ಟಿಪ್ಪು ಸುಲ್ತಾನ್ ಪಾಕಿಸ್ತಾನದ ಹೀರೋ ಎಂದು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಅಲ್ಲಿನ ಅಧಿವೇಶನ ಉದ್ದೇಶಿಸಿ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ. 

ನವದೆಹಲಿ :  ಭಾರತೀಯ ಯೋಧ ಅಭಿನಂದನ್‌ ಅವರ ಬಿಡುಗಡೆ ನಿರ್ಧಾರವನ್ನು ಸಂಸತ್ತಿನಲ್ಲಿ ಪ್ರಕಟಿಸಿದ ಪಾಕ್‌ ಪ್ರಧಾನಿ ಇಮ್ರಾನ್‌ಖಾನ್‌, ಇದೇ ವೇಳೆ ಮೈಸೂರು ಹುಲಿ ಟಿಪ್ಪು ಸುಲ್ತಾನನ್ನು ‘ನಮ್ಮ ನೆಲದ ಹೀರೋ’ ಎಂದು ಬಣ್ಣಿಸಿದ್ದಾರೆ.

ಇತ್ತ ಕರ್ನಾಟಕದಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರವೇ ಆಚರಿಸುತ್ತಿದ್ದು, ಈಗಾಗಲೇ ಇದು ವಿವಾದಕ್ಕೆ ಕಾರಣವಾಗಿದೆ. ಇದೀಗ ಬದ್ಧವೈರಿ ಪಾಕಿಸ್ತಾನದ ಪ್ರಧಾನಮಂತ್ರಿಯೇ ಟಿಪ್ಪುವನ್ನು ತನ್ನ ವೀರ ಎಂದು ನೀಡಿದ ಹೇಳಿಕೆಯಿಂದಾಗಿ ಮುಂದಿನ ಬಾರಿ ಟಿಪ್ಪು ಜಯಂತಿ ವೇಳೆ ಕರ್ನಾಟಕದಲ್ಲಿ ವಿವಾದ ತೀವ್ರಗೊಳ್ಳುವ ಸಾಧ್ಯತೆ ಇನ್ನಷ್ಟುಹೆಚ್ಚಾಗಿದೆ.

ನಮ್ಮ ಹೀರೋ: ಸಂಸತ್ತಿನ ಜಂಟಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಇಮ್ರಾನ್‌, ‘ಪಾಕಿಸ್ತಾನವು ಯುದ್ಧ ಸನ್ನಿವೇಶವನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನವನ್ನು ಪಾಕಿಸ್ತಾನದ ದೌರ್ಬಲ್ಯ ಎಂದು ಭಾವಿಸಬಾರದು. ಇತಿಹಾಸವನ್ನು ನೋಡಿದರೆ ನಮಗೆ ಇಬ್ಬರು ಬಾದ್‌ಶಾಗಳು ಕಾಣುತ್ತಾರೆ. ಒಂದು ಕಡೆ ಬಹದ್ದೂರ್‌ ಷಾ ಜಫರ್‌ (ಕೊನೆಯ ಮೊಘಲ್ ದೊರೆ) ಮತ್ತು ಇನ್ನೊಂದು ಕಡೆ ಟಿಪ್ಪುಸುಲ್ತಾನ್‌. ಯುದ್ಧ ಅಥವಾ ಗುಲಾಮಿತನದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸನ್ನಿವೇಶ ಎದುರಾದಾಗ ಬಹದ್ದೂರ್‌ ಷಾ ಜಫರ್‌ ಗುಲಾಮಿತನವನ್ನು ಆಯ್ದುಕೊಂಡರು. ಉಳಿದ ಜೀವನವನ್ನು ಗುಲಾಮನಾಗಿಯೇ ಕಳೆದರು. ಟಿಪ್ಪುಸುಲ್ತಾನ್‌ಗೂ ಕೂಡಾ ಇಂತಹದ್ದೊಂದು ಆಯ್ಕೆಯ ತೀರ್ಮಾನ ಕೈಗೊಳ್ಳಬೇಕಾದ ಸಮಯ ಬಂದಿತ್ತು. ಗುಲಾಮನಾಗಿ ಬದುಕು ಸವೆಸುವ ಅಥವಾ ಸ್ವತಂತ್ರನಾಗಿ, ಕೊನೆಯುಸಿರು ಇರುವ ತನಕ ಹೋರಾಡುವುದು ಇದರಲ್ಲಿ ಒಂದು ತೀರ್ಮಾನವನ್ನು ಟಿಪ್ಪುಸುಲ್ತಾನ್‌ ಕೈಗೊಳ್ಳಬೇಕಿತ್ತು. ಈ ವೇಳೆ ಯುದ್ಧ ಮಾಡಿದ ಟಿಪ್ಪುಸುಲ್ತಾನ್‌ ಈ ನೆಲದ ಹೀರೋ’ ಎಂದು ಇಮ್ರಾನ್‌ ಖಾನ್‌ ಸಾರಿದರು. ಮೇಜು ಕುಟ್ಟುವ ಮೂಲಕ ಪಾಕ್‌ ಸಂಸದರು ಇದಕ್ಕೆ ಬೆಂಬಲ ಸೂಚಿಸಿದರು.

ಯಾರನ್ನೇ ಕೂಡ ಗೋಡೆಯತ್ತ ತಳ್ಳಿ ಹಿಡಿದು ತೀರ್ಮಾನವೊಂದಕ್ಕೆ ಬರುವಂತೆ ಮಾಡಬಾರದು. ಇಂತಹ ಸಂದರ್ಭ ಎದುರಾದರೆ ಸ್ವತಂತ್ರವೇ ಆಯ್ಕೆ ಆಗಿರುತ್ತದೆ. ಗುಲಾಮಿತನವನ್ನು ಸ್ವೀಕರಿಸುವುದಿಲ್ಲ. ಪರಿಸ್ಥಿತಿಯನ್ನು ಇನ್ನಷ್ಟುಬಿಗಡಾಯಿಸುವ ಪ್ರಯತ್ನವನ್ನು ಭಾರತ ಮಾಡಬಾರದು. ನೀವು ಏನು ಮಾಡುತ್ತೀರೋ ಅದಕ್ಕೆ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದರು.

ಪಾಕಿಸ್ತಾನದವರು ಟಿಪ್ಪು ಗುಣಗಾನ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸಹ ಟಿಪ್ಪುಸುಲ್ತಾನ್‌ ಮಡಿದ ದಿನವಾದ ಮೇ 4ರಂದು, ಪಾಕ್‌ ಸರ್ಕಾರ ಟ್ವೀಟ್‌ ಮುಖಾಂತರ ಟಿಪ್ಪುಸುಲ್ತಾನ್‌ನನ್ನು ಸ್ಮರಿಸಿತ್ತು.