಅಧೀಕ್ಷಕ ದೀಪಕ್ ಸತೋರೆ, ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಹಿಳೆಯರು ಹಾಗೂ ನಾಲ್ವರು ಪುರುಷರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.